ಕನ್ನಡಪ್ರಭವಾರ್ತೆ ನಾಗಮಂಗಲ
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ವಿಶ್ವಕ್ಯಾನ್ಸರ್ ದಿನದ ಅಂಗವಾಗಿ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಗರ್ಭಕಂಠ ಕ್ಯಾನ್ಸರ್ ತಪಾಸಣಾ ಹಾಗೂ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ಕೊಡುವ ಜತೆಗೆ ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಪ್ರತಿಯೊಬ್ಬರ ಜೀವನ ಸ್ಥಿರತೆಯಿಂದಿರಲು ಆರೋಗ್ಯ ಇಲಾಖೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಜಿಲ್ಲೆಯ 56 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಂಗಳೂರಿನ ಖಾಸಗಿ ಕಂಪನಿಯ ಸಿಎಸ್‌ಆರ್ ನಿಧಿಯಡಿ ಇಸಿಜಿ ಯಂತ್ರಗಳನ್ನು ನೀಡಲಾಗಿದೆ ಎಂದರು.ಜೆಡಿಎಸ್‌ನವರು ಸಿಎಸ್‌ಆರ್ ಅನುದಾನ ಕೊಟ್ಟಿದ್ದೇವೆ ಎಂದು ಪ್ರಚಾರ ಪಡೆಯುತ್ತಾರೆ. ಆದರೆ ನಾವು ಮಾಡಿರೋದನ್ನು ಎಲ್ಲಿಯೂ ಹೇಳೋದಿಕ್ಕೆ ಹೋಗಲ್ಲ. ನಮಗೆ ಪ್ರಚಾರಕ್ಕಿಂತ ಜಿಲ್ಲೆಯ ಅಭಿವೃದ್ದಿ ಮುಖ್ಯವಷ್ಟೇ. ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು 14 ವರ್ಷದ ಹೆಣ್ಣುಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಪ್ರತಿಯೊಬ್ಬ ಮಹಿಳೆಯು ಮೂರು ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಈ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಆದ್ದರಿಂದ ನಮ್ಮ ಜಿಲ್ಲೆಯನ್ನು ಗರ್ಭಕಂಠ ಕ್ಯಾನ್ಸರ್ ಮುಕ್ತ ಜಿಲ್ಲೆಯನ್ನಾಗಿಸಲು ವೈದ್ಯರು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮಹಿಳೆಯರ ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್ ಬಂದರೂ ಕೂಡ ಗರ್ಭಕೋಶದಲ್ಲಿ ಅತಿಹೆಚ್ಚು ಕ್ಯಾನ್ಸರ್ ರೋಗ ಬರುತ್ತದೆ. ಈ ಗರ್ಭಕೋಶ ಕ್ಯಾನ್ಸರ್‌ನಿಂದ ದೇಶದಲ್ಲಿ ಸಾವಿರಾರು ಮಂದಿ ಸಾವಿಗೀಡಾಗುತ್ತಿದ್ದಾರೆ. ಈ ರೋಗವನ್ನು ಸುಲಭವಾಗಿ ಕಂಡು ಹಿಡಿದು ಗುಣಪಡಿಸಬಹುದು. ನಿರ್ಲಕ್ಷ್ಯ ವಹಿಸಿದರೆ ಸಾವೂ ಕೂಡ ಸಂಭವಿಸಬಹುದು ಎಂದು ಎಚ್ಚರಿಸಿದರು.
ಬಾಲ್ಯ ವಿವಾಹ, ಹೆಚ್ಚು ಮಕ್ಕಳ ಜನನ, ಸ್ವಚ್ಛತೆಯ ಕೊರತೆಯಿಂದಾಗಿ ಈ ರೋಗ ಬರುವ ಸಾಧ್ಯತೆ ಇದೆ. ಇದೊಂದು ಲೈಂಗಿಕ ರೋಗವಾಗಿದ್ದು, ರೋಗ ಲಕ್ಷಣಗಳು ಕೆಲವೊಮ್ಮೆ ಕಂಡುಬರುವುದಿಲ್ಲ. ಆರೋಗ್ಯ ತಪಾಸಣೆಗೊಳಪಟ್ಟಾಗಷ್ಟೆ ಈ ರೋಗ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ರೋಗ ಲಕ್ಷಣ ಕಂಡುಬರುವ ತನಕ ಕಾಯುವ ಬದಲು ವಿಐಎ ತಪಾಸಣೆ ಮೂಲಕ ಈ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು. ಇದೊಂದು ಸರಳ ರೀತಿಯ ಪರೀಕ್ಷೆಯಾಗಿದ್ದು ಯಾವುದೇ ನೋವಾಗುವುದಿಲ್ಲ. ಹಣದ ಅಗತ್ಯವೂ ಇರುವುದಿಲ್ಲ. ಹಾಗಾಗಿ 21ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಹೆಣ್ಣು ಮಕ್ಕಳೂ ಕೂಡ 3 ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.