
ಹಾವೇರಿ: ಸಮಾಜದ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಪ್ರಯತ್ನಯನ್ನು ಪತ್ರಕರ್ತರು ಮಾಡಬೇಕು. ಈ ವಿಚಾರದಲ್ಲಿ ಪತ್ರಕರ್ತರು ಹೆಚ್ಚಿನ ಆಸಕ್ತಿ ವಹಿಸಬೇಕು. ಪ್ರಸ್ತುತ ದಿನಗಳಲ್ಲಿ ಸಂಶೋಧನಾತ್ಮಕ ಲೇಖನಗಳು, ಸಾರ್ವಜನಿಕ ಸಮಸ್ಯೆಗಳನ್ನು ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸಂಶೋಧನಾತ್ಮಕ ಪತ್ರಿಕೋದ್ಯಮ ಉಳಿಯಬೇಕಾದರೆ ಕ್ರಿಯಾಶೀಲ, ಅಧ್ಯಯನಶೀಲ ಪತ್ರಕರ್ತರು ಉಳಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ಸೋಮವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸುದ್ದಿಯ ಮೂಲಗಳನ್ನು ವಿಮರ್ಶೆ ಮಾಡಿ ಬರೆಯುವುದು ಮುದ್ರಣ ಮಾಧ್ಯಮ. ಅಂತಹ ವಿಮರ್ಶಾ ಬರಹಗಾರರನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳು ಬಂದ ಮೇಲೆ ಮರೆಯುತ್ತಿದ್ದೇವೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹಾಟ್ ಸುದ್ದಿಗಳು ಬಿತ್ತರ ಆಗುತ್ತಿದೆ. ಇದರಿಂದ ಸಮಾಜದಲ್ಲಿ ಏನು ಸಂದೇಶ ಹೋಗುತ್ತದೆ ಎಂಬುದು ಗೊತ್ತಾಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಬರುವ ದಿನಗಳಲ್ಲಿ ಜಿಲ್ಲೆಯ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ₹5 ಲಕ್ಷ ಅನುದಾನ ನೀಡುವುದಾಗಿ ವಾಗ್ದಾನ ಮಾಡಿದರು.ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಮಾತನಾಡಿ, ಕುತೂಹಲ ಮತ್ತು ಅಧ್ಯಯನಶೀಲತೆ ಇರುವ ಮಕ್ಕಳು ಸಮಾಜದಲ್ಲಿ ಮುಂದೆ ಬರುತ್ತಾರೆ. ಮಕ್ಕಳಲ್ಲಿ ಮೊಬೈಲ್, ಟ್ಯಾಬ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಸಂಬಂಧಗಳ ನಡುವಿನ ಬೆಲೆ ಕಡಿಮೆಯಾಗುತ್ತಿದೆ ಎಂದರು.ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.