ಗದಗ: ಸಂಗೀತ ಸಂವರ್ಧನೆ ಹಾಗೂ ಸಂಗೀತ ಕಲಾವಿದರನ್ನು ಗೌರವಿಸುವ ಕಾರ್ಯ ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಗದುಗಿನ ವಿದೂಷಿ ಕೋಟಾ ಇಂದಿರಾ ವ್ಹಿ.ಶೆಣೈ ಕಲಾ ವೇದಿಕೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ವೇದಿಕೆಯ ಅಧ್ಯಕ್ಷೆ ಗದಗ ಐಎಂಎ ಮಾಜಿ ಅಧ್ಯಕ್ಷೆ ಡಾ.ರಾಧಿಕಾ ಕುಲಕರ್ಣಿ ಹೇಳಿದರು. ಅವರು ಭಾನುವಾರ ಗದಗ ಐಎಂಎ ಸಭಾಂಗಣದಲ್ಲಿ ವಿದೂಷಿ ಶ್ರೀಮತಿ ಕೋಟಾ ಇಂದಿರಾ ವ್ಹಿ.ಶೆಣೈ ಕಲಾ ವೇದಿಕೆ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ 15ನೇ ವರ್ಷದ ಸ್ವರ ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜಾಶ್ರಯದಲ್ಲಿ ಪೋಷಣೆಗೊಂಡು ಬಂದಿರುವ ಸಂಗೀತ ಕಲೆಯನ್ನು ಸರಕಾರ, ಸಂಘ ಸಂಸ್ಥೆಗಳು ಪೋಷಿಸಬೇಕು ತನ್ಮೂಲಕ ಸಂಗೀತ ಹಾಗೂ ಕಲಾವಿದರು ಉಳಿಯಬೇಕು.
ಈ ಮಾಲಿಕೆಯಲ್ಲಿ ನನ್ನ ತಾಯಿ ಶ್ರೀ ಕೋಟಾ ಇಂದಿರಾ ವಿಶ್ವನಾಥ ಶೆಣೈ ಸ್ಮರಣಾರ್ಥ ನಮ್ಮ ವೇದಿಕೆಯು ಕಲಾವಿದರನ್ನು ಹಾಗೂ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತ ಬಂದಿದೆ. ಈ ಪರಂಪರೆ ಮುನ್ನಡೆಯಲಿದೆ. ತಾಯಿಗಿಂತ ಮಿಗಿಲಾದದ್ದು ಇಲ್ಲ. ಸರ್ವ ಶ್ರೇಷ್ಠವಾದ ತಾಯಿಯ ಸ್ಥಾನವನ್ನು ತುಂಬಲು ಸಾಧ್ಯವೇ ಇಲ್ಲ. ನಮ್ಮ ಯುವ ಜನಾಂಗ ತಾಯಿಯನ್ನು ಪೂಜ್ಯ ಭಾವನೆಯಿಂದ ಕಾಣಬೇಕು, ತಾಯಿಯ ಸೇವೆ ಮಾಡಿ ತಾಯಿ ಋಣ ತೀರಿಸಬೇಕು ಎಂದರು. ಅತಿಥಿಗಳಾಗಿ ಐಎಂಎ ಮಾಜಿ ಅಧ್ಯಕ್ಷ ಡಾ. ಪ್ಯಾರಅಲಿ ನೂರಾನಿ, ಐಎಂಎ ಕಾರ್ಯದರ್ಶಿ ಡಾ.ತುಕಾರಾಮ ಸೂರಿ ಆಗಮಿಸಿದ್ದರು. ವೇದಿಕೆಯ ಸಂಚಾಲಕ ಡಾ. ಉದಯ ಕುಲಕರ್ಣಿ ಮುಂತಾದವರು ಮಾತನಾಡಿದರು. ಸಮಾಜಮುಖಿ ಕಾರ್ಯ ಮಾಡಿದ ಶ್ರೀಕಾಂತ ಜೋಷಿ, ವಿನಾಯಕ ಕಾಮತ್, ವೆಂಕಟೇಶ ರಾಯಭಟ್‌ನವರ, ಶ್ರೀಕಾಂತ ಪಾಠಕ, ದೀಪ್ತಿ ಪಾಠಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸ್ವರಾಲಯ ಸ್ಕೂಲ್ ಆಫ್ ಮ್ಯೂಜಿಕ್ ಸಂಸ್ಥೆಯ ಮಂಜುಳಾ ಇದ್ಲಿ, ತನ್ವಿ ಮೋನೆ, ಐಶ್ವರ್ಯ ಮ್ಯಾಗೇರಿ, ಬಿಂದು ಅವರು ಸಂಗೀತ ಸೇವೆ ನೀಡಿದರು. ಸರಸ್ವತಿ ಸಂಗೀತ ಸಾಧನ ಮ್ಯೂಜಿಕ್ ಶಾಲೆಯ ಅನಘಾ ಕುಲಕರ್ಣಿ, ಶುಭಾಂಗಿ, ಐಶ್ವರ್ಯ ಮ್ಯಾಗೇರಿ ಮುಂತಾದವರು ಹಾಜರಿದ್ದರು.