ಗದಗ: ದೇಶದ ನಿಜವಾದ ಆಸ್ತಿ ಎಂದರೆ ಈಗಿನ ಯುವಕರು, ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ದುಶ್ಚಟಗಳಿಂದ ದೂರವಿದ್ದು, ವ್ಯಸನಮುಕ್ತ ಸಮಾಜ ಹಾಗೂ ನಶಾಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದರು.
ಉಪನ್ಯಾಸಕ ಕೆ.ಎಚ್. ಪಾಟೀಲ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನೋವಿಜ್ಞಾನ ಸಹ ಪ್ರಾಧ್ಯಾಪಕ ಡಾ. ಫಕೀರಪ್ಪ ಗಾಣಿಗೇರ ಮಾತನಾಡಿ, ಮಾದಕ ದ್ರವ್ಯ ವ್ಯಸನ ದುಶ್ಚಟವಲ್ಲ, ಅದೊಂದು ಮೆದುಳಿನ ಕಾಯಿಲೆ ಎಂದು ಹೇಳಿದರು. ದೇಶದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ವ್ಯಸನದ ಭೀಕರತೆ ಹಾಗೂ ಅದರ ಹಿಂದಿನ ವೈಜ್ಞಾನಿಕ ಕಾರಣಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಆರ್.ಆರ್. ಕುಲಕರ್ಣಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ರಾಜ್ಯ ಪ್ರಶಸ್ತಿ ವಿಜೇತ ಜನಪದ ಕಲಾವಿದ ವೀರಣ್ಣ ಅಂಗಡಿ ದುಶ್ಚಟಗಳ ದುಷ್ಪರಿಣಾಮಗಳ ಕುರಿತು ಸ್ವರಚಿತ ಗೀತೆ ಪ್ರಸ್ತುತ ಪಡಿಸಿದರು. ಆದರ್ಶ ಶಿಕ್ಷಣ ಸಮಿತಿಯ ಕಾಲೇಜು ವಿದ್ಯಾರ್ಥಿಗಳಿಂದ ವ್ಯಸನಮುಕ್ತ ದಿನಾಚರಣೆಯ ಕುರಿತು ಕಿರುನಾಟಕ ಪ್ರದರ್ಶನ ನಡೆಯಿತು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಆದರ್ಶ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎ.ಡಿ. ಗೋಡಕಿಂಡಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಬಿ. ಮಡ್ಲೂರ, ಪಿಎಸ್‌ಐ ಲಕ್ಷ್ಮಣ ಅರಿ, ಪ್ರಾಧ್ಯಾಪಕ ಬಾಹುಬಲಿ ಜೈನರ ಇದ್ದರು.