ಮತ್ತೊಂದು ಸುತ್ತಿನ ಹೋರಾಟಕ್ಕೆ ಉದ್ಯೋಗಾಕಾಂಕ್ಷಿಗಳ ನಿರ್ಧಾರ

KannadaprabhaNewsNetwork |  
Published : Apr 07, 2026, 02:15 AM IST
ಪರೀಕ್ಷೆ | Kannada Prabha

ಸಾರಾಂಶ

ಫೆಬ್ರುವರಿಯಲ್ಲಿ ನಡೆಸಿದ ಹೋರಾಟದ ವೇಳೆ 56,434 ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದ ಬಳಿಕ ಹೋರಾಟವನ್ನು ಕೈಬಿಡಲಾಗಿತ್ತು. ಇದೀಗ ನೀಡಿದ ಭರವಸೆ ಈಡೇರಿಸಿಲ್ಲವೆಂದು ಆಕ್ರೋಶಗೊಂಡ ಸಂಘಟನೆಯ ಅಧ್ಯಕ್ಷ ಕಾಂತಕುಮಾರ ಏ.8ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.

ಧಾರವಾಡ:

ಖಾಲಿ ಇರುವ ಸರ್ಕಾರಿ ಹುದ್ದೆ ಭರ್ತಿ ಮಾಡಿಕೊಳ್ಳಬೇಕೆಂದು ಫೆಬ್ರುವರಿಯಲ್ಲಿ ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಏ.8ರಿಂದ ಮತ್ತೊಂದು ಹೋರಾಟಕ್ಕೆ ಅಣಿಯಾಗಿದೆ.

ಫೆಬ್ರುವರಿಯಲ್ಲಿ ನಡೆಸಿದ ಹೋರಾಟದ ವೇಳೆ 56,434 ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದ ಬಳಿಕ ಹೋರಾಟವನ್ನು ಕೈಬಿಡಲಾಗಿತ್ತು. ಇದೀಗ ನೀಡಿದ ಭರವಸೆ ಈಡೇರಿಸಿಲ್ಲವೆಂದು ಆಕ್ರೋಶಗೊಂಡ ಸಂಘಟನೆಯ ಅಧ್ಯಕ್ಷ ಕಾಂತಕುಮಾರ ಏ.8ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಘೋಷಿಸಿದ್ದಾರೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳು ಹಾಗೂ ಸರ್ಕಾರದ ನಡುವೆ ಹೋರಾಟಕ್ಕೆ ಮತ್ತೊಂದು ವೇದಿಕೆ ಸಿದ್ಧವಾಗಿದೆ.

ಸರ್ಕಾರ ವಿಫಲ:

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂತಕುಮಾರ, ರಾಜ್ಯ ಸರ್ಕಾರ ಖಾಲಿ ಹುದ್ದೆ ಭರ್ತಿ ಮಾಡುವಲ್ಲಿ ವಿಫಲವಾಗಿದ್ದು ಉದ್ಯೋಗಾಕಾಂಕ್ಷಿಗಳೊಂದಿಗೆ ಚೆಲ್ಲಾಟ ಮಾಡುತ್ತಿದೆ. ತಕ್ಷಣ ಹುದ್ದೆ ಭರ್ತಿಗೆ ಕ್ರಮಕೈಗೊಂಡು ಹಲವು ವರ್ಷಗಳಿಂದ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳ ಅನುಕೂಲ ಮಾಡಕೊಡಬೇಕೆಂದು ಒತ್ತಾಯಿಸಿದರು.

ಸಿಬಿಐಗೆ ನೀಡಿ:

ಇತ್ತೀಚೆಗೆ ನಡೆದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಭಾರೀ ಭ್ರಷ್ಟಾಚಾರವಾಗಿದ್ದು ತನಿಖೆ ನಡೆಸಲು ಸಿಬಿಐಗೆ ನೀಡಬೇಕು. ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಕಾಂತಕುಮಾರ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದರು.

ಉದ್ಯೋಗ ಸಿಗುತ್ತಿಲ್ಲ:

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯಲು ರಾಜ್ಯದ ನಾನಾ ಮೂಲೆಗಳಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಧಾರವಾಡಕ್ಕೆ ಬಂದಿದ್ದಾರೆ. ಆದರೆ, ತರಬೇತಿ ಪಡೆದ ಬಳಿಕ ಸರ್ಕಾರ ಹುದ್ದೆ ಭರ್ತಿಗೆ ಮುಂದಾಗದೆ ಇರುವುದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುದ್ದೆ ಭರ್ತಿ ಮಾಡುವಂತೆ ಧಾರವಾಡದಲ್ಲಿ ಹೋರಾಟ ನಡೆದ ಬಳಿಕ ಫೆಬ್ರುವರಿಯಲ್ಲಿ 56,434 ಹುದ್ದೆ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಆದರೆ, ಈ ವರೆಗೆ ಕ್ರಮಕೈಗೊಂಡಿಲ್ಲ. ಹೀಗಾಗಿ ಸಂಘಟನೆ ನೇತೃತ್ವದಲ್ಲಿ ಮತ್ತೊಂದು ಹೋರಾಟಕ್ಕೆ ನಿರ್ಧರಿಸಿದ್ದೇವೆ ಎಂದರು.

ನಗರದ ಕೋಚಿಂಗ್ ಸೆಂಟರ್, ಗ್ರಂಥಾಲಯ, ಪಿಜಿಗಳಲ್ಲಿ ಓದುತ್ತಿರುವ ಉದ್ಯೋಗಾಕಾಂಕ್ಷಿಗಳು ಧರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ಬೇಡಿಕೆ ಈಡೇರುವ ವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐದು ವರ್ಷವಾದರೂ ಮುಗಿಯದ ರಸ್ತೆ ಕಾಮಗಾರಿ
ನಿರ್ಮಾಣ ಕಾಮಗಾರಿಗೆ ಮರಳಿಲ್ಲದೆ ಪರದಾಟ