ಶಿವಕುಮಾರ ಕುಷ್ಟಗಿ
ಹೌದು, ಗದಗ ಜಿಲ್ಲೆ ನರಸಾಪುರದಲ್ಲಿ ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯ ಸ್ಥಾಪಿಸಿರುವ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ ಅರ್ಥಾತ್ ಜವಳಿ ಕಾಲೇಜು ಯುವಕರಿಗೆ ಇಂಥದೊಂದು ಗ್ಯಾರಂಟಿ ನೀಡುವ ಮೂಲಕ ಗಮನ ಸೆಳೆದಿದೆ.
ದೇಶಾದ್ಯಂತ ಕೇವಲ 11 ಇಂತಹ ಸಂಸ್ಥೆಗಳಿದ್ದು, ಅವುಗಳಲ್ಲಿ ಗದುಗಿನ ಈ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ 7ನೇಯದಾಗಿದೆ. ಅಂದರೆ ರಾಜ್ಯದ ಏಕೈಕ ಸಂಸ್ಥೆ ಇದು. ಇಡೀ ರಾಜ್ಯದಲ್ಲೇ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ರಾಷ್ಟ್ರಮಟ್ಟದ ಡಿಪ್ಲೊಮಾ ಶಿಕ್ಷಣ ನೀಡುವ ಏಕೈಕ ಸಂಸ್ಥೆ ಎನ್ನುವ ಹೆಗ್ಗಳಿಕೆ ಇದಕ್ಕಿದೆ.3 ದಶಕದಿಂದ ಸೇವೆ: ಕಳೆದ 3 ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಅಪರೂಪದ ತಾಂತ್ರಿಕ ಶಿಕ್ಷಣ ಸಂಸ್ಥೆಯು ಜಾಗತಿಕ ಜವಳಿ ಉದ್ಯಮಕ್ಕೆ ದಕ್ಷಿಣ ಭಾರತದಿಂದ ನುರಿತ ತಜ್ಞರನ್ನು ಪೂರೈಸುವ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ.
ತಾಂತ್ರಿಕ ಸೌಲಭ್ಯ: ಬೆಟಗೇರಿ ಸಮೀಪದ ನರಸಾಪುರದ 8.3 ಎಕರೆ ವಿಶಾಲ ಆವರಣದಲ್ಲಿರುವ ಈ ಸಂಸ್ಥೆಯು ಆಧುನಿಕತೆಯ ಸಂಗಮವಾಗಿದೆ. ಸಿಎಟಿಡಿ ಲ್ಯಾಬ್ ಹೊಂದಿದ್ದು, ಕಂಪ್ಯೂಟರ್ ನೆರವಿನಿಂದ ವಸ್ತ್ರ ವಿನ್ಯಾಸ ಮಾಡುವ ಈ ಲ್ಯಾಬ್ ವಿದ್ಯಾರ್ಥಿಗಳಿಗೆ ಸೃಜನಶೀಲ ವಿನ್ಯಾಸಕನಾಗಲು ತರಬೇತಿ ನೀಡುತ್ತದೆ.
ಶಿಷ್ಯವೇತನವೂ ಸಿಗುತ್ತದೆ: ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಹೊರೆಯಾಗಬಾರದು ಎಂಬ ಉದ್ದೇಶದಿಂದ, ಇಲ್ಲಿ ಪ್ರವೇಶ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತಿತಿಂಗಳು 2,500 ರು. ಶಿಷ್ಯವೇತನವನ್ನು ನೀಡಲಾಗುತ್ತದೆ. ಕರ್ನಾಟಕದ ಬೇರಾವ ತಾಂತ್ರಿಕ ಕಾಲೇಜಿನಲ್ಲೂ ಇಂತಹ ಸೌಲಭ್ಯ ಏಕಕಾಲಕ್ಕೆ ಎಲ್ಲರಿಗೂ ಸಿಗುವುದು ವಿರಳಾತಿ ವಿರಳವಾಗಿದೆ. ಆದರೆ ಇದನ್ನು ನಾವು ಕಲಿಯಬೇಕು ಎನ್ನುವ ಆಸಕ್ತಿ ವಿದ್ಯಾರ್ಥಿಗಳಿಗೆ ಇರಬೇಕು. ಇದರಿಂದ ಬದುಕು ಕಟ್ಟಿಕೊಳ್ಳಬಹುದು ಎನ್ನುವ ಭರವಸೆ ಪಾಲಕರಲ್ಲಿಯೂ ಬರಬೇಕಿದೆ.
ಹೆಗ್ಗಳಿಕೆ: ನಮ್ಮ ಕಾಲೇಜಿನಲ್ಲಿ ಓದಿದವರು ದೇಶದ ದೊಡ್ಡ ದೊಡ್ಡ ಗಾರ್ಮೆಂಟ್ಸ್, ರಫ್ತು ಸಂಸ್ಥೆಗಳು ಮತ್ತು ಟೆಕ್ಸ್‌ಟೈಲ್ ಪಾರ್ಕ್‌ಗಳಲ್ಲಿ ಗುಣಮಟ್ಟ ನಿಯಂತ್ರಕರು ಹಾಗೂ ಉತ್ಪಾದನಾ ವ್ಯವಸ್ಥಾಪಕರಾಗಿ ಲಕ್ಷಾಂತರ ರುಪಾಯಿ ವೇತನ ಪಡೆಯುತ್ತಿದ್ದಾರೆ. ಇದು ಕೇವಲ ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿಶೇಷತೆ ಹೊಂದಿದ ಕಾಲೇಜು ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ ಎಂದು ಪ್ರಾಚಾರ್ಯರಾದ ಸುಮಲತಾ ತಿಳಿಸಿದರು.ಸಂಪರ್ಕ: ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ, ಮೊ. 9916143619, ದೂ. 08372- 259664. ವೆಬ್‌ಸೈಟ್: kihtgadag.ac.in