ಕನ್ನಡಪ್ರಭ ವಾರ್ತೆ, ತುಮಕೂರು
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಯಂ ಸೇವಕರನ್ನು ನೇಮಕ ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಸ್ವಯಂ ಸೇವಕರ ನೇಮಕಾತಿಗಾಗಿ ಕಮ್ಯಾಂಡೆಂಟ್ ಹೋಮ್‌ಗಾರ್ಡ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ನೆಹರು ಯುವ ಕೇಂದ್ರದ ಉಪನಿರ್ದೇಶಕರನ್ನು ನಿಯೋಜಿಸಲಾಗಿದೆ. ಯುದ್ಧಕ್ಕೆ ಸಂಬಂಧಿಸಿದಂತೆ ತುರ್ತು ಸಂದರ್ಭಗಳು ಘೋಷಣೆಯಾದಾಗ ಜನರ ಜೀವ ಹಾಗೂ ಆಸ್ತಿಗಳ ರಕ್ಷಣೆಗಾಗಿ ಸ್ವಯಂ ಸೇವಕರ ನೆರವನ್ನು ಪಡೆಯಲಾಗುವುದು ಎಂದು ತಿಳಿಸಿದರು.
ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲಿಚ್ಛಿಸುವವರು 18 ವರ್ಷ ವಯೋಮಾನದವರಾಗಿದ್ದು, ದೈಹಿಕವಾಗಿ ಸದೃಢರಾಗಿರಬೇಕು. ಆಸಕ್ತರು ನಿಗದಿತ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಬಗ್ಗೆ ಈಗಾಗಲೇ ಸ್ಥಳೀಯ ಆಡಳಿತ ವ್ಯಾಪ್ತಿಯಲ್ಲಿ ಪ್ರಚುರ ಪಡಿಸಲಾಗಿದೆ. ಸ್ವಯಂ ಸೇವಕರಾಗಿ ಆಯ್ಕೆಯಾದವರಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದರು.ತುರ್ತು ಸಂದರ್ಭಗಳನ್ನು ಎದುರಿಸಲು ಹಾಗೂ ಸಾರ್ವಜನಿಕರಿಗೆ ನೆರವು ನೀಡಲು ಈಗಾಗಲೇ ಜಿಲ್ಲೆಯಲ್ಲಿ ಗುರುತಿಸಿರುವ ಸುಮಾರು 20 ಸೂಕ್ಷ್ಮ ಪ್ರದೇಶಗಳಿಗೆ ಬಿಎಸ್‌ಎನ್‌ಎಲ್ ವತಿಯಿಂದ ಹಾಟ್ ಲೈನ್ ಸಂಪರ್ಕ ನೀಡಲಾಗುವುದು. ಇದರಿಂದ ಸ್ಥಳೀಯ ಸಮಸ್ಯೆಗಳನ್ನು ತ್ವರಿತವಾಗಿ ಜಿಲ್ಲಾಡಳಿತಕ್ಕೆ ತಲುಪಿಸಲು ಅನುಕೂಲವಾಗಲಿದೆ. ಅಲ್ಲದೆ, ನಗರ ಸ್ಥಳೀಯ ಸಂಸ್ಥೆ ಹಾಗೂ ತಾಲ್ಲೂಕು ಕಚೇರಿಗಳಲ್ಲಿಯೂ ಸಹಾಯವಾಣಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ದಾಸ್ತಾನು ಇರುವ ರಾಗಿ, ಗೋಧಿ, ಅಕ್ಕಿ, ಮತ್ತಿತರ ಅಗತ್ಯ ವಸ್ತುಗಳ ಅಭಾವ ಸೃಷ್ಟಿಯಾಗದಂತೆ ಹಾಗೂ ಆಹಾರ ಧಾನ್ಯಗಳು ಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟವಾಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರಲ್ಲದೆ, ಜನರು ಆತಂಕ ಪಡುವ ಸುಳ್ಳು ಸುದ್ದಿಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸಬಾರದು. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಸಂದೇಶಗಳನ್ನು ಹರಿಯಬಿಡುವವರು ಯಾರೇ ಆಗಲಿ ಅವರನ್ನು ಕಾನೂನು ಕ್ರಮಕ್ಕೆ ಗುರಿಪಡಿಸಲಾಗುವುದು ಎಂದರು.
ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 9 ಸಾವಿರ ಹಾಸಿಗೆಗಳು ಲಭ್ಯವಿದ್ದು, 12 ಆಕ್ಸಿಜನ್ ಪ್ಲಾಂಟ್, ವೆಂಟಿಲೇಟರ್, ಆಂಬುಲೆನ್ಸ್ಗಳು ಸುಸ್ಥಿತಿಯಲ್ಲಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮಾತನಾಡಿ, ಯುದ್ಧದ ಸಂದರ್ಭದಲ್ಲಿ ಸಾರ್ವಜನಿಕ ಸಭೆ/ಸಮಾರಂಭಗಳಿಗೆ ಅನುಮತಿ ನೀಡಲಾಗುವುದಿಲ್ಲ. ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಮದುವೆ, ಮತ್ತಿತರ ಶುಭ ಸಮಾರಂಭಗಳಿಗೆ ಕಡಿಮೆ ಜನರು ಮಾತ್ರ ಸೇರಲು ಅವಕಾಶ ನೀಡಲಾಗುವುದು ಎಂದು ಹೇಳಿದರು. .