ಮಡಿಕೇರಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ಪೋಕ್ಸೊ ಕಾಯಿದೆಯಡಿ ದಂಡ ಹಾಗೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಮಕ್ಕಳ ವಿಶೇಷ ಪೊಲೀಸ್ ಘಟಕದ ಎಸ್ಐ ಸುಮತಿ ಹೇಳಿದರು. ಕೊಡಗು ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಅಕ್ಕಪಡೆ ಸಹಯೋಗದಲ್ಲಿ ಕೊಡಗರಹಳ್ಳಿ ಶಾಂತಿನಿಕೇತನ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ನಡೆದ ಮಾನವ ಕಳ್ಳ ಸಾಗಾಟ ತಡೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ತಿಂಡಿ ತಿನಿಸುಗಳ ಆಮಿಷ ಒಡ್ಡಿ ಮಾನವ ಕಳ್ಳ ಸಾಗಾಟವನ್ನು ನಡೆಸುತ್ತಿದ್ದು, ಅಂತಹ ಪ್ರಕರಣಗಳು ಕಂಡುಬಂದರೆ 1098ಗೆ ಅಥವಾ ಪೊಷಕರು ಮತ್ತು ಶಿಕ್ಷಕರಿಗೆ ಮಾಹಿತಿ ನೀಡಬೇಕು. ಬಾಲ್ಯ ವಿವಾಹ, ಬಾಲ ಕಾರ್ಮಿಕ ನಿಷೇಧ ಕಾಯಿದೆ, ಪೋಕ್ಸೊ ಕಾಯಿದೆ, ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮ, ಸೈಬರ್ ಕ್ರೈಂ, ಅತಿಯಾದ ಮೊಬೈಲ್ ಬಳಕೆಯ ದುಷ್ಪರಿಣಾಮ, ಕಡ್ಡಾಯ ಶಿಕ್ಷಣ ಮತ್ತು ಶಿಕ್ಷಣದ ಮಹತ್ವ, ಬೇಟಿ ಬಚಾವೋ ಬೇಟಿ ಪಡಾವೋ, ಏಕ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ದೊರಕುವ ಆರ್ಥಿಕ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದ ಅವರು, ಸರ್ಕಾರದಿಂದ ಲಭ್ಯವಾಗುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ತುರ್ತು ಸಂದರ್ಭದಲ್ಲಿ ಸಹಾಯವಾಣಿ ಸಂಖ್ಯೆ 112, 1098, 181, 1930ನ್ನು ಬಳಸಿಕೊಳ್ಳುವಂತೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲಿಸ್ಟ್ ಕೇಶಿನಿ ಎಸ್. ಆರ್ ಮಾತನಾಡಿ, ಮಾನವ ಕಳ್ಳ ಸಾಗಾಟ, ಮೋಸ, ಬೆದರಿಕೆ, ಬಲವಂತವಾಗಿ ವ್ಯಕ್ತಿಗಳ ಸಾಗಾಟ, ಅವರ ಶೋಷಣೆ ವಿರುದ್ಧ ಎಚ್ಚರಿಕೆ ವಹಿಸುವಂತೆ ತಿಳಿಸಿದರು. ಮಾನವ ಕಳ್ಳ ಸಾಗಾಟ ಒಂದು ಗಂಭೀರ ಅಪರಾಧವಾಗಿದ್ದು, ಇದನ್ನು ತಡೆಯಲು ಸರ್ಕಾರ, ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಗ್ರಾಪಂ ಮಟ್ಟದಲ್ಲಿ, ಸಾರ್ವಜನಿಕರು ಒಟ್ಟಾಗಿ ಕಾರ್ಯನಿರ್ವಹಿಸುವುದು ಅತ್ಯಗತ್ಯ ಎಂದರು. ಪೊಲೀಸ್ ಇಲಾಖೆಯ ಹರೀಶ್ ಟಿ.ಎಸ್., ಅಕ್ಕಪಡೆ ತಂಡದ ಸಿಬ್ಬಂದಿಗಳಾದ ಪ್ರೇಮ, ಶೋಭಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತುಳಸಿ, ಇತರೆ ಸಿಬ್ಬಂದಿ ಹಾಜರಿದ್ದರು. ಮಾನವ ಕಳ್ಳ ಸಾಗಾಟ ತಡೆ ಕಾಯಿದೆ ಕುರಿತು ಮಕ್ಕಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.