ಧಾರ್ಮಿಕ ವಿಚಾರಗಳಿಗೆ ಕೈ ಜೋಡಿಸಿ: ಸಂಸದ ರಾಘವೇಂದ್ರ

KannadaprabhaNewsNetwork | Published : Nov 12, 2023 1:01 AM

ಸಾರಾಂಶ

ನ.21ರಿಂದ ಶಿವಮೊಗ್ಗದಿಂದ ತಿರುಪತಿ, ಗೋವಾ ಹಾಗೂ ಹೈದರಾಬಾದ್‌ಗೆ ವಿಮಾನ ಹಾರಾಟ

ಕನ್ನಡಪ್ರಭ ವಾರ್ತೆ ಸೊರಬ

ಧಾರ್ಮಿಕ ವಿಚಾರಗಳಿಗೆ ಪಕ್ಷಬೇಧ ಮರೆತು, ಎಲ್ಲರೂ ಒಟ್ಟಾಗಿ ಕೈಜೋಡಿಸಿದಾಗ ಸಮಾಜದ ಮತ್ತು ಮಠ-ಮಾನ್ಯಗಳ ಅಭಿವೃದ್ಧಿ ಸಾಧ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಫೆಬ್ರವರಿಯಲ್ಲಿ ಹಮ್ಮಿಕೊಂಡಿರುವ ಪಟ್ಟಾಧಿಕಾರ, ಶಿಲಾ ದೇಗುಲ ಪ್ರಾರಂಭೋತ್ಸವ ಹಾಗೂ ಶ್ರೀ ಸಿದ್ಧವೃಷಭೇಂದ್ರ ಸ್ವಾಮಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿದ್ದು, ಮಠದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಯಶಸ್ವಿಯಾಗಲು ಆರ್ಥಿಕವಾಗಿ ಸಬಲರಾದವರು ಹೆಚ್ಚಿನ ಸಹಕಾರ ನೀಡುವುದು ಅಗತ್ಯ. ಕರ್ತೃಗದ್ದುಗೆ ನಿರ್ಮಾಣ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸರ್ಕಾರ, ಜನಪ್ರತಿನಿಧಿಗಳ ಜೊತೆಗೆ ಭಕ್ತರ ಸಹಕಾರ ಕೂಡ ಮುಖ್ಯ. ಎಲ್ಲರೂ ಕೈಜೋಡಿಸಬೇಕು ಎಂದರು.

ನ.21ರಿಂದ ಶಿವಮೊಗ್ಗದಿಂದ ತಿರುಪತಿ, ಗೋವಾ ಹಾಗೂ ಹೈದರಾಬಾದ್‌ಗೆ ವಿಮಾನ ಹಾರಾಟ ನಡೆಯಲಿದೆ. ಜನತೆ ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.

ಆನಂದಪುರ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜಡೆ ಮಠವು ವಿಶಿಷ್ಟ ಗುರು ಪರಂಪರೆ ಹೊಂದಿದೆ. ಇಲ್ಲಿನ ಮಠಾಧೀಶ ಡಾ. ಮಹಾಂತ ಸ್ವಾಮಿಗಳು ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಇಲ್ಲಿನ ಸಿದ್ಧವೃಷಭೇಂದ್ರ ಸ್ವಾಮಿಗಳು ತಪಸ್ವಿಗಳಾಗಿದ್ದು, ಅವರ ಕರ್ತೃ ಗದ್ದುಗೆಗೆ ಇತಿಹಾಸವಿದೆ. ಮಠದ ಪರಂಪರೆ ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಪಟ್ಟಾಭಿಷೇಕ ನಡೆಯುತ್ತಿದೆ. ಭಕ್ತರು ತ್ರಿಕರಣ ಪೂರ್ವಕವಾಗಿ ಸಹಕಾರ ನೀಡಬೇಕು ಎಂದರು.

ಜಡೆ ಸಂಸ್ಥಾನ ಮಠದ ಡಾ. ಮಹಾಂತಸ್ವಾಮಿ, ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಉಪಸ್ಥಿತರಿದ್ದು, ಮಾತನಾಡಿದರು.

ಜಡೆ ಸಂಸ್ಥಾನ ಮಠದ ಕಿರಿಯ ಸ್ವಾಮೀಜಿ ರುದ್ರದೇವರು, ಅಕ್ಕಿಆಲೂರು ಮಠದ ಶಿವಬಸವ ಸ್ವಾಮೀಜಿ, ಮೂಲೆಗದ್ದೆ ಮಠದ ಸದಾಶಿವ ಸ್ವಾಮೀಜಿ, ಕೂಡಲಿ ಮಠದ ಗುರು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಜಡೆ ಹಿರೇಮಠದ ಘನಬಸವ ಅಮರೇಶ್ವರ ಮಹಾಸ್ವಾಮಿಗಳು, ಮೂಡಿ ಮಠದ ಸದಾಶಿವ ಶಿವಮೂರ್ತಿ ಸ್ವಾಮೀಜಿ, ಹಿರೇಮಾಗಡಿ ಮುರುಘಾ ರಾಜೇಂದ್ರ ಸ್ವಾಮೀಜಿ, ತೊಗರ್ಸಿ ಮಠದ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಮಹಾಂತ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು, ಗೇರುಕೊಪ್ಪದ ಶಿವಲಿಂಗ ಸ್ವಾಮಿಗಳು, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ, ಸಮಾಜ ಸೇವಕ ಡಾ. ಎಚ್.ಇ. ಜ್ಞಾನೇಶ್, ಜಿ.ಪಂ. ಮಾಜಿ ಸದಸ್ಯ ಶಿವಲಿಂಗೇಗೌಡ, ಗುರುಕುಮಾರ ಪಾಟೀಲ್, ಗ್ರಾ.ಪಂ. ಅಧ್ಯಕ್ಷ ಅಮಿತ್ ಪಾಟೀಲ್, ಅಕ್ಕನ ಬಳಗದ ರೇಣುಕಮ್ಮ ಗೌಳಿ, ನಿಜಗುಣ ಚಂದ್ರಶೇಖರ, ಜಯಶೀಲಗೌಡ, ರಾಜುಗೌಡ, ಡಿ. ಶಿವಯೋಗಿ ಮೊದದಲಾದವರು ಇದ್ದರು.

- - -

-11ಕೆಪಿಸೊರಬ03:

ಸಿದ್ಧವೃಷಬೇಂದ್ರ ಶ್ರೀಗಳ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು.

Share this article