ಪತ್ರಕರ್ತರು ನಿರಂತರ ಅಧ್ಯಯನಶೀಲರಾಗಲಿ

KannadaprabhaNewsNetwork | Published : Dec 17, 2024 1:04 AM

ಸಾರಾಂಶ

ದಿ.ಜಗನ್ನಾಥರಾವ ಟಂಕಸಾಲಿರವರ ಅದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡೋಣ ಎಂದು ಕನ್ನಡಪ್ರಭ ಪತ್ರಿಕೆ ಜಿಲ್ಲಾ ವರದಿಗಾರ ಈಶ್ವರ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಈಗಿನ ಪತ್ರಿಕೋದ್ಯಮ ಕ್ಷೇತ್ರವು ಸಾಕಷ್ಟು ಬದಲಾವಣೆಯಾಗಿದೆ. ಪತ್ರಕರ್ತರಾದವರು ನಿರಂತರ ಅಧ್ಯಯನಶೀಲರಾಗಬೇಕು. ಒತ್ತಡದ ಬದುಕಿನಲ್ಲಿ ಸಮಾಜಕ್ಕೆ ಮಾಹಿತಿ ನೀಡುವಲ್ಲಿ ಮಾಡಿದ ಪ್ರಯತ್ನಕ್ಕೆ ಒಲಿದ ಈ ಪ್ರಶಸ್ತಿಯಿಂದ ನಮ್ಮ‌ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ದಿ.ಜಗನ್ನಾಥರಾವ ಟಂಕಸಾಲಿರವರ ಅದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡೋಣ ಎಂದು ಕನ್ನಡಪ್ರಭ ಪತ್ರಿಕೆ ಜಿಲ್ಲಾ ವರದಿಗಾರ ಈಶ್ವರ ಶೆಟ್ಟರ ಹೇಳಿದರು.

ದಿ.ಟಂಕಸಾಲಿ ಪ್ರತಿಷ್ಠಾನ ಹಾಗೂ ಹಿಂದಿ ಪ್ರಚಾರ ಸಂಘ ಮುಧೋಳ ಆಶ್ರಯದಲ್ಲಿ ಸೋಮವಾರ ನಗರದ ಟಂಕಸಾಲಿ ಭವನದಲ್ಲಿ ನಡೆದ ದಿ.ಜಗನ್ನಾಥರಾವ ಟಂಕಸಾಲಿ ಸ್ಮರಣಾರ್ಥ 24ನೇ ಸನ್ಮಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವಿಕರಿಸಿ ಮಾತನಾಡಿದ ಅವರು, ದೊಡ್ಡವರು ದೊಡ್ಡವರನ್ನು ಸನ್ಮಾನಿಸಿ ದೊಡ್ಡವರಾಗುವದಕ್ಕಿಂತ ಸಣ್ಣವರನ್ನು ಸನ್ಮಾನಿಸಿ ದೊಡ್ಡವರಾಗುವದು ಯೋಗ್ಯ. ಅರ್ಜಿ ಹಾಕಿ ಪ್ರಶಸ್ತಿಗೆ ಭಾಜನರಾಗುವ ಇಂದಿನ ದಿನಗಳಲ್ಲಿ ಯಾವುದೇ ಅರ್ಜಿ ಹಾಕದೇ ಹಿರಿಯ ಸಾಧಕರ ಹೆಸರಿನ ಈ ಪ್ರಶಸ್ತಿ ನನಗೆ ಲಭಿಸಿದ್ದು ಹೆಮ್ಮೆಯ ಸಂಗತಿ ಆಗಿದೆ. ನನ್ನ ಸಾಧನೆ ಶ್ರೇಯಸ್ಸು ನನ್ನನ್ನು ಬೆಳಕಿಗೆ ತಂದ ಕನ್ನಡಪ್ರಭ ಪತ್ರಿಕೆಗೆ ಸಲ್ಲುತ್ತದೆ. ಇದು ಬಯಸದೇ ಬಂದ ಭಾಗ್ಯ ಎಂದರು.

ಇನ್ನೊರ್ವ ಪತ್ರಕರ್ತ ಬಿ.ಎಚ್.ಬೀಳಗಿ ಪ್ರಶಸ್ತಿ ಪಡೆದುಕೊಂಡು ಮಾತನಾಡಿ, ನಾವು ಆರಂಭದಲ್ಲಿ ಸುದ್ದಿ ಹೇಗೆ ಕಳಿಸುತ್ತಿದ್ದೇವು ಎಂಬುದನ್ನು ಸ್ಮರಿಸಿಕೊಂಡರು. ಹಿಂದಿ ಪ್ರಚಾರಕ ಕಲಘಟಗಿ ಆಂಗ್ಲ ಶಾಲೆಯ ಮು.ಗು ಕೇಶವ ಡೊಂಗಿ, ಬೀಳಗಿ ಡಾ.ವಿದ್ಯಾ ದ. ಮಹೇಂದ್ರ ಕರ ಅವರು ಟಂಕಸಾಲಿ ಪ್ರತಿಷ್ಠಾನದ 24ನೇ ಪ್ರಶಸ್ತಿ ಪುರಸ್ಕಾರ ಪಡೆದುಕೊಂಡು ತಮ್ಮ ಅನಿಸಿಕೆ ಹಂಚಿ ಕೊಂಡರು.

ಸಾ.ಶಿ.ಇಲಾಖೆ ವಿಶ್ರಾಂತ ಉಪನಿರ್ದೆಶಕ ಎಂ.ಜಿ.ದಾಸರ ಅಧ್ಯಕ್ಷತೆವಹಿಸಿ ಮಾತನಾಡಿ, ಮುಧೋಳದ ಹಿರಿಯ ಪತ್ರಕರ್ತ ದಿ.ಜಗನ್ನಾಥರಾವ ಅವರು ತಮ್ಮ ಸುದೀರ್ಘ 5 ದಶಕಗಳ ಕಾಲ ಪತ್ರಕರ್ತರಾಗಿ ಅವರು ಸಲ್ಲಿಸಿದ್ದ ಸೇವೆ ಇಂದಿನ ಯುವಕರಿಗೆ ಮಾದರಿಯಾಗಿದೆ. ಮಿತ ಭಾಷಿಕರು, ಹರಿತವಾದ ಲೇಖನ ಮೂಲಕ ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಮತ್ತು ರಾಷ್ಟ್ರ ಭಾಷೆ, ರಾಷ್ಟ್ರ ಸೇವೆ ಯುವಕರಿಗೆ ಹಿಂದಿ ಪ್ರಚಾರ, ಶಿಕ್ಷಣ ಮೂಲಕ ಅವರು ನೀಡುತ್ತಿದ್ದರು. ಮಾತೃ ಭಾಷೆಯಲ್ಲಿ ಪ್ರಭುತ್ವ ಹೊಂದಿದರೆ ಹಿಂದಿ, ಇಂಗ್ಲಿಷ್‌ ಇತರೆ ಭಾಷೆ ಸುಲಭವಾಗಿ ಅರಿಯ ಬಹುದು. ಮನುಷ್ಯ ಆನಂದದಿಂದ ಇರಲು ಸಂಗೀತ, ಸಾಹಿತ್ಯ, ಕಲೆ, ಕ್ರೀಡೆಗಳಲ್ಲಿ ಭಾಗವಹಿಸಬೇಕು ಇಲ್ಲವೆ ಇವುಗಳ ಮನರಂಜನೆ ಪಡೆಯಬೇಕೆಂದರು.

ಟಂಕಸಾಲಿ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಬುದ್ನಿ ಸ್ವಾಗತಿಸಿ, ಟಂಕಸಾಲಿ ಪ್ರತಿಷ್ಠಾನ ಕಾರ್ಯದರ್ಶಿ ಟಿ.ಕೆ.ಹಂಚಾಟೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಉದಯ ವಾಳ್ವೇಕರ ನಿರೂಪಿಸಿ, ಮಿಲಿಂದ ಟಂಕಸಾಲಿ ವಂದಿಸಿದರು.

Share this article