ಕನ್ನಡಪ್ರಭ ವಾರ್ತೆ ಜೇವರ್ಗಿ
ಶ್ರೇಷ್ಠ ವಚನಕಾರ, ಚರಚಕ್ರವರ್ತಿ ಶ್ರೀ ಷಣ್ಮುಖ ಶಿವಯೋಗಿಗಳು 12 ವರ್ಷ ಈ ನೆಲದಲ್ಲಿ ತಪ್ಪಸ್ಸು ಮಾಡಿದ್ದಾರೆ. ಇಂತಹ ಪೂಣ್ಯ ಭೂಮಿ ಇದಾಗಿದ್ದು, ಅವರ ಸ್ಮಾರಕ ಜೋಗಿ ಕೊಳ್ಳದಲ್ಲಿದೆ. ಈ ಪ್ರದೇಶದಲ್ಲಿ ಷಣ್ಮುಖ ಶಿವಯೋಗಿಗಳ ಯಾತ್ರಿ ನಿವಾಸ, ಸೇರಿದಂತೆ ವಚನ ಗ್ರಂಥಾಲಯ, ದೇವಸ್ಥಾನವನ್ನು ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಬಸವಕಲ್ಯಾಣದ ವಿಶ್ವಸ್ಥ ಮಂಡಳಿ ಅನುಭವ ಮಂಟಪದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.ಅವರು ಸೋಮವಾರ ತಾಲೂಕಿನ ಕೋಳಕೂರ ಗ್ರಾಮದ ಜೋಗಿ ಕೊಳ್ಳದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಷಣ್ಮುಖ ಶಿವಯೋಗಿ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶ್ರೀ ಷಣ್ಮುಖ ಶಿವಯೋಗಿಗಳ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
17ನೇ ಶತಮಾನದ ಶ್ರೇಷ್ಠ ವಚನಕಾರ, ಚರಚಕ್ರವರ್ತಿ ಶ್ರೀ ಷಣ್ಮುಖ ಶಿವಯೋಗಿಗಳ ತಪೋಭೂಮಿ ಜೋಗಿಕೊಳ್ಳದಲ್ಲಿ ಯಾತ್ರಿ ನಿವಾಸ ನಿರ್ಮಿಸಬೇಕು ಮತ್ತು ತಪೋಭೂಮಿಯನ್ನು ರಾಜ್ಯ ಸರ್ಕಾರ ಅಭಿವೃದ್ಧಿ ಪಡಿಸಬೇಕು. ವರ್ಷಕ್ಕೆ ಒಂದು ದಿನ ತಪಭೂಮಿಯಲ್ಲಿ ಕಾರ್ಯಕ್ರಮ ಮಾಡಿದ್ದರೆ ಸಾಲದು ಈ ಸ್ಥಳದಲ್ಲಿ ಸ್ವರ್ಗ ನಿರ್ಮಾಣ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಬಸವಣ್ಣನವರೆ ಇಷ್ಟಲಿಂಗ ನೀಡಿದ್ದು ಎಂದು ಶ್ರೀ ಷಣ್ಮುಖ ಶಿವಯೋಗಿಗಳು ತಮ್ಮ ವಚನ ಸಾರದಲ್ಲಿ ಹೇಳಿದ ಮಹಾನ ಶರಣ ಎಂದು ಬಣ್ಣಿಸಿದರು.ಬಸವಕಲ್ಯಾಣದಲ್ಲಿ ಕ್ರಾಂತಿ ಯಾಯಿತು. ಅಂತಹ ಸಂದರ್ಭದಲ್ಲಿ ತ್ಯಾಗ, ಬಲಿದಾನವಾಯಿತು. ಆದರೆ ಈಗ ಆ ಸ್ಥಳದಲ್ಲಿ 600 ಕೋಟಿ ವೆಚ್ಚದಲ್ಲಿ ಬೃಹತ್ ವಚನ ಭವನ ನಿರ್ಮಾಣವಾಗುತ್ತಿದೆ. ತ್ಯಾಗ ಬಲಿದಾನ ವ್ಯರ್ಥ ಯಾವತ್ತು ಆಗುವುದಿಲ್ಲ. ನಿಮ್ಮ ಜೋತೆ ನಾನು ಬರುತ್ತೆನೆ. ಶಾಸಕರು, ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ಬಳಿ ಹೋಗಿ ಶ್ರೀ ಷಣ್ಮುಖ ಶಿವಯೋಗಿಗಳ ತಪೋಭೂಮಿ ಅಭಿವೃದ್ಧಿಗೆ ನಾವು ನಿವೆಲ್ಲರು ಕೂಡಿ ಕೈಜೋಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಬಸವಪಟ್ಟಣದ ಮರೇಪ್ಪ ಮುತ್ಯಾ, ಕೋಳಕೂರ ಹಿರೇಮಠದ ಪೀಠಾಧಿಪತಿ ಶ್ರೀ ಕೆಂಚಬಸವ ಶಿವಾಚಾರ್ಯರು, ಬಿಜೆಪಿ ಮುಖಂಡ ಗಿರೀಶ ಪಾಟೀಲ್ ರದ್ದೇವಾಡಗಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ವಡ್ಡನಗೇರಿ, ಶ್ರೀ ಸಿದ್ಧಬಸವೇಶ್ವರರ ಟ್ರಸ್ಟ್ ಕಮಿಟಿ ಅಧ್ಯಕ್ಷ ನೀಲಕಂಠರಾಯಗೌಡ ಪಾಟೀಲ್, ಸಂಶೋಧಕ ಡಾ.ಬಿ.ನಂಜುಂಡ ಸ್ವಾಮಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಗೌಡ ಪಾಟೀಲ್ ಕೋಳಕೂರ ಸೇರಿ ಹಲವರಿದ್ದರು.