ಸೇನೆಗೆ ಬೆಂಬಲವಾಗಿ ಮಾಜಿ ಸೈನಿಕರಿಂದ ದೇವರಿಗೆ ಪೂಜೆ

KannadaprabhaNewsNetwork | Published : May 11, 2025 11:53 PM
Follow Us

ಸಾರಾಂಶ

ಮಾಜಿ ಸೈನಿಕರ ಸಮನ್ವಯ ಸಮಿತಿ ಸದಸ್ಯರು ತಿರಂಗಾ ಬೈಕ್ ಜಾಥಾ ನಡೆಸಿದರು. ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ರಾಮಲಿಂಗೇಶ್ವರರಿಗೆ ವಿಶೇಷ ಪೂಜೆ ಕೂಡ ನಡೆಸಿ, ಪ್ರಾರ್ಥಿಸಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವುದರ ಜತೆಗೆ ಅದರ ಹುಟ್ಟಡಗಿಸಿರುವ ಭಾರತೀಯ ಸೈನಿಕರಿಗೆ ದೇವರು ಸರ್ವಶಕ್ತಿಯನ್ನು ನೀಡಿ ಅವರಿಗೆ ಯಾವುದೆ ತೊಂದರೆಯಾಗದಂತೆ‌ ನೋಡಿಕೊಳ್ಳುವಂತೆ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮನ ವೃತ್ತದಿಂದ ಐತಿಹಾಸಿಕ‌ ಕರಿಗುಡಿಯ ರಾಮಲಿಂಗಶ್ವರ ದೇವಸ್ಥಾನದವರೆಗೆ ಮಾಜಿ ಸೈನಿಕರ ಸಮನ್ವಯ ಸಮಿತಿ ಸದಸ್ಯರು ತಿರಂಗಾ ಬೈಕ್ ಜಾಥಾ ನಡೆಸಿದರು. ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ರಾಮಲಿಂಗೇಶ್ವರರಿಗೆ ವಿಶೇಷ ಪೂಜೆ ಕೂಡ ನಡೆಸಿ, ಪ್ರಾರ್ಥಿಸಿದರು.

ಪೂಜೆಯ ನಂತರ ಸಂಘದ ಅಧ್ಯಕ್ಷ, ಮಾಜಿ ಸೈನಿಕ ಬಿ.ಬಿ.ಬೋಗೂರ ಮಾತನಾಡಿ, ಭಾರತೀಯ ರಕ್ಷಣಾ ವ್ಯವಸ್ಥೆ ಈ ಹಿಂದಿನ ಕಾಲಕ್ಕಿಂತ ಹೆಚ್ಚು ಬಲಾಢ್ಯವಾಗಿದೆ. ಎಲ್ಲ ವಿಧದಲ್ಲಿ ಜಗತ್ತಿನ ಎಂತಹ‌ ಶಕ್ತಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ. ಪಾಕಿಸ್ತಾನ ತನ್ನಲ್ಲಿರುವ ಉಗ್ರಗಾಮಿಗಳನ್ನು ಭಾರತಕ್ಕೆ ಒಪ್ಪಿಸಿ ಭಾರತದ ಅವಿಭಾಜ್ಯ ಅಂಗ‌ ಜಮ್ಮು ಕಾಶ್ಮೀರದ ಕೆಲ ಆಕ್ರಮಿತ ಭಾಗವನ್ನು ಭಾರತಕ್ಕೆ ಮರಳಿಸಬೇಕು. ಭವಿಷ್ಯತ್ತಿನಲ್ಲಿ ಭಾರತದ ವಿರುದ್ಧ ಎಂದೂ ಕೇಡನ್ನು ಬಯಸಲಾರದ ಒಪ್ಪಂದ ಮಾಡಿದರೆ ಮಾತ್ರ ಭಾರತ ಒಪ್ಪಬೇಕು. ಇಲ್ಲದಿದ್ದರೆ ಪಾಕಿಸ್ತಾನದ ಸರ್ವ ರೀತಿಯಾಗಿ ನಿರ್ನಾಮ ಮಾಡುವ ನಿರ್ಣಯವನ್ನು ಭಾರತ ಮಾಡಬೇಕು. ಭಾರತೀಯ ರಕ್ಷಣಾ ಪಡೆಗಳ ಸಹಾಯ ಮಾಡಲು ಮಾಜಿ ಸೈನಿಕರು ಸಿದ್ದರಿದ್ದೇವೆ. ಯುದ್ಧಕ್ಕೆ ಕರೆ ಬಂದರೆ ಕ್ಷಣಾರ್ಧದಲ್ಲಿ ನಾವು ಹೊರಡಲು ತುದಿಗಾಲದ ಮೇಲೆ ನಿಂತಿದ್ದೇವೆ ಎಂದರು.

ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಪಾಕಿಸ್ತಾನದ ಉಪಟಳ 1947 ರಿಂದ‌ ಸಹಿಸುತ್ತಾ ಬಂದಿದ್ದೇವೆ. ಇದು ಇನ್ನು ಮುಂದುವರೆಯದೆ ಶಾಶ್ವತವಾಗಿ ಅಂತ್ಯವಾಗಬೇಕು. ಇದಕ್ಕೆ ಪಾಕಿಸ್ತಾನ ಭೂಪಟದಿಂದ ಕಣ್ಮರೆಯಾದರೆ ಮಾತ್ರ ಸಾಧ್ಯ. ಭಾರತದ ಪರಾಕ್ರಮ‌ ನಾಲ್ಕೆ ದಿನದಲ್ಲಿ ಜಗಜ್ಜಾಹೀರವಾಗಿದ್ದು ಚೀನಾದಂತ ದೇಶಗಳು ಬಾಯಿಮುಚ್ಚಿಕೊಂಡಿವೆ. ಶಾಂತಿ‌ಮಂತ್ರ ಜಪಿಸುತ್ತಿವೆ. ಪಾಕಿಸ್ತಾನ ಕಪಟ ನೀತಿಯಿಂದ ಕದನ ವಿರಾಮಕ್ಕೆ ಮೊಂಡಿ ಉರಿದರೆ ಇನ್ನೊಂದು ಕಡೆ ದೇಶದ ಬಗ್ಗೆ ಅಪಪ್ರಚಾರ ಹಾಗೂ ಡ್ರೋಣ ದಾಳಿ ಮಾಡಿ‌ ತನ್ನ ಕಪಟತನ ಪ್ರದರ್ಶಿಸಿದೆ ಎಂದು ವಾಗ್ದಾಳಿ ನಡೆಸಿದರು.

ಇದೆ ವೇಳೆ ಮಾಜಿ ಸೈನಿಕರು ಪಟಾಕಿ ಸಿಡಿಸಿ ಪಾಕಿಸ್ತಾನದ ಮೇಲಿನ‌ ದಾಳಿಯನ್ನು ವಿಜೃಂಬಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಚಂದ್ರಶೇಖರ ನೇಸರಗಿ, ಶೇಖರ ನವಲಗಟ್ಟಿ, ದೇಮಪ್ಪ ಶಿರಗಾಂವಿ, ರಾಜಕುಮಾರ ಸವಟಗಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಗಡದವರ, ಮಂಜುನಾಥ ಬಾಗೆವಾಡಿ, ಶಂಕರ ಬೇವಿನ, ಸುರೇಶ ಕಂಬಾರ, ಚಂದ್ರಗೌಡ ಪಾಟೀಲ, ಶಿವಾನಂದ ಹಡಪದ, ಎಸ್.ಎಂ. ಪಾಟೀಲ, ಸೋಮಶೇಖರ ಹೊಸಮನಿ, ಎಂ.ಜಿ‌.ಗೋಧಿ, ಬಸವರಾಜ ಹೊಳೆಪ್ಪನವರ, ಚಂದ್ರಗೌಡ ಗೌಡರ, ಮಹಾಂತೇಶ ಕುಸಲಾಪೂರ, ಬಾಬು ವಾಲಿಕಾರ, ನಾಗಪ್ಪ ಮಡಿವಾಳರ, ನಜೀರ ಕಿಲ್ಲೆದಾರ, ಗೀತಾ ಗರಗದ, ಮಲ್ಲಿಕಾರ್ಜುನ ಗಡದವರ, ಶಿವಾ ಕರಜನ್ನವರ, ಬಸವರಾಜ ಹೊಂಗಲ, ಮಾಲಾ‌ ಸಂಗಣ್ಣವರ ಸೇರಿದಂತೆ ನೂರಾರು ಮಾಜಿ ಸೈನಿಕರು ಇದ್ದರು.