ಪತ್ರಕರ್ತರು ಆರೋಗ್ಯದ ಕಡೆ ಗಮನ ಹರಿಸಬೇಕು: ಜಿಲ್ಲಾಧಿಕಾರಿ ಶುಭಕಲ್ಯಾಣ್‌

KannadaprabhaNewsNetwork | Published : Feb 9, 2024 1:45 AM

ಸಾರಾಂಶ

ಒತ್ತಡಗಳ ನಡುವೆ ಕೆಲಸ ಮಾಡುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಒತ್ತಡಗಳ ನಡುವೆ ಕೆಲಸ ಮಾಡುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಲಹೆ ನೀಡಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇತ್ತೀಚೆಗೆ ನಿಧನ ಹೊಂದಿದ ಟೈಮ್ಸ್ ಆಫ್ ಇಂಡಿಯಾ ವರದಿಗಾರರಾದ ಭುವನೇಶ್ವರಿ, ವಿಜಯ ಕರ್ನಾಟಕ ವರದಿಗಾರರಾದ ತುರುವೇಕೆರೆ ತಾಲೂಕಿನ ಕೆ.ಆರ್. ಸ್ವಾಮಿ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಎ.ಆರ್‌. ಮೇರುನಾಥ್, ಅಮೋಘ ವಾಹಿನಿಯ ಶ್ರೀನಿವಾಸರೆಡ್ಡಿ ಅವರಿಗೆ ಸಂತಾಪ ಸೂಚಿಸಲು ಏರ್ಪಡಿಸಿದ್ಧ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮನ್ನು ಅಗಲಿದ ಪತ್ರಕರ್ತರ ಕುಟುಂಬವರಿಗೆ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಂತಾಪ ಸೂಚಿಸಿದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ಪತ್ರಕರ್ತರಿಗೆ ಜಿಲ್ಲಾಡಳಿತದಿಂದ ಪ್ರತಿ ವರ್ಷ ಆರೋಗ್ಯ ಶಿಬಿರವನ್ನು ಏರ್ಪಡಿಸುವ ಉದ್ದೇಶ ಹೊಂದಲಾಗಿದೆ. ಪತ್ರಕರ್ತರ ಸಂಘವು ಅನೇಕ ಬೇಡಿಕೆಗಳನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದು, ಅವುಗಳನ್ನು ಕಾರ್ಯಗತಗೊಳಿಸುವ ಬಗ್ಗೆ ಚಿಂತನೆ ಮಾಡಲಾಗುವುದು. ಜಿಲ್ಲಾಡಳಿತದ ಸಹಕಾರ ಪತ್ರಕರ್ತರಿಗೆ ಸದಾ ಇರುತ್ತದೆ ಎಂದು ತಿಳಿಸಿದರು.

ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್, ಭುವನೇಶ್ವರಿ, ಶ್ರೀನಿವಾಸ್, ಮೇರುನಾಥ್ ಮತ್ತು ಸ್ವಾಮಿ ಅವರು ತಮ್ಮ ಕ್ರಿಯಾಶೀಲ ಬರವಣಿಗೆಯ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದರು. ಅಗಲಿದ ಪತ್ರಕರ್ತ ಕುಟುಂಬಗಳಿಗೆ ಜಿಲ್ಲಾ ಸಂಘದ ವತಿಯಿಂದ ತಲಾ 10 ಸಾವಿರ ರು.ಗಳ ಪರಿಹಾರ ನೀಡಲಾಗುವುದು ಎಂದರು.

ಹಿರಿಯ ಪತ್ರಕರ್ತರಾದ ಚಂದ್ರಮೌಳಿ, ಸಾ.ಚಿ. ರಾಜಕುಮಾರ್‌, ರಂಗರಾಜು, ನಾಗರಾಜು, ವೆಂಕಟಾಚಲ, ರಘುರಾಮ್, ಪರಮೇಶ್ವರ್ ಮಾತನಾಡಿ, ಪತ್ರಕರ್ತರು ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲಾಡಳಿತ ಪತ್ರಕರ್ತರ ನೆರವಿಗೆ ನಿಲ್ಲಬೇಕು ಎಂದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಹರೀಶ್ ಆಚಾರ್ಯ ಸ್ವಾಗತಿಸಿ ನಿರೂಪಣೆ ಮಾಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ, ಸಂಘದ ನಿರ್ದೇಶಕ ಸತೀಶ್ ಹಾರೋಗೆರೆ ಹಾಗೂ ಜಿಲ್ಲೆಯ ಪತ್ರಕರ್ತರು ಉಪಸ್ಥಿತರಿದ್ದರು.

Share this article