ಧಾರವಾಡ: ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ ಸಹಕಾರದಲ್ಲಿ ಕ್ರೀಡಾ ಸ್ಪೋರ್ಟ್ಸ್ ಮೆಡಿಸನ್ ಅಸೋಸಿಯೇಶನ್ ಹಲವು ಸಂಸ್ಥೆಗಳ ಜೊತೆಗೂಡಿ ಇಲ್ಲಿಯ ಜೆಎಸ್‌ಎಸ್ ಉತ್ಸವ ಸಭಾಂಗದಲ್ಲಿ ಆಯೋಜಿಸಿದ್ದ ಕ್ರೀಡಾ ವೈದ್ಯಕೀಯ, ಕ್ರೀಡಾ ವಿಜ್ಞಾನ ಹಾಗೂ ಡೋಪಿಂಗ್ ವಿರೋಧಿ ಶಿಕ್ಷಣ ಕುರಿತ ಈ ರಾಷ್ಟ್ರೀಯ ವಿಚಾರ ಸಂಕಿರಣ ಯಶಸ್ವಿಯಾಯಿತು.
ದಿನವಿಡೀ ನಡೆದ ವೈಜ್ಞಾನಿಕ ಅಧಿವೇಶನಗಳಲ್ಲಿ ತಜ್ಞರಾದ ಡಾ. ಅಶೋಕ್ ಅಹುಜಾ, ಡಾ. ಕಿರಣ್ ಕುಲಕರ್ಣಿ, ಡಾ. ಭರತ್ ಕುಮಾರ್, ಡಾ. ಲತಾ ಮುಷಣ್ಣವರ, ಪ್ರಶಾಂತ್ ಹಿಪ್ಪರಗಿ ಉಪನ್ಯಾಸ ನೀಡಿದರು.
ಕ್ರೀಡೆಯ ಸಂದರ್ಭದಲ್ಲಿ ಉಂಟಾದ ಗಾಯಗಳ ತಡೆಗಟ್ಟುವಿಕೆ, ವ್ಯಾಯಾಮ ಶರೀರಶಾಸ್ತ್ರ, ಪೌಷ್ಟಿಕಾಂಶ, ಬಯೋಮೆಕಾನಿಕ್ಸ್, ಮಾನಸಿಕ ಆರೋಗ್ಯ ಹಾಗೂ ನಾಡಾ ಮತ್ತು ವಾಡಾ ಸಂಸ್ಥೆಗಳ ಇತ್ತೀಚಿನ ಡೋಪಿಂಗ್ ವಿರೋಧಿ ನಿಯಮಗಳ ಕುರಿತು ವಿಚಾರಗೋಷ್ಠಿಗಳು ಹಾಗೂ ಸಂವಾದಗಳು ನಡೆದವು.ಯುವ ಕ್ರೀಡಾಪಟುಗಳನ್ನು ಡೋಪಿಂಗ್‌ನಿಂದ ರಕ್ಷಿಸುವಲ್ಲಿ ಸಹಾಯಕ ಸಿಬ್ಬಂದಿಯ ಪಾತ್ರ, ವೈಜ್ಞಾನಿಕ ತರಬೇತಿ ವಿಧಾನಗಳು, ಆಹಾರ ಮತ್ತು ಪೌಷ್ಟಿಕಾಂಶ, ಕ್ರೀಡಾ ಮನೋವಿಜ್ಞಾನ, ಕ್ರೀಡಾ ದಂತಚಿಕಿತ್ಸೆ, ಗಾಯಗಳ ತಡೆ ಹಾಗೂ ಪುನರ್ವಸತಿ ಕುರಿತು ಉಪನ್ಯಾಸದಲ್ಲಿ ಒತ್ತು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ, ಭಾರತದಲ್ಲಿ ಸುಸ್ಥಿರ ಕ್ರೀಡಾ ಪರಿಸರ ನಿರ್ಮಾಣಕ್ಕೆ ಕ್ರೀಡಾ ವೈದ್ಯಕೀಯ, ಕ್ರೀಡಾ ವಿಜ್ಞಾನ ಹಾಗೂ ಡೋಪಿಂಗ್ ವಿರೋಧಿ ಶಿಕ್ಷಣದ ಸಮನ್ವಯ ಅತ್ಯಗತ್ಯ. ನಮ್ಮ ಕ್ರೀಡಾಪಟುಗಳು ಹಾಗೂ ಸಹಾಯಕ ಸಿಬ್ಬಂದಿಗೆ ವಿಜ್ಞಾನ ಮತ್ತು ನೈತಿಕತೆ ಎರಡರಲ್ಲೂ ಸಮರ್ಪಕ ಅರಿವು ಮೂಡಿಸಬೇಕು ಎಂದರು.
ಶೂಟರ್ ಐಶ್ವರ್ಯ ಬಾಳೆಹೊಸೂರು ಮಾತನಾಡಿ, ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಕ್ರೀಡಾ ವೈದ್ಯರು, ತರಬೇತುದಾರರು, ಫಿಸಿಯೋಥೆರಪಿಸ್ಟ್‌ಗಳು ಹಾಗೂ ಕ್ರೀಡಾ ಮನೋವಿಜ್ಞಾನಿಗಳ ಬಲಿಷ್ಠ ಬೆಂಬಲ ಅತ್ಯಗತ್ಯ ಎಂದರು.