''''ಪ್ಲಾಸ್ಟಿಕ್ ಮುಕ್ತ ಸುರಪುರ'''' ಜಾಗೃತಿ ಕಾರ್ಯಕ್ರಮದಲ್ಲಿ ಯಮನಪ್ಪ ಬಮ್ಮಣಗಿ ಕರೆ
----
ಕನ್ನಡಪ್ರಭ ವಾರ್ತೆ ಸುರಪುರ
ಪ್ಲಾಸ್ಟಿಕ್ ನೂರಾರು ವರ್ಷಗಳವರೆಗೆ ಕೊಳೆಯದೆ ಪರಿಸರ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡುವುದರಿಂದ ನಗರಸಭೆಯ ನಿಯಮಗಳನ್ನು ಪಾಲಿಸಿ ಸ್ವಚ್ಛ ಹಾಗೂ ಪ್ಲಾಸ್ಟಿಕ್ ಮುಕ್ತ ಸುರಪುರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಕರೆ ನೀಡಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆ, ನಗರಸಭೆ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಎಲ್ಲಾ ಗ್ರಾಮ ಪಂಚಾಯಿತಿಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ''''ಪ್ಲಾಸ್ಟಿಕ್ ಮುಕ್ತ ಸುರಪುರ ಅಭಿಯಾನ'''' ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರಸಭೆ ವ್ಯಾಪ್ತಿಯಲ್ಲಿ ಸಿಂಗಲ್ ಯೂಸ್ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ವ್ಯಾಪಾರಿಗಳಿಗೆ ಒಂದು ವಾರದ ಗಡುವು ನೀಡಲಾಗಿದೆ. ಬಳಿಕ ತಪಾಸಣೆ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಬಳಕೆ, ಸಂಗ್ರಹಣೆ, ಮಾರಾಟ ಅಥವಾ ವಿತರಣೆ ಪತ್ತೆಯಾದರೆ ಟ್ರೇಡ್ ಲೈಸೆನ್ಸ್ ರದ್ದುಪಡಿಸುವುದರೊಂದಿಗೆ ಮೊದಲ ಬಾರಿಗೆ ₹10 ಸಾವಿರ ದಂಡ ವಿಧಿಸಲಾಗುವುದು. ಎಚ್ಚರಿಕೆ ನೀಡಿದ ಬಳಿಕವೂ ನಿಯಮ ಉಲ್ಲಂಘಿಸಿದರೆ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳು ಪತ್ತೆಯಾದ ಪ್ರಮಾಣದ ಆಧಾರದ ಮೇಲೆ 1 ಕೆ.ಜಿ.ವರೆಗೆ ₹500, 1ರಿಂದ 10 ಕೆ.ಜಿ.ವರೆಗೆ ₹5 ಸಾವಿರ, 10ರಿಂದ 100 ಕೆ.ಜಿ.ವರೆಗೆ ₹10 ಸಾವಿರ ಹಾಗೂ 100 ಕೆ.ಜಿ.ಗಿಂತ ಹೆಚ್ಚಿನ ಪ್ರಮಾಣಕ್ಕೆ ₹20 ಸಾವಿರ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ, ನಗರಸಭೆ ಪೌರಾಯುಕ್ತ ಬಸವರಾಜ ಟಣಕೇದಾರ, ಹಿರಿಯ ಸಿವಿಲ್ ನ್ಯಾಯಾಧೀಶೆ ಫಕೀರವ್ವ ಕೇಳಗೇರಿ, ದಿವಾಣಿ ನ್ಯಾಯಾಧೀಶೆ ಕೆ.ಎಂ. ಪಾಟೀಲ್, ನಗರಸಭೆ ಇನ್ಸ್‌ಪೆಕ್ಟರ್ ಶಿವಪುತ್ರ, ಸರ್ಕಾರಿ ಆಸ್ಪತ್ರೆಯ ಮುಖ್ಯ ಅಧೀಕ್ಷಕ ಮರೆಪ್ಪ ನಾಯಕ ಗುಡ್ಡಾಕಾಯಿ, ಬಿಇಒ ನಿಂಗಮ್ಮ ನಾಯ್ಕೋಡಿ, ಪಿಎಸ್ಐ ಕೃಷ್ಣ ಸುಬೇದಾರ್, ಪಿಎಸ್ಐ ಸಿದ್ದಣ್ಣ ಯಡ್ರಾಮಿ, ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ, ಶಿರೇಸ್ತದಾರ್ ರಮೇಶ ಕೋಳಿ, ಬಲಭೀಮನಾಯಕ ದೇವಾಪುರ, ಗೃಹರಕ್ಷಕ ದಳದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಶಾಲಾ ಮಕ್ಕಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
------
....ಬಾಕ್ಸ್......
ಪ್ಲಾಸ್ಟಿಕ್ ಮುಕ್ತ ಸುರಪುರಕ್ಕೆ ಜಾಗೃತಿ ಜಾಥಾ
ಅಭಿಯಾನದ ಅಂಗವಾಗಿ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಆರಂಭವಾದ ಜಾಗೃತಿ ಜಾಥಾ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ದರ್ಬಾರ್ ರಸ್ತೆ, ವಸಂತ ಮಹಲ್ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದವರೆಗೆ ನಡೆಯಿತು. ಜಾಥಾದಲ್ಲಿ ಅಧಿಕಾರಿಗಳು, ಸಿಬ್ಬಂದಿ, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ತ್ಯಜಿಸುವಂತೆ ಹಾಗೂ ಬಟ್ಟೆ ಚೀಲಗಳ ಬಳಕೆಯ ಕುರಿತು ಜಾಗೃತಿ ಮೂಡಿಸಿದರು.
--------
ಫೋಟೋ: ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ನಡೆದ ''''ಪ್ಲಾಸ್ಟಿಕ್ ಮುಕ್ತ ಸುರಪುರ'''' ಜಾಗೃತಿ ಕಾರ್ಯಕ್ರಮಕ್ಕೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಚಾಲನೆ ನೀಡಿದರು. ನಗರಸಭೆ ಪೌರಾಯುಕ್ತ ಬಸವರಾಜ ಟಣಕೇದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.