20ರಂದು ಸರ್ಕಾರಗಳ ವಿರುದ್ಧದ ಕಾರ್ಮಿಕರ ಮುಷ್ಕರದಲ್ಲಿ ಪಾಲ್ಗೊಳ್ಳಿ: ಚಂದ್ರಶೇಖರ ಮೇಟಿ

KannadaprabhaNewsNetwork | Published : May 11, 2025 11:54 PM
Follow Us

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮೇ 20ರಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರವನ್ನು ದುಡಿಯುವ ವರ್ಗ, ದೇಶದ ಜನತೆ ಯಶಸ್ವಿಗೊಳಿಸಬೇಕು ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ, ಜೆಸಿಟಿಯು ರಾಜ್ಯ ಮುಖಂಡ ಚಂದ್ರಶೇಖರ ಮೇಟಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮೇ 20ರಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರವನ್ನು ದುಡಿಯುವ ವರ್ಗ, ದೇಶದ ಜನತೆ ಯಶಸ್ವಿಗೊಳಿಸಬೇಕು ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ, ಜೆಸಿಟಿಯು ರಾಜ್ಯ ಮುಖಂಡ ಚಂದ್ರಶೇಖರ ಮೇಟಿ ಮನವಿ ಮಾಡಿದರು.

ನಗರದ ಸಿಪಿಐ ಕಚೇರಿಯ ಕಾಮ್ರೆಡ್ ಪಂಪಾಪತಿ ಭವನದಲ್ಲಿ ಭಾನುವಾರ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ಯ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಐಎನ್‌ಟಿಯುಸಿ, ಕೆಎಸ್‌ಎಸ್‌ ಕಾರ್ಮಿಕ ಸಂಘಟನೆಗಳ ಜಂಟಿಯಾಗಿ ಕೇಂದ್ರ, ರಾಜ್ಯ ಸರ್ಕಾರಗಳ ಕಾರ್ಮಿಕ ವಿರುದ್ಧ ನೀತಿಗಳನ್ನು ಖಂಡಿಸಿ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕೊರೋನಾ ಸಮಯದ ಲಾಕ್ ಡೌನ್ ವೇಳೆ ವ್ಯಾಪಾರಕ್ಕೆ ಸಹಾಯ ಎಂಬ ಘೋಷಣೆಯೊಂದಿಗೆ ದೈತ್ಯ ಏಕಸ್ವಾಮ್ಯ ಬಂಡವಾಳಶಾಹಿಗಳ ಪರ ಸರ್ಕಾರ ಕೆಲಸ ಮಾಡಿದೆ. ದುಡಿಯುವ ಜನರ ಜೀವನ, ಜೀವನೋಪಾಯದ ಮೇಲೆ ಮಾರಕವಾದ ಕಾರ್ಮಿಕ ವಿರೋಧಿ ನಾಲ್ಕು ಲೇಬರ್ ಕೋಡ್‌ಗಳನ್ನು ಸಂಸತ್ತಿನಲ್ಲಿ ಯಾವುದೇ ಚರ್ಚೆಗೊಳಪಡಿಸದೇ, ಜಾರಿಗೊಳಿಸಿದೆ. 90ರ ದಶದಲ್ಲಿ ಜಾಗತೀಕರಣದ ನೀತಿಗಳನ್ನು ಜಾರಿಗೊಳಿಸುವ ಮೂಲಕ ಅಂದಿನ ಹಣಕಾಸು ಸಚಿವ ಡಾ.ಮನಮೋಹನ ಸಿಂಗ್ ಖಾಸಗೀಕರಣ ನೀತಿಗಳಿಗೆ ಮುನ್ನುಡಿ ಬರೆದಿದ್ದರು. ಈಗ ಜಾಗತೀಕರಣದ ನೀತಿಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತೀವ್ರಗತಿಯಲ್ಲಿ ಮುಂದುವರಿಸುತ್ತಿದೆ ಎಂದು ದೂರಿದರು.

ಎಲ್ಲ ಸರ್ಕಾರಗಳು ಹೊರ ಗುತ್ತಿಗೆ ಕಾರ್ಮಿಕರ ಅಲ್ಪಸ್ವಲ್ಪ ಸೌಲಭ್ಯಗಳನ್ನು ಹರಣಗೊಳಿಸುತ್ತಾ, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರನ್ನು, ಸ್ಕೀಂ ನೌಕರರ ಹೆಸರಿನಲ್ಲಿ ಕನಿಷ್ಟ ವೇತನದಿಂದ ವಂಚಿತಗೊಳಿಸಿ, ಕೇವಲ ಗೌರವಧನ, ಪ್ರೋತ್ಸಾಹಧನಕ್ಕಾಗಿ ದುಡಿಸಿಕೊಳ್ಳುತ್ತಿದ್ದಾರೆ. ಕಾರ್ಮಿಕರು 2016ರಲ್ಲಿ ಇಪಿಎಫ್‌ ಕಾಯ್ದೆ ವಿರುದ್ಧ ಬೆಂಗಳೂರಿನಲ್ಲಿ ಗಾರ್ಮೆಂಟ್ ಕಾರ್ಮಿಕರ ಧೀರೋದ್ಧಾತ ಪ್ರಬಲ ಹೋರಾಟದಿಂದಾಗಿ ಕೇವಲ 24 ಗಂಟೆಯಲ್ಲೇ ಇಪಿಎಫ್ ಕಾಯ್ದೆ ಹಿಂಪಡೆಯಲಾಯಿತು ಎಂದು ಸ್ಮರಿಸಿದರು.

ಸಂಘಟನೆಗಳ ಮುಖಂಡರಾದ ಆನಂದರಾಜ, ಆವರಗೆರೆ ಚಂದ್ರು, ಮಂಜುನಾಥ ಕೈದಾಳೆ, ಸತೀಶ ಅರವಿಂದ, ತಿಪ್ಪೇಸ್ವಾಮಿ ಅಣಬೇರು, ಯಲ್ಲಪ್ಪ, ಅಂಜಿನಪ್ಪ, ಐರಣಿ ಚಂದ್ರು, ಶಿವಾಜಿ ರಾವ್‌, ಮಂಜುಳಾ, ಸರೋಜಾ, ವಿರೂಪಾಕ್ಷಪ್ಪ ಇತರರು ಇದ್ದರು. ವಿವಿಧ ಕಾರ್ಮಿಕ ಸಂಘಟನೆಗಳು, 90ಕ್ಕೂ ಹೆಚ್ಚು ಯೂನಿಯನ್ ಪದಾಧಿಕಾರಿಗಳು ಸಮಾವೇಶದಲ್ಲಿದ್ದರು.

- - -

(ಟಾಪ್‌ ಕೋಟ್‌) ಅಧ್ಯಕ್ಷತೆ ವಹಿಸಿದ್ದ ಆವರಗೆರೆ ಎಚ್.ಜಿ.ಉಮೇಶ ಮಾತನಾಡಿ, ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಕಟ್ಟಬೇಕಿದೆ. ಹಿಂದೆಲ್ಲಾ 8-10 ಕಿಮೀ ಉದ್ದದ ಮೇ ದಿನದ ಮೆರವಣಿಗೆ ಕಂಡಿದ್ದೆವು. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗೂಡಿಸಿ, ಅಂತಹ ಮೇ ದಿನದ ಪ್ರದರ್ಶನ ನಡೆಸಬೇಕು. ಮೇ 20ರ ಮುಷ್ಕರ ಯಶಸ್ವಿಗೆ ಶ್ರಮಿಸಬೇಕು. ದಾವಣಗೆರೆಯಲ್ಲಿ ಮತ್ತೆ ಕಾರ್ಮಿಕ ಚಳವಳಿ ಯುಗ ತರಲು ಸಂಕಲ್ಪ ಮಾಡೋಣ.

- ಆವರಗೆರೆ ಎಚ್‌.ಜಿ. ಉಮೇಶ, ಮುಖಂಡ

- - -

-11ಕೆಡಿವಿಜಿ2, 3:

ಸಮಾವೇಶವನ್ನು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ, ಜೆಸಿಟಿಯು ರಾಜ್ಯ ಮುಖಂಡ ಚಂದ್ರೇಖರ ಮೇಟಿ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು.