ಕನ್ನಡಪ್ರಭ ವಾರ್ತೆ ಗುರುಮಠಕಲ್
ತಂಬಾಕು ಸೇವನೆಯಿಂದ ಕ್ಯಾನ್ಸರ್ ಸೇರಿ ಹೃದಯ ಸಂಬಂಧಿ ಕಾಯಿಲೆ ಆವರಿಸಿಕೊಳ್ಳಲಿದ್ದು, ಪತ್ರಿಯೊಬ್ಬರೂ ತಂಬಾಕು ಸೇವನೆ ತ್ಯಜಿಸುವುದರ ಜೊತೆಗೆ ತಂಬಾಕು ಮುಕ್ತ ಪರಿಸರ ನಿರ್ಮಾಣಕೈಜೋಡಿಸುವಂತೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಚಾಲಕ ಭೀಮಣ್ಣ ಬಿ. ವಡವಟ್ ಹೇಳಿದರು.ಸಮೀಪದ ಸೈದಾಪುರ ಪಟ್ಟಣದ ವಿದ್ಯಾವರ್ಧಕ ಪ್ರೌಢ ಶಾಲೆ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ನಡೆದ ವಿಶ್ವ ತಂಬಾಕು ರಹಿತ ದಿನದ ಜಾಗೃತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಇಂದಿನ ಯುವಕರು, ವಿದ್ಯಾರ್ಥಿಗಳು ಸೇರಿ ಅನೇಕರು ಕ್ಷಣಿಕ ಸುಖದ ಭ್ರಮೆಯಲ್ಲಿ ಮಾದಕ ವಸ್ತುಗಳಿಗೆ ದಾಸರಾಗಿ ತಮಗೆ ಅರಿವಿಲ್ಲದಂತೆ ತಮ್ಮ ಬದುಕನ್ನು ನಾಶ ಮಾಡಿಕೊಳ್ಳುತ್ತಿರುವುದು ಸಾಮಾಜಿಕ ದುರುಂತದೆ ಎಂದು ವಿಷಾದ ವ್ಯಕ್ತಪಡಿಸಿದರು.ತಂಬಾಕು ಸೇವನೆ ಹೃದಯ ಮತ್ತು ಶ್ವಾಸಕೋಶಕ್ಕೆ ತೊಂದರೆ ಕೊಡುವುದರಿಂದ ಸಾವು ಸಂಭವಿಸುತ್ತದೆ. ತಂಬಾಕು ಸೇವನೆಯಿಂದ ದೇಹದ ಪ್ರತಿ ಜೀವಕೋಶದ ಮೇಲೂ ದುಷ್ಪರಿಣಾಮ ಬೀರುತ್ತದೆ. ವಿಶ್ವದಾದ್ಯಂತ ಪ್ರತಿ ವರ್ಷ 5.4 ಮಿಲಿಯನ್ ಜನರು ತಂಬಾಕು ಸೇವನೆಯಿಂದ ಮೃತರಾಗುತ್ತಿದ್ದಾರೆ. ಅದರಲ್ಲಿ ನಮ್ಮ ಭಾರತ ದೇಶದಲ್ಲಿ ಶೇ.50ರಷ್ಟು ರೋಗಗಳು ತಂಬಾಕು ಸೇವನೆಯಿಂದ ಬರುತ್ತಿರುವುದು ಅತ್ಯಂತ ಕಳವಳದ ಸಂಗತಿ ಎಂದರು.
ಈ ಬಗ್ಗೆ ಪ್ರತಿಯೊಬ್ಬರು ಅರಿತು ತಂಬಾಕು ಸೇವನೆ ಮಾಡುವವರಿಗೆ ಅರಿವು ಮೂಡಿಸಿ ಸಮಾಜ ರೋಗ ಮುಕ್ತ ಮಾಡಬೇಕು ಎಂದು ಮನವಿ ಮಾಡಿದರು.ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕಲ್ಲಪ್ಪ ಕುಂಬಾರ ಕಾರ್ಯಕ್ರಮ ಉದ್ಘಾಟಿಸಿ, ಮಾದಕ ವಸ್ತು ರಹಿತ ಸಮಾಜ ನಿರ್ಮಾಣ ಮಾಡಿ ಸದೃಢ ಆರೋಗ್ಯ ಹಾಗೂ ಆರ್ಥಿಕತೆಯನ್ನು ಸೃಷ್ಟಿ ಮಾಡಲು ಪ್ರಯತ್ನ ಸಾಗಿದೆ. ಇದಕ್ಕೆ ಪ್ರತಿಯೊಬ್ಬರು ಸಹಕರಿಸುವಂತೆ ತಿಳಿಸಿದರು.
ಶಾಲಾ ಮುಖ್ಯಗುರು ಲಿಂಗಾರೆಡ್ಡಿ ನಾಯಕ್, ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ, ವಿಜ್ಞಾನ ಶಿಕ್ಷಕ ರಾಚಯ್ಯಸ್ವಾಮಿ, ಹೊನ್ನಪ್ಪ, ಯೋಜನೆಯ ಸೈದಾಪುರ ವಲಯದ ಮೇಲ್ವಾಚರಕಿ ರಂಗಮ್ಮ ರೇಣುಕಾ ಸೇರಿದಂತೆ ಇತರರಿದ್ದರು.