ಕನ್ನಡಪ್ರಭ ವಾರ್ತೆ ಶಹಾಪುರ
ಆಹಾರ ಆರೋಗ್ಯ ಶಿಕ್ಷಣಗಳಿಗೆ ಕೊಡುತ್ತಿದ್ದ ಅನುದಾನಗಳ ಕಡಿತದಿಂದ ಇಂದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಖಾಸಗೀಕರಣವಾಗಿ ಅದರ ವೆಚ್ಚವು ದುಬಾರಿಯಾಗಿದೆ. ಮತ್ತೊಂದೆಡೆ ಆದಾಯದಲ್ಲಿ ಮಧ್ಯಮ ವರ್ಗ ಮತ್ತು ಅತ್ಯಂತ ಕಡಿಮೆ ಆದಾಯದ 7.5 ಕೋಟಿ ಜನರು ಮತ್ತು ಬಡವರಾಗಿದ್ದಾರೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ. ಸತತ ಬರಗಾಲದಿಂದ ತತ್ತರಿಸುವ ರೈತರಿಗೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಬೆಂಬಲ ಬೆಲೆ ನೀಡದೆ ಒಕ್ಕಲುತನದಿಂದ ರೈತರನ್ನು ಒಕ್ಕಲಿಬ್ಬಿಸುವ ಹುನ್ನಾರ ಕೇಂದ್ರ ಸರ್ಕಾರ ನಡೆಸುತ್ತಿದೆ. ಹೀಗಾಗಿ, ರೈತ ಕೂಲಿಕಾರ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟ ಹಮ್ಮಿಕೊಂಡಿದೆ ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ ದೇಶಾದ್ಯಂತ ಫೆ.16ರಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ತಿಳಿಸಿದ್ದಾರೆ.ನಗರದಲ್ಲಿ ಈ ಕುರಿತು ಪ್ರತಿಭಟನಾ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಬಸಲಿಂಗಮ್ಮ ನಾಟೇಕಾರ್ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಲು ದುಡಿಯುವ ಜನರ ಶೋಷಣೆ ತಪ್ಪಿಸಲು ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು ಉದ್ಯೋಗ ಸೃಷ್ಟಿಸಲು ಆಗ್ರಹಿಸಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ವಿರೋಧಿಸಿ ದೇಶಾದ್ಯಂತ ಫೆ.16ರಂದು ರೈತ, ಕೂಲಿಕಾರ, ಕಾರ್ಮಿಕ ಸಂಘಟನೆಗಳಿಂದ ತಾಲೂಕು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ರೈತರು, ಕೂಲಿ ಕಾರು ಹಾಗೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೃಷಿ ಕೂಲಿಕಾರ ಸಂಘದ ಜಿಲ್ಲಾಧ್ಯಕ್ಷ ದಾವಲಸಾಬ್ ನದಾಫ, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ಎಂ. ಸಾಗರ್, ಅಂಗನವಾಡಿ ನೌಕರರ ಸಂಘದ ವಾಡಗೆರಾ ತಾಲೂಕು ಅಧ್ಯಕ್ಷೆ ಇಂದಿರಾದೇವಿ ಕೊಂಕಲ್, ಕೃಷಿ ಕೂಲಿಕಾರ ಸಂಘದ ತಾಲೂಕಾಧ್ಯಕ್ಷೆ ರಂಗಮ್ಮ ಕಟ್ಟಿಮನಿ, ಧರ್ಮಣ್ಣ ದೊರೆ ಇತರರಿದ್ದರು.