ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಡುಗೆ ಸಿಕ್ಕೀತೆ?

KannadaprabhaNewsNetwork |  
Published : Dec 17, 2024, 01:04 AM ISTUpdated : Dec 17, 2024, 12:02 PM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಬೆಳಗಾವಿ ಅಧಿವೇಶನದಲ್ಲಿ ಈ ವಾರ ಉತ್ತರ ಕರ್ನಾಟಕದ ಬೇಕು, ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ. ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ನಮ್ಮ ಜಿಲ್ಲೆಯ ಶಾಸಕರು ಧ್ವನಿ ಎತ್ತಬೇಕು ಎನ್ನುವುದು ಜನತೆಯ ಬಯಕೆಯಾಗಿದೆ.

ವಸಂತಕುಮಾರ್ ಕತಗಾಲ

ಕಾರವಾರ: ಬೆಳಗಾವಿ ಅಧಿವೇಶನದಲ್ಲಿ ಸೋಮವಾರದಿಂದ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳು, ಅಭಿವೃದ್ಧಿ ಕುರಿತು ಚರ್ಚೆ ಶುರುವಾಗಿದೆ. ಉತ್ತರ ಕನ್ನಡದ ಬಹುಕಾಲದ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಚರ್ಚೆಗೆ ಬರಲಿದೆಯೇ, ಸರ್ಕಾರದ ನಿರ್ಧಾರ ಏನಾಗಲಿದೆ ಎನ್ನುವುದನ್ನು ಜಿಲ್ಲೆಯ ಜನತೆ ಭಾರಿ ನಿರೀಕ್ಷೆಯೊಂದಿಗೆ ಎದುರು ನೋಡುತ್ತಿದ್ದಾರೆ.

ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುವಾಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಗು ಜೋರಾಗಿ ಕೇಳಿಬಂತು. ಅದೊಂದು ಆಂದೋಲನ ರೀತಿಯಲ್ಲಿ ನಡೆಯಿತು. ನಂತರ ಸದನದಲ್ಲೂ ಪ್ರಸ್ತಾಪವಾಯಿತು. ತರುವಾಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಆಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂಗು ತಣ್ಣಗಾಯಿತು.

 ಆಸ್ಪತ್ರೆಗಾಗಿ ನಡೆದ ಹೋರಾಟ, ಪ್ರತಿಭಟನೆ, ಪ್ರಚಾರ ಎಲ್ಲ ರಾಜಕೀಯ ಕಾರಣಕ್ಕಾಗಿ ನಡೆದಿದ್ದು ಎಂಬ ಅಭಿಪ್ರಾಯವನ್ನು ಈಗ ಜನತೆ ಮುಂದಿಡುತ್ತಿದ್ದಾರೆ.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಿಯೇ ಮಾಡುತ್ತೇವೆ. ಅಗತ್ಯವಿದ್ದಲ್ಲಿ ತಮ್ಮದೆ ಜಾಗ ಕೊಡುತ್ತೇನೆ ಎಂದು ಆಗ ಬೊಬ್ಬಿರಿದವರು ಈಗ ತಮಗೆ ಸಂಬಂಧವೇ ಇಲ್ಲದಂತೆ ತೆಪ್ಪಗಿದ್ದಾರೆ. ಕೇವಲ ಚುನಾವಣೆ ಗೆಲ್ಲುವುದಕ್ಕಾಗಿ ತೋರಿದ ಪೌರುಷ ಎಂಬಂತಾಗಿದೆ. ಇಡೀ ಜಿಲ್ಲೆಯಲ್ಲಿ ಒಂದೇ ಒಂದು ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಹೃದಯಾಘಾತ, ಅಪಘಾತ ಉಂಟಾದಲ್ಲಿ ಮಂಗಳೂರು, ಗೋವಾ, ಬೆಳಗಾವಿ, ಹುಬ್ಬಳ್ಳಿ- ಧಾರವಾಡ, ಶಿವಮೊಗ್ಗಗಳ ಆಸ್ಪತ್ರೆಗಳಿಗೆ ಕರೆದೊಯ್ಯುವಷ್ಟರಲ್ಲಿ ರೋಗಿಗಳು ಅಸುನೀಗಿದ ಉದಾಹರಣೆಗಳಿವೆ.

ಬಡವರು ಹಾಗೂ ಮಧ್ಯಮ ವರ್ಗದವರಿಗೆ ದೂರದ ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುವುದೂ ಕಷ್ಟಕರವಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಜನತೆಯ ಗೋಳು ಹಾಗೆ ಇದೆ. ಆದರೆ ಆಸ್ಪತ್ರೆಯ ಬಗ್ಗೆ ಮಾತ್ರ ಗಂಭೀರವಾದ ಯಾವ ಪ್ರಯತ್ನವೂ ಕಾಣಿಸುತ್ತಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ವಾರ ಉತ್ತರ ಕರ್ನಾಟಕದ ಬೇಕು, ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ. ಜಿಲ್ಲೆಯ ಬಹುಕಾಲದ ಬೇಡಿಕೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ನಮ್ಮ ಜಿಲ್ಲೆಯ ಶಾಸಕರು ಧ್ವನಿ ಎತ್ತಬೇಕು ಎನ್ನುವುದು ಜನತೆಯ ಬಯಕೆಯಾಗಿದೆ. ಸದನದಲ್ಲಿ ಚರ್ಚೆಯಾಗಿ ಇದಕ್ಕೊಂದು ಪರಿಹಾರ ದೊರೆಯಲಿ, ನಮ್ಮ ಶಾಸಕರು, ಸಚಿವರು ಪಕ್ಷಾತೀತವಾಗಿ ಧ್ವನಿ ಎತ್ತಲಿ ಎನ್ನುವುದು ಜಿಲ್ಲೆಯ ಜನತೆಯ ಬೇಡಿಕೆಯಾಗಿದೆ.

ಡಾ. ಜಿ.ಜಿ. ಹೆಗಡೆ ಪ್ರಯತ್ನ

ಈ ನಡುವೆ ಕುಮಟಾದ ಡಾ. ಜಿ.ಜಿ. ಹೆಗಡೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಗಂಭೀರ ಹೆಜ್ಜೆ ಇಟ್ಟಿದ್ದಾರೆ. ಸರ್ಕಾರದ ಸಹಕಾರದಿಂದ ಸಮಾನ ಮನಸ್ಕರು ಸೇರಿ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ಈಗಾಗಲೆ ಸಭೆ ನಡೆಸಿ ಜನಾಭಿಪ್ರಾಯ ರೂಪಿಸಿದ್ದಾರೆ. ಸ್ವತಃ ವೈದ್ಯರಾಗಿ, ಸಮಾಜಮುಖಿ ಸೇವೆಯಲ್ಲಿ ತೊಡಗಿಕೊಂಡಿರುವ ಡಾ. ಜಿ.ಜಿ. ಹೆಗಡೆ ಈ ಪ್ರಯತ್ನಕ್ಕಿಳಿದಿರುವುದು ಪ್ರಶಂಸೆಗೆ ಪಾತ್ರವಾಗಿದೆ.

ಸಹಕಾರ ಅಗತ್ಯ: ಸರ್ಕಾರ ಸಹಕಾರ ನೀಡಿದಲ್ಲಿ ನಾವು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲು ಸಿದ್ಧರಿದ್ದೇವೆ. ಈಗಾಗಲೆ 20- 25 ಎಕರೆ ಸ್ಥಳಾವಕಾಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಜಿಲ್ಲೆಗೆ ಈ ಆಸ್ಪತ್ರೆಯ ಅನಿವಾರ್ಯತೆ ಇದೆ. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆದು ಸರ್ಕಾರ ನಿರ್ಧಾರ ಪ್ರಕಟಿಸಬಹುದು ಎಂದು ಆಶಾವಾದ ಹೊಂದಿದ್ದೇನೆ ಎಂದು ಡಾ. ಜಿ.ಜಿ. ಹೆಗಡೆ ತಿಳಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ