ಕೊಡವ ಲ್ಯಾಂಡ್ ಹೋರಾಟಕ್ಕೆ ಶೀಘ್ರ ಜಯ : ಎನ್.ಯು.ನಾಚಪ್ಪ ವಿಶ್ವಾಸ

KannadaprabhaNewsNetwork | Published : Nov 12, 2023 1:01 AM

ಸಾರಾಂಶ

ಪಾಡಿನಾಡ್- ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಕುಂಜಿಲ ಕಕ್ಕಬ್ಬೆ‘ಕೆಂಜರಾಣೆ ಪಾಡಿನಾಡ್‌ಮಂದ್’ನಲ್ಲಿ ಕೊಡವ ಜಾಗೃತಿ ಸಭೆಯ ಮೂಲಕ ಸಿಎನ್‌ಸಿ ಸಂಘಟನೆಯ ಐದು ಹಂತಗಳ ಪಾದಯಾತ್ರೆಯನ್ನು ಮುಕ್ತಾಯಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ಪರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಶಾಂತಿಯುತ ಹೋರಾಟಕ್ಕೆ ಶೀಘ್ರ ಜಯ ಸಿಗಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಾಡಿನಾಡ್- ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಕುಂಜಿಲ ಕಕ್ಕಬ್ಬೆ‘ಕೆಂಜರಾಣೆ ಪಾಡಿನಾಡ್‌ಮಂದ್’ನಲ್ಲಿ ಕೊಡವ ಜಾಗೃತಿ ಸಭೆಯ ಮೂಲಕ ಸಿಎನ್‌ಸಿ ಸಂಘಟನೆಯ ಐದು ಹಂತಗಳ ಪಾದಯಾತ್ರೆಯನ್ನು ಮುಕ್ತಾಯಗೊಳಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೊಡಗಿನ ಆದಿಮಸಂಜಾತ ಕೊಡವ ಜನಾಂಗಕ್ಕೆ ಸಂವಿಧಾನದಡಿ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ಮೂಲಕ ಮಾತ್ರ ಭದ್ರತೆ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕೊಡವ ಲ್ಯಾಂಡ್‌ಗಾಗಿ ಶಾಂತಿಯುತ ಹೋರಾಟ ಮುಂದುವರೆಯಲಿದೆ. ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಹೈಕೋರ್ಟ್ನಲ್ಲಿ ಈ ಕುರಿತು ಅರ್ಜಿ ಸಲ್ಲಿಸಿ ನಮ್ಮ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹಿರಿಯರಾದ ಸ್ವಾಮಿ ಅವರು ನಮಗೆ ಸ್ಫೂರ್ತಿಯಾಗಿದ್ದು, ಅವರಿಂದ ಪ್ರೇರಣೆಗೊಂಡು ಅವರ ಜನ್ಮದಿನದಿಂದ ಪಾದಯಾತ್ರೆಯನ್ನು ಆರಂಭಿಸಿ ಇಂದು ಮುಕ್ತಾಯಗೊಳಿಸಿದ್ದೇವೆ. ಇವರ ಮಾರ್ಗದರ್ಶನದಲ್ಲಿ ಕೋಡವ ಲ್ಯಾಂಡ್‌ಗಾಗಿ ಕಾನೂನು ಹೋರಾಟ ಕೂಡ ನಡೆಯಲಿದೆ ಎಂದರು.

ಇದೇ ನ.26 ರಂದು ಸಿಎನ್‌ಸಿ ವತಿಯಿಂದ ಕೊಡವ ನ್ಯಾಷನಲ್ ಡೇ ನಡೆಯಲಿದ್ದು, ಕಾರ್ಯಕ್ರಮಕ್ಕೆ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಆಗಮಿಸಲಿದ್ದಾರೆ. ಸಮಾವೇಶದಲ್ಲಿ ಪ್ರತಿಯೊಬ್ಬ ಕೊಡವ, ಕೊಡವತಿಯರು ಪಾಲ್ಗೊಳ್ಳುವ ಮೂಲಕ ಸಿಎನ್‌ಸಿ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.

ಡಾ.ಸುಬ್ರಮಣಿಯನ್ ಸ್ವಾಮಿ ಅವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಲ್ಲಿಸಿ ಕೊಡವ ಲ್ಯಾಂಡ್ ಪರವಾಗಿ ಆಯೋಗವನ್ನು ರಚಿಸಬೇಕೆಂದು ಪ್ರತಿಪಾದಿಸಿದ್ದಾರೆ. ಸರ್ಕಾರಗಳು ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ನೀಡಬೇಕೆಂದು ಆಗ್ರಹಿಸಿದರು. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸಿಗದ ಹೊರತು ಕೊಡವರಿಗೆ ಸಾಂವಿಧಾನಿಕ ಭದ್ರತೆ ಮತ್ತು ನ್ಯಾಯಯುತ ಹಕ್ಕುಗಳು ಸಿಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಯೋಗಕ್ಷೇಮಕ್ಕಾಗಿ ಪೂಜೆ : ಕೊಡವ ಲ್ಯಾಂಡ್ ಹೋರಾಟದ ಪರ ಶ್ರೀಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಾಚಪ್ಪ ಅವರು, ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದರು.

ಇದಕ್ಕೂ ಮೊದಲು ಕಕ್ಕಬ್ಬೆಯಲ್ಲಿ ಮಾನವ ಸರಪಳಿ ನಿರ್ಮಿಸಿದ ಸಿಎನ್‌ಸಿ ಪ್ರಮುಖರು ಹಾಗೂ ಕೊಡವ, ಕೊಡವತಿಯರು ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು, ನಂತರ ಪಾದಯಾತ್ರೆಯಲ್ಲಿ ಸಾಗಿದರು.

ಕಲಿಯಂಡ ಮೀನ, ಪಟ್ಟಮಾಡ ಲಲಿತಾ ಗಣಪತಿ, ನಂದಿನೆರವಂಡ ಪಾರ್ವತಿ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತ, ಕರವಂಡ ಸರಸು, ನಂದಿನೆರವಂಡ ನಿಶಾ ಅಚಯ್ಯ, ನಂದೆಟ್ಟಿರ ಕವಿತಾ ಸುಬ್ಬಯ್ಯ, ಚೀಯಕಪೂವಂಡ ಚಿತ್ರ ರಂಜು ಮತ್ತಿತರರು ಹಾಜರಿದ್ದರು.

Share this article