ವಸ್ತುನಿಷ್ಠೆಯನ್ನು ನಿರಂತರವಾಗಿ ಕಾಪಾಡಿಕೊಂಡರೆ ಮಾತ್ರ ಸಮಾಜ ಪತ್ರಕರ್ತರನ್ನು ಗುರುತಿಸುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ವಸ್ತುನಿಷ್ಠೆಯನ್ನು ನಿರಂತರವಾಗಿ ಕಾಪಾಡಿಕೊಂಡರೆ ಮಾತ್ರ ಸಮಾಜ ಪತ್ರಕರ್ತರನ್ನು ಗುರುತಿಸುತ್ತದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಬೆಳ್ತಂಗಡಿಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪತ್ರಕರ್ತರ ಸಮಸ್ಯೆ ಮತ್ತು ಬವಣೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದ ಅವರು, ತಾಲೂಕು ಸಂಘದ ಕಟ್ಟಡದ ಜಾಗ ಖರೀದಿಗೆ ವೈಯಕ್ತಿಕವಾಗಿ 2 ಲಕ್ಷ ರು. ಹಾಗೂ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 20 ಲಕ್ಷ ರು. ನೀಡುತ್ತೇನೆ. ಅಲ್ಲದೆ ವಿವಿಧ ಸಿಎಸ್ಆರ್ ನಿಧಿಗಳನ್ನು ಒದಗಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಅವರು, ಸಂಘದ ಜಾಗಕ್ಕೆ 1 ಲಕ್ಷ ರು. ಹಾಗೂ ಪೀಠೋಪಕರಣಗಳ ಖರೀದಿಗೆ 1 ಲಕ್ಷ ರು. ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪುಷ್ಪರಾಜ್ ಮಾತನಾಡಿ, ಪತ್ರಕರ್ತರ ಕೆಲಸ ಸಮಾಜಮುಖಿಯಾದುದು. ಹೀಗಾಗಿ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದರು.
ದಾಂಡೇಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ್ ಜೈನ್ ಉಪನ್ಯಾಸ ನೀಡಿದರು. ಮಂಜುವಾಣಿ ಮಾಸ ಪತ್ರಿಕೆ ಸಂಪಾದಕ ಭಾಸ್ಕರ್ ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ಇಂದಾಜೆ, ಜಿಲ್ಲಾ ಸಮಿತಿ ಸದಸ್ಯ ಭುವನೇಶ್ ಜಿ. ಉಪಸ್ಥಿತರಿದ್ದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಾಮ್ ಬಿ. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವೇಣೂರು ಪ್ರೌಢಶಾಲೆಯ ಸಮೃದ್ಧಿ ಜೈನ್, ಗುರುವಾಯನಕೆರೆ ಪ್ರೌಢ ಶಾಲೆಯ ಮೊಹಮ್ಮದ್ ಶಹಜಾದ್ ಹಾಗೂ ಸವಣಾಲು ಪ್ರೌಢಶಾಲೆಯ ಅಪೇಕ್ಷಾ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಉಜಿರೆ ಎಸ್.ಡಿ.ಎಂ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಸುನಿಲ್ ಹೆಗ್ಡೆ ಅವರನ್ನು ಗೌರವಿಸಲಾಯಿತು.ನಾಲ್ಕು ಅಸಹಾಯಕ ಕುಟುಂಬಗಳಿಗೆ ''''''''''''''''ದಿತಿ ಸಾಂತ್ವನ ನಿಧಿ''''''''''''''''ಯನ್ನು ಶಾಸಕರು ಹಸ್ತಾಂತರಿಸಿದರು.ಪ್ರಧಾನ ಕಾರ್ಯದರ್ಶಿ ಮನೋಹರ ಬಳಂಜ ಸ್ವಾಗತಿಸಿದರು. ಕಾರ್ಯದರ್ಶಿ ಶಿಬಿ ಧರ್ಮಸ್ಥಳ ವಂದನಾರ್ಪಣೆ ಮಾಡಿದರು. ಸದಸ್ಯ ಅಶ್ರಫ್ ಆಲಿಕುಂಞಿ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.