ತುರುವೇಕೆರೆ: ನಾಗರಿಕ ವೇದಿಕೆಯ ತೆಕ್ಕೆಗೆ ದಿ ಟೌನ್ ಸಹಕಾರ ಸಂಘ

KannadaprabhaNewsNetwork | Published : Feb 12, 2024 1:31 AM

ಸಾರಾಂಶ

ತುರುವೇಕೆರೆ ಪಟ್ಟಣದ ದಿ ಟೌನ್ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಾಗರಿಕ ವೇದಿಕೆ ಅತಿ ಹೆಚ್ಚು ಸ್ಥಾನವನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಪಟ್ಟಣದ ದಿ ಟೌನ್ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನಾಗರಿಕ ವೇದಿಕೆ ಅತಿ ಹೆಚ್ಚು ಸ್ಥಾನವನ್ನು ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ.

ಸಹಕಾರ ಸಂಘದ ೧೩ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ೧೧ ಸ್ಥಾನಗಳು ನಾಗರಿಕ ವೇದಿಕೆಯ ಪಾಲಾದರೆ, ೨ ಸ್ಥಾನಗಳು ತಾಳ್ಕೆರೆ ಸುಬ್ರಹ್ಮಣ್ಯಂ ವೇದಿಕೆಯ ಪಾಲಾಗಿದೆ.

ಭಾನುವಾರ ನಡೆದ ಚುನಾವಣೆಗೆ ೧೩ ಸ್ಥಾನಗಳಿಗೆ ೨೭ ಮಂದಿ ಸ್ಪರ್ಧಿಸಿದ್ದರು. ಸಾಮಾನ್ಯ ೭, ಮಹಿಳಾ ಮೀಸಲು ೨, ಹಿಂದುಳಿದ ವರ್ಗ ಎ ಮತ್ತು ಬಿ, ಪರಿಶಿಷ್ಠ ಜಾತಿ, ಪರಿಶಿಷ್ಠ ಜಾತಿಗೆ ತಲಾ ಒಂದು ಸ್ಥಾನ ಮೀಸಲಾಗಿತ್ತು. ಇವುಗಳ ಪೈಕಿ ಸಾಮಾನ್ಯ ವರ್ಗದಿಂದ ಎನ್.ಆರ್‌. ಸುರೇಶ್ (೬೬೪), ಎಚ್.ಆರ್‌. ರಾಮೇಗೌಡ (೫೯೩), ಟಿ.ಎನ್. ಶಿವರಾಜ್ (೫೩೪), ಯಜಮಾನ್ ಟಿ.ಪಿ. ಮಹೇಶ್ (೫೧೨), ಜೆ. ಚಂದ್ರಶೇಖರ್ (೫೦೮), ಟಿ.ಎಂ. ಮಂಜಣ್ಣ (೪೮೮), ಸಿ.ಎನ್. ಮಲ್ಲಿಕಾರ್ಜುನ್ (೪೭೯) ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಮಹಿಳಾ ಮೀಸಲು ಕ್ಷೇತ್ರದಲ್ಲಿ ಅನುಸೂಯ (೫೧೬), ವಿದ್ಯಾಕೃಷ್ಣ (೪೩೭) ಮತಗಳನ್ನುಗಳಿಸಿ ಜಯಶಾಲಿಯಾದರು. ಹಿಂದುಳಿದ ಪ್ರ ವರ್ಗ ಎ ಯಿಂದ ಸಿ. ಆನಂದ್ ಕುಮಾರ್ (೫೦೮) ಮತಗಳನ್ನು ಗಳಿಸಿದರೆ, ಹಿಂದುಳಿದ ಪ್ರವರ್ಗ ಬಿ ಯಿಂದ ಸ್ಪರ್ಧಿಸಿದ್ದ ಟಿ.ಆರ್‌. ರಂಗನಾಥ್ (೪೫೧) ಮತಗಳನ್ನು ಗಳಿಸಿ ಜಯಶಾಲಿಯಾದರು.

ಪರಿಶಿಷ್ಠ ಪಂಗಡದಿಂದ ಟಿ.ಎಲ್. ಕಾಂತರಾಜ್ ೪೦೬ ಮತಗಳನ್ನು, ಪರಿಶಿಷ್ಠ ಜಾತಿಯಿಂದ ಎನ್.ಬಿ. ಶಿವಯ್ಯ (ಬಡಾವಣೆ ಶಿವಣ್ಣ) ೪೨೭ ಮತಗಳನ್ನು ಪಡೆಯುವ ಮೂಲಕ ದಿ ಟೌನ್ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದರು.

ನಾಗರಿಕ ವೇದಿಕೆಯ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು.

ಚುನಾವಣಾಧಿಕಾರಿಗಳಾಗಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಕರ್ತವ್ಯ ನಿರ್ವಹಿಸಿದರು. ಸೂಕ್ತ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ದಿ ಟೌನ್ ಸಹಕಾರ ಸಂಘದಲ್ಲಿ ಒಟ್ಟು ೧೧೩೮ ಮಂದಿ ಷೇರುದಾರರು ಇದ್ದರು. ಇವರ ಪೈಕಿ ೯೪೮ ಮಂದಿ ಮತ ಚಲಾವಣೆ ಮಾಡಿದರು. ಒಟ್ಟು ಶೇ.೮೩.೩೦ ರಷ್ಟು ಮತದಾನವಾಗಿತ್ತು. ಭಾನುವಾರ ಬೆಳಗ್ಗೆ ೯ ರಿಂದ ೪ ಗಂಟೆಯವರೆಗೆ ಮತದಾನವಾಗಿತ್ತು. ಸಾಯಂಕಾಲ ೭.೩೦ ರ ವೇಳೆಗೆ ಫಲಿತಾಂಶ ಪ್ರಕಟಿಸಲಾಯಿತು.

Share this article