ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ಭಾನುವಾರ ಜರುಗಿದ ಮನೋಜ ಪಾಟೀಲ ದತ್ತಿ ಕಾರ್ಯಕ್ರಮ, ವಾರ್ಷಿಕ ಪತ್ರಕರ್ತ ಪ್ರಶಸ್ತಿ ಪ್ರದಾನ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಪತ್ರಕರ್ತ ವಿಶ್ವನಾಥ ಕೋಟಿ ಅವರಿಗೆ ವಾರ್ಷಿಕ ಪತ್ರಕರ್ತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿಂದಿನ ಕಾಲದಲ್ಲಿ ಗೂಗಲ್ ಸಹಾಯವಿಲ್ಲದೇ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದವರಿಗೆ ಇಂದಿಗೂ ಗೌರವವಿದೆ. ಇಂದು ತಂತ್ರಜ್ಞಾನ ಬಂದು ಪತ್ರಕರ್ತರಿಗೆ ಸಾಕಷ್ಟು ಅನುಕೂಲತೆಗಳು ಲಭಿಸಿವೆ. ಸುದ್ದಿ ಮಾಧ್ಯಮಗಳಲ್ಲಿ ಮಾಹಿತಿಗಳು ದೊರೆಯುತ್ತವೆ. ಅದೇ ರೀತಿ ತಪ್ಪು ಮಾಹಿತಿಗಳು ದೊರೆಯುತ್ತವೆ. ಅದಕ್ಕಾಗಿ ಪ್ರಸ್ತುತ ಫ್ಯಾಕ್ಟ್ ಚೆಕ್ ವ್ಯವಸ್ಥೆ ಬಂದಿದೆ. ಅದು ಇದೀಗ ಸಾಮಾಜಿಕ ಸೇವೆ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, ಮುಂದೊಂದು ದಿನ ಉದ್ಯಮವಾಗಲಿದೆ. ಉತ್ತಮ ಪತ್ರಿಕೋದ್ಯಮ ಮಾಡುವವರು ಈ ಮಾರ್ಗದತ್ತ ಸಾಗಬಹುದು ಎಂದರು.
ಹಿರಿಯ ಪತ್ರಕರ್ತ ಮೋಹನ ಹೆಗಡೆ ಮಾತನಾಡಿ, ಆಗ ಪತ್ರಕರ್ತ ಬರೆದ ವರದಿಗಳಿಗೆ ಪ್ರತಿಕ್ರಿಯೆಗಳು ಬರುತ್ತಿದ್ದವು. ಟೆಲಿಗ್ರಾಂ ಮೂಲಕ ಸುದ್ದಿ ಕಳಿಸುವ ಕಾಲ ಅದಾಗಿತ್ತು. ಇಂದು ಫಾರ್ವರ್ಡ್ ಸುದ್ದಿಗಳ ಅಬ್ಬರ ಜೋರಾಗಿದೆ. ಹಿಂದಿನ ಪತ್ರಿಕೋದ್ಯಮದಲ್ಲಿ ವಿಶ್ವಾಸವಿತ್ತು. ಪ್ರಸ್ತುತ ನಮಗೆ ಓದುಗರು ಬೇಕಾಗಿದ್ದಾರೆ. ಆದರೆ, ಓದುವ ಹವ್ಯಾಸವನ್ನು ಕಿತ್ತುಕೊಳ್ಳಲಾಗಿದೆ. ಎಂದರು.ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಮಾತನಾಡಿ, ದೇಶದಲ್ಲಿ 1.40 ಲಕ್ಷ ನೋಂದಾಯಿತ ಪತ್ರಿಕೆಗಳಿವೆ. ಇಷ್ಟೊಂದು ಪತ್ರಿಕೆಗಳಲ್ಲಿ ಜನರ ಸಮಸ್ಯೆಗಳ ಕುರಿತು ಸಾಕಷ್ಟು ವರದಿಗಳು ಪ್ರಕಟವಾಗಿವೆ. ವರದಿಗಳಿಗೆ ಆಡಳಿತ ವರ್ಗ ಸ್ಪಂದಿಸಿದ್ದರೆ ದೇಶ ನಂದನವನವಾಗುತ್ತಿತ್ತು. ಜಗತ್ತಿಗೆ ಟಿವಿ ಚಾನಲ್‌ಗಳು ಬಂದಾಗ ಪತ್ರಿಕೆಗಳ ಆಯಸ್ಸು ಮುಗಿಯಿತು ಎಂಬ ಮಾತುಗಳು ಕೇಳಿ ಬಂದವು. ಆದರೆ ನಿಜವಾಗಿಯೂ ಪತ್ರಿಕೆಗಳಿಗೆ ಸಮಸ್ಯೆ ಎದುರಾಗಿದ್ದು ಕೋವಿಡ್ ಕಾಲಘಟ್ಟದಲ್ಲಿ. ಆದರೂ ಪತ್ರಿಕೆಗಳ ಮುದ್ರಣ ಮಾಡುವುದನ್ನು ನಿಲ್ಲಿಸಲಿಲ್ಲ. ಏಕೆಂದರೆ ಪತ್ರಕೆ ಹಿಂದೆ ದುಡಿಯುವ ಸಾಕಷ್ಟು ಜನರ ಬದುಕು ಅಲ್ಲಿತ್ತು. ಇಂದಿಗೂ ಓದುಗ ವರ್ಗ ಇದೆ. ಆದರೆ, ಮುಂದೆ ಸುದ್ದಿಯನ್ನು ಯಾರಿಗೆ ಕೊಡುತ್ತೇವೆ, ಹೇಗೆ ಕೊಡುತ್ತೇವೆ ಎಂಬ ಗೊಂದಲದಲ್ಲಿ ನಾವಿದ್ದೇವೆ ಎಂದರು.