ಕನ್ನಡಪ್ರಭ ವಾರ್ತೆ ವಿಜಯಪುರ
ಬಾಲಕಾರ್ಮಿಕತೆ ಅನಿಷ್ಠ ಪದ್ಧತಿಯಾಗಿದ್ದು, ಇದರ ನಿರ್ಮೂಲನೆಗೆ ಪರಿಣಾಮಕಾರಿ ಜಾಗೃತಿ ಅಗತ್ಯವಾಗಿದೆ. ಎಲ್ಲಾ ಅಧಿಕಾರಿಗಳು, ಸಂಘ- ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಕರೆ ನೀಡಿದರು.ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ವತಿಯಿಂದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಕೈಜೋಡಿಸಬೇಕು. ಬಾಲಕಾರ್ಮಿಕ ಪ್ರಕರಣಗಳು ಕಂಡುಬಂದ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ-೧೦೯೮ಕ್ಕೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಕಾರ್ಮಿಕ ಇಲಾಖೆಯು ಸೇರಿದಂತೆ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ರಕ್ಷಿಸಿದ ಮಕ್ಕಳನ್ನು ಬಾಲಮಂದಿರಕ್ಕೆ ದಾಖಲಿಸಿ ಅವರ ಪುನರ್ವಸತಿ ಕಲ್ಪಿಸಿ ಅವರಿಗೆ ಪೂರಕವಾದ ಶಿಕ್ಷಣ, ಕೌಶಲಗಳ ತರಬೇತಿ ಒದಗಿಸಲಾಗುತ್ತಿದೆ ಎಂದು ಹೇಳಿದರು.ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಕ್ರೋಢೀಕರಿಸಿಕೊಂಡು ಆ ಬಗ್ಗೆ ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು. ಬಾಲಕಾರ್ಮಿಕ ಕಾರ್ಮಿಕ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಶಾಲಾ ಮುಖ್ಯಸ್ಥರೊಂದಿಗೆ ಸಮನ್ವಯ ಸಾಧಿಸಬೇಕು. ವಲಸೆ ಕಾರ್ಮಿಕ ಕುಟುಂಬಗಳ ಬಗ್ಗೆ ಮಾಹಿತಿ ಪಡೆದುಕೊಂಡು ಅವರ ಮಕ್ಕಳ ಶಿಕ್ಷಣ, ಮೂಲಭೂತ ಹಕ್ಕುಗಳ ಸಂರಕ್ಷಣೆ ಮಾಡಬೇಕು. ಮಕ್ಕಳ ಭವಿಷ್ಯ ಸುಂದರವಾಗಿಸಲು ಬಾಲಕಾರ್ಮಿಕತೆ ಪಿಡುಗನ್ನು ತೊಲಗಿಸಬೇಕು ಎಂದರು.
ಕಾರ್ಮಿಕ ನಿರೀಕ್ಷಕರಾದ ಜಗದೇವಿ ಸಜ್ಜನ ಬಾಲಕಾರ್ಮಿಕ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ನೀಲಮ್ಮಾ ಖೇಡಗಿ, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಎಸ್.ಜಿ. ಕೈನೂರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾದರ್ ಟಿಯೋಲ್ ಮಚಾದೋ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್.ಜಿ. ಕುಲಕರ್ಣಿ ಮುಂತಾದವರು ಇದ್ದರು.