ಯಲಬುರ್ಗಾ: ಪಟ್ಟಣದ ಶ್ರೀಬೀರಲಿಂಗೇಶ್ವರ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜಾತ್ರಾಮಹೋತ್ಸವ ಆಚರಿಸಲಾಗುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರೆ ಯಶಸ್ವಿಗೆ ಕೈಜೋಡಿಸಬೇಕು ಎಂದು ಜಾತ್ರಾ ಸಮಿತಿ ಅಧ್ಯಕ್ಷ ರೇವಣಪ್ಪ ಹಿರೇಕುರಬರ ಹೇಳಿದರು.
ಫೆ. ೧೩ರಿಂದ ೧೫ರ ವರೆಗೆ ಮೂರು ದಿನಗಳ ಕಾಲ ಜಾತ್ರೆ ನಡೆಯಲಿದೆ. ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹ, ಮಹಾಪ್ರಸಾದ, ದೇವರ ಮೂರ್ತಿಗೆ ವಿಶೇಷ ರುದ್ರಾಭಿಷೇಕ, ಪಲ್ಲಕ್ಕಿ ಮೆರವಣಿಗೆ, ನಾಟಕ ಪ್ರದರ್ಶನ, ಟಗರಿನ ಕಾಳಗ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಮಠಾಧೀಶರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಜಾತ್ರಾ ಸಮಿತಿ ಉಪಾಧ್ಯಕ್ಷ ಬಾಲಚಂದ್ರ ಸಾಲಭಾವಿ ಮಾತನಾಡಿ, ಬೀರಲಿಂಗೇಶ್ವರ ದೇವಸ್ಥಾನ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ವರ್ಷ ಅತ್ಯಂತ ಅದ್ಧೂರಿ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಪ್ರತಿಯೊಬ್ಬರು ಕಾರ್ಯಕ್ರಮ ಯಶಸ್ಸಿಗೆ ಕೈ ಜೋಡಿಸಬೇಕು ಎಂದರು.ಈ ವೇಳೆ ಯಲ್ಲಪ್ಪ ಹೊಸಮನಿ, ಸಾವಿತ್ರಿ ಗೊಲ್ಲರ್, ಶಾರದಾ ಸಾಲಭಾವಿ, ದೊಡ್ಡಯ್ಯ ಗುರುವಿನ್, ಹನುಮಂತಪ್ಪ ರಾಜೂರು, ಹನುಮಾಪುರು, ಶಿವು ರಾಜೂರು, ಮಂಜುನಾಥ ಕುರಿ, ಸಿದ್ದಪ್ಪ ದಂಡಿನ್, ಶರಣಪ್ಪ ಉಳ್ಳಾಗಡ್ಡಿ, ಈರಪ್ಪ ಹೊಸಳ್ಳಿ, ರಮೇಶ ದಂಡಿನ, ಬೀರಪ್ಪ, ನಾಗರಾಜ ಹಿರೇಕುರುಬರ ಸೇರಿದಂತೆ ಮತ್ತಿತರರು ಇದ್ದರು.