ಪತ್ರಕರ್ತರಿಗೆ ಜನಪರ ಕಾಳಜಿ ಅಗತ್ಯ: ದೇಸಾಯಿ

KannadaprabhaNewsNetwork |  
Published : Aug 04, 2026, 02:15 AM IST
ಚಿತ್ರ : 2ಎಂಡಿಕೆ1 : ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.  | Kannada Prabha

ಸಾರಾಂಶ

ಪತ್ರಕರ್ತನಿಗೆ ಸಮಾಜಮುಖಿ ಬದ್ಧತೆ, ಸತ್ಯನಿಷ್ಠೆ ಮತ್ತು ಜನಪರ ಕಾಳಜಿ ಮುಖ್ಯ. ಪತ್ರಕರ್ತನು ತನ್ನ ಪದವಿಯಿಂದಲ್ಲ. ತನ್ನ ಕಾರ್ಯದಿಂದ ಗುರುತಿಸಲ್ಪಡುತ್ತಾನೆ ಎಂದು ಬೆಳಗಾವಿ ಆವೃತ್ತಿಯ ದಿ ಹಿಂದೂ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಹೃಷಿಕೇಶ್ ಬಹದ್ದೂರ್ ದೇಸಾಯಿ ಹೇಳಿದರು.

ಮಡಿಕೇರಿ: ಪತ್ರಕರ್ತನಿಗೆ ಸಮಾಜಮುಖಿ ಬದ್ಧತೆ, ಸತ್ಯನಿಷ್ಠೆ ಮತ್ತು ಜನಪರ ಕಾಳಜಿ ಮುಖ್ಯ. ಪತ್ರಕರ್ತನು ತನ್ನ ಪದವಿಯಿಂದಲ್ಲ. ತನ್ನ ಕಾರ್ಯದಿಂದ ಗುರುತಿಸಲ್ಪಡುತ್ತಾನೆ ಎಂದು ಬೆಳಗಾವಿ ಆವೃತ್ತಿಯ ದಿ ಹಿಂದೂ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಹೃಷಿಕೇಶ್ ಬಹದ್ದೂರ್ ದೇಸಾಯಿ ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಪತ್ರಿಕಾ ದಿನವು ಕೇವಲ ಸಂಭ್ರಮದ ದಿನವಲ್ಲ. ಆತ್ಮಾವಲೋಕನ ಮಾಡಿಕೊಳ್ಳುವ ದಿನವೂ ಹೌದು. ಕೃತಕ ಬುದ್ಧಿಮತ್ತೆ (ಎಐ) ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಸಾಂಪ್ರದಾಯಿಕ ಮಾಧ್ಯಮಗಳು ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಿವೆ. ‘ಎಐ’ನಂತಹ ಆವಿಷ್ಕಾರಗಳು ಪತ್ರಕರ್ತರು ಪ್ರಶ್ನಿಸುವ ಮನೋಭಾವವನ್ನೇ ಕಸಿಯುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೂ ಪರಿಣಾಮ ಬೀರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಪತ್ರಕರ್ತರು ಸದಾ ವೃತ್ತಿಯ ಒತ್ತಡದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಸಮಾಜದ ಎಲ್ಲ ವರ್ಗಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಶ್ರಮಜೀವಿಗಳಾಗಿದ್ದಾರೆ ಎಂದರು.ಸಮಾಜ ಸೇವಕ ಹಾಗೂ ಉದ್ಯಮಿ ಎಡಿಕೇರಿ ಪ್ರಸನ್ನ ಮಾತನಾಡಿ, ಪತ್ರಕರ್ತರ ಸೇವೆಯನ್ನು ಸಮಾಜ ಗುರುತಿಸಿ, ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಗೌರವ ನೀಡಬೇಕು. ಪತ್ರಕರ್ತರ ಬದುಕಿನಲ್ಲಿ ಏಳು-ಬೀಳುಗಳು ಸಹಜವಾಗಿದ್ದರೂ, ಸಮಾಜದ ಹಿತಕ್ಕಾಗಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ದುಬಾರಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಶಿಕ್ಷಣ ಉಚಿತವಾಗಿ ದೊರೆಯುವಂತಾಗಬೇಕು ಎಂದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್. ಸವಿತಾ ರೈ ಪ್ರಾಸ್ತಾವಿಕ ಮಾತನಾಡಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಅಧ್ಯಕ್ಷತೆ ವಹಿಸಿದ್ದರು.ಸನ್ಮಾನ-ಪ್ರತಿಭಾ ಪುರಸ್ಕಾರ: ಪತ್ರಿಕಾ ದಿನದ ಅಂಗವಾಗಿ ಗೋಣಿಕೊಪ್ಪ ಭಾಗದ ಪತ್ರಿಕಾ ವಿತರಕ ಕೆ.ಕೆ. ವಿನೋದ್ ಹಾಗೂ ಇತ್ತೀಚಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ಕೊಡಮಾಡುವ ತೆರೆಮರೆ ಸಾಧಕ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ, ಮಾಧ್ಯಮ ಸ್ಪಂದನ ತಂಡದ ಸಂಸ್ಥಾಪಕ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮೃದ್ಧಿ ವಾಸು ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಎಚ್.ಜೆ. ರಾಕೇಶ್ ಸ್ವಾಗತಿಸಿ, ಉಪಾಧ್ಯಕ್ಷ ವಾಸು ವಂದಿಸಿದರು. ಜಗದೀಶ್ ಜೋಡುಬೀಟಿ, ಚನ್ನನಾಯಕ, ರವಿ ಕುಮಾರ್, ಪ್ರಭುದೇವ್ ಅತಿಥಿ ಪರಿಚಯ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ ಖಚಿತ: ಸುಮತಿ
ಮಕ್ಕಳಿಗೆ ಸಂಪ್ರದಾಯ ಅರಿವು ಅಗತ್ಯ: ರಶ್ಮಿ ಪೂವಮ್ಮ