ಜಿಲ್ಲಾ ಹಾಲು ಒಕ್ಕೂಟದ ಅಭಿವೃದ್ಧಿಗೆ ಕೈ ಜೋಡಿಸಿ: ಸಿ.ಶಿವಕುಮಾರ್

KannadaprabhaNewsNetwork |  
Published : Sep 03, 2025, 01:00 AM IST
2ಕೆಎಂಎನ್ ಡಿ13 | Kannada Prabha

ಸಾರಾಂಶ

ಪ್ರತಿಯೊಬ್ಬ ರೈತರು ರಾಸುಗಳಿಗೆ ತಪ್ಪದೇ ವಿಮೆ ಮಾಡಿಸಬೇಕು. ಇಲ್ಲದಿದ್ದರೆ ರಾಸುಗಳು ಮರಣ ಹೊಂದಿದಾಗ ರೈತರಿಗೆ ಯಾವುದೇ ಹಣ ದೊರೆಯುವುದಿಲ್ಲ. ಮನ್ಮುಲ್ ವತಿಯಿಂದ ರಾಸುಗಳ ವಿಮೆ ಅಭಿಯಾನ ಆರಂಭಿಸಲಾಗುತ್ತಿದೆ. ರೈತರು ತಪ್ಪದೇ ಕಡ್ಡಾಯವಾಗಿ ವಿಮೆ ಮಾಡಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ರೈತರು ಗುಣಮಟ್ಟದ ಹಾಲನ್ನು ಡೇರಿಗೆ ಸರಬರಾಜು ಮಾಡುವ ಮೂಲಕ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಹೇಳಿದರು.

ತಾಲೂಕಿನ ಚಿಕ್ಕಮರಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿ, ಈ ಹಿಂದೆ 9 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದ ಮನ್ಮುಲ್ ಗೆ ಈಗ 13 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತಿದೆ ಎಂದರು.

6 ರಿಂದ 7 ಲಕ್ಷವರೆಗಿನ ಹಾಲನ್ನು ಪ್ಯಾಕೆಟ್ ಹಾಲು, ಬೆಣ್ಣೆ, ಮೊಸರು ಹಾಗೂ ನಂದಿನಿ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತಿದೆ. ಉಳಿಕೆ ಹಾಲನ್ನು ಹಾಲಿನ ಪೌಡರ್ ತಯಾರಿಕೆಗೆ ಬಳಸುತ್ತಿದೆ. ಇದರಿಂದ ಲಾಭಕ್ಕಿಂತ ಹೆಚ್ಚು ನಷ್ಟವಾಗುತ್ತಿದೆ. ಹೀಗಾಗಿ ಹೆಚ್ಚುವರಿ ಹಾಲನ್ನು ದೆಹಲಿಗೆ ರಪ್ತು ಮಾಡಲಾಗುತ್ತಿದೆ. ಚಿಕ್ಕಮರಳಿ ಡೇರಿ ಹಾಲು ಕೂಡ ದೆಹಲಿಗೆ ರಪ್ತಾಗುತ್ತಿದೆ. ಆದ್ದರಿಂದ ಗುಣಮಟ್ಟದ ಹಾಲು ಸರಬರಾಜು ಮಾಡಬೇಕು ಎಂದರು.

ಪ್ರತಿಯೊಬ್ಬ ರೈತರು ರಾಸುಗಳಿಗೆ ತಪ್ಪದೇ ವಿಮೆ ಮಾಡಿಸಬೇಕು. ಇಲ್ಲದಿದ್ದರೆ ರಾಸುಗಳು ಮರಣ ಹೊಂದಿದಾಗ ರೈತರಿಗೆ ಯಾವುದೇ ಹಣ ದೊರೆಯುವುದಿಲ್ಲ. ಮನ್ಮುಲ್ ವತಿಯಿಂದ ರಾಸುಗಳ ವಿಮೆ ಅಭಿಯಾನ ಆರಂಭಿಸಲಾಗುತ್ತಿದೆ. ರೈತರು ತಪ್ಪದೇ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದು ಕರೆ ನೀಡಿದರು.

ಡೇರಿಗೆ ಹಾಲು ಸರಬರಾಜು ಮಾಡುವ ರೈತರಿಗೆ ಕೊಬ್ಬಿನಾಂಶ (ಪ್ಯಾಟ್) ಆಧಾರದ ಮೇರೆಗೆ ಹಾಲಿನ ದರ ನಿಗದಿ ಮಾಡಲಾಗುತ್ತದೆ. ರೈತರು ಮನ್ಮುಲ್‌ನ ಫೀಡ್ಸ್ ಗಳನ್ನೇ ಖರೀದಿಸಿ ರಾಸುಗಳಿಗೆ ವಿತರಿಸಬೇಕು. ಮೇವು ಕತ್ತರಿಸುವ ಯಂತ್ರ, ಹಾಲು ಕರೆಯುವ ಯಂತ್ರ ಹಾಗೂ ಮ್ಯಾಟ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಇದೇ ವೇಳೆ ಡೇರಿಗೆ ಅತಿ ಹೆಚ್ಚು ಹಾಲು ಸರಬರಾಜು ಮೂವರು ಷೇರುದಾರ ರೈತರಿಗೆ ಗೌರಮ್ಮ ಚನ್ನೇಗೌಡ, ರಾಮಚಂದ್ರ ರಾಮಲಿಂಗೇಗೌಡ ಹಾಗೂ ರಾಧಮ್ಮ ರಾಮಾಚಾರಿ ಅವರಿಗೆ ಬಹುಮಾನ ನೀಡಲಾಯಿತು.

ಈ ವೇಳೆ ಡೇರಿ ಅಧ್ಯಕ್ಷ ಲಕ್ಷ್ಮಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಪಿ.ರಮೇಶ್, ಸಿ.ಪಿ.ಮಹದೇವು, ಕೆ.ಚನ್ನಯ್ಯ, ಸಿ.ಪ್ರಕಾಶ್, ಸಿ.ರಾಜಶೇಖರ್, ಸಿ.ಎನ್.ಉಮೇಶ್, ಸೌಭಾಗ್ಯಮ್ಮ, ಸಿ.ಎನ್.ಪುಷ್ಪಾ, ಸಿ.ಬಿ.ಕೃಷ್ಣೇಗೌಡ, ಪಿಎಸ್ ಎಸ್ ಕೆ ಮಾಜಿ ನಿರ್ದೇಶಕ ಸಿ.ಸ್ವಾಮಿಗೌಡ, ಮಾರ್ಗ ವಿಸ್ತರಣಾಧಿಕಾರಿ ಎನ್.ಎನ್.ಜಗದೀಶ್, ಡೇರಿ ಕಾರ್ಯದರ್ಶಿ ಪುನಿತ್ ಕುಮಾರ್, ಹಾಲು ಪರೀಕ್ಷಕ ಸಿ.ಟಿ.ಬೋರೇಗೌಡ ಇತರರಿದ್ದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ