ಕೊಪ್ಪಳ ಜಿಲ್ಲೆಯಲ್ಲಿ ಉದ್ಯೋಗಾವಕಾಶ ಹೆಚ್ಚಳ

KannadaprabhaNewsNetwork | Published : Mar 29, 2025 12:31 AM

ಸಾರಾಂಶ

ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳು ಹಣದ ಬೆಲೆ, ಕೆಲಸದ ಮಹತ್ವ ಅರಿತು ನಿರ್ದಿಷ್ಟ ಉದ್ಯೋಗದ ಗುರಿಯೊಂದಿಗೆ ಪರಿಶ್ರಮದಿಂದ ಅಧ್ಯಯನ ಮಾಡಬೇಕು. ಉದ್ಯೋಗ ಮಾಡುವ ಮನಸ್ಸಿದ್ದವರಿಗೆ ಶಿಕ್ಷಣ ಮತ್ತು ಹಣ ಪ್ರಮುಖ ಆಗುವುದಿಲ್ಲ.

ಗಂಗಾವತಿ:

ಭೌಗೋಳಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ, ಕೈಗಾರಿಕೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಪ್ರಗತಿಯತ್ತ ಸಾಗಿದ ಕೊಪ್ಪಳ ಜಿಲ್ಲೆಯಲ್ಲಿ ಯುವ ಜನಾಂಗಕ್ಕೆ ಸಾಕಷ್ಟು ಉದ್ಯೋಗವಕಾಶಗಳಿವೆ. ಕೆಲಸ ಯಾವುದಾದರೇನು ಮಾಡುವ ಛಲ ಇರಬೇಕೆಂದು ವಿದ್ಯಾನಿಕೇತನ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದರು.

ನಗರದಲ್ಲಿ ನಡೆಯುತ್ತಿರುವ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಗೋಷ್ಠಿಯಲ್ಲಿ ಕೊಪ್ಪಳ ಜಿಲ್ಲೆಯ ಉದ್ಯಮ ಹಾಗೂ ಉದ್ಯೋಗಾವಕಾಶ ವಿಷಯ ಕುರಿತು ಮಾತನಾಡಿದರು.

ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳು ಹಣದ ಬೆಲೆ, ಕೆಲಸದ ಮಹತ್ವ ಅರಿತು ನಿರ್ದಿಷ್ಟ ಉದ್ಯೋಗದ ಗುರಿಯೊಂದಿಗೆ ಪರಿಶ್ರಮದಿಂದ ಅಧ್ಯಯನ ಮಾಡಬೇಕು. ಉದ್ಯೋಗ ಮಾಡುವ ಮನಸ್ಸಿದ್ದವರಿಗೆ ಶಿಕ್ಷಣ ಮತ್ತು ಹಣ ಪ್ರಮುಖ ಆಗುವುದಿಲ್ಲ. ಉದ್ಯೋಗ ಸಣ್ಣದಿರಲಿ, ದೊಡ್ಡದಿರಲಿ ಕೀಳರಿಮೆ ಬಿಟ್ಟು ಮಾಡುವ ಛಲ, ಮನಸ್ಸು ಮತ್ತು ನೈಪುಣ್ಯತೆ ಇರಬೇಕು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ದೂರದೃಷ್ಟಿ ಇರಬೇಕು. ಅಂದಾಗ ಉದ್ಯೋಗವಕಾಶಗಳು ತಮ್ಮತ್ತ ಹುಡುಕಿ ಬರುತ್ತವೆ ಎಂದರು.

ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ, ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ-ಸವಾಲು-ಸಾಧ್ಯತೆ ಕುರಿತು ಮಾತನಾಡಿ, ಜಿಲ್ಲೆಯಲ್ಲಿನ ಎಲ್ಲ ಐತಿಹಾಸಿಕ, ಪ್ರಾಕೃತಿಕ, ಧಾರ್ಮಿಕ ತಾಣಗಳ ಸಮಗ್ರ ಅಭಿವೃದ್ಧಿಗೆ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮದಿಂದಲೇ ಶೇ. 30ರಷ್ಟು ಆದಾಯವಿದೆ. ಸಾಂಸ್ಕೃತಿಕ, ಕೃಷಿ ಉದ್ಯಮಕ್ಕೆ ಅವಕಾಶ ನೀಡಬೇಕು. ಮುಖ್ಯವಾಗಿ ಜಿಲ್ಲೆಯ ಎಲ್ಲ ಐತಿಹಾಸಿಕ ತಾಣ, ಧಾರ್ಮಿಕ ಪುಣ್ಯ ಕ್ಷೇತ್ರಗಳ ಅಭಿವೃದ್ಧಿ, ಹಂಪಿ ಪ್ರಾಧಿಕಾರ ಅಭಿವೃದ್ಧಿ ಮಾದರಿ ಕಿಷ್ಕಿಂದ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಶರಣಬಸಪ್ಪ ಬಾಚಲಾಪೂರ ಮಾತನಾಡಿ, ಜಿಲ್ಲೆಯ ಪ್ರವಾಸೋದ್ಯಮ ತಾಣಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಪ್ರವಾಸೋದ್ಯಮ ಬೆಳವಣಿಗೆಗೆ ಆದ್ಯತೆ ನೀಡಬೇಕು. ಸ್ಥಳೀಯ ಕೃಷಿ ಬೆಳೆಗಳಿಗೆ ಒತ್ತು, ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಬೆಳವಣಿಗೆ ಮೂಲಕ ಯುವಶಕ್ತಿಗೆ ಉದ್ಯೋಗವಕಾಶ ಲಭಿಸಬೇಕು ಎಂದರು.

ಪ್ರಾಚಾರ್ಯ ಶಿವಾನಂದ ಮೇಟಿ ಆಶಯ ನುಡಿ ವ್ಯಕ್ತಪಡಿಸಿದರು, ಅಯೋಧ್ಯಾ ಕ್ರಾಪ್ಸ್ ಅಕಾಡೆಮಿಯ ಡಾ. ಎಂ.ಬಿ. ಪಾಟೀಲ್, ಜಿಲ್ಲೆಯ ಕೃಷಿ ನೆಲೆಗಳ ಬಗ್ಗೆ ಉಪನ್ಯಾಸ ನೀಡಿದರು. ಉದ್ಯಮಿ ಜಿ. ಶ್ರೀಧರ ಕೇಸರಹಟ್ಟಿ, ಅಮರೇಶ ಗೋನಾಳ್, ಎಪಿಎಂಸಿ ಮಾಜಿ ಅಧ್ಯಕ್ಷ ಟಿ. ರಾಮಚಂದ್ರ, ಉಮೇಶ ಸಿಂಗನಾಳ್, ರೈತ ಮುಖಂಡ ಮರಿಯಪ್ಪ ಸಾಲೋಣಿ, ಉದ್ಯಮಿ ಪ್ರಭಾಕರ, ವಾಗೀಶಸ್ವಾಮಿ ಹಿರೇಮಠ, ಬಾಹುಬಲಿ, ಶರಣಬಸಪ್ಪ ಭತ್ತದ, ಶ್ರೀರಂಗಣ್ಣ ದರೋಜಿ, ಪಂಪಣ್ಣ ನಾಯಕ, ಪತ್ರಕರ್ತ ಪ್ರಸನ್ನ ದೇಸಾಯಿ, ಮಲ್ಲಿಕಾರ್ಜುನ ಕಡೂರು, ಬಸವರೆಡ್ಡಿ ಇದ್ದರು.

Share this article