ಪತ್ರಕರ್ತರು ಸಮಾಜ ತಿದ್ದುವ ಕೆಲಸ ಮಾಡಬೇಕು: ಶಾಸಕ ದರ್ಶನ್ ಪುಟ್ಟಣ್ಣಯ್ಯ

KannadaprabhaNewsNetwork |  
Published : Aug 05, 2025, 12:30 AM IST
4ಕೆಎಂಎನ್ ಡಿ11 | Kannada Prabha

ಸಾರಾಂಶ

ಪಾಂಡವಪುರದಲ್ಲಿ ಪತ್ರಕರ್ತರ ಸಂಘದ ಭವನ ನಿರ್ಮಾಣ ಮಾಡಲು ಈ ಹಿಂದೆಯೇ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ, ಅದು ನಿವೇಶನದ ಸಮಸ್ಯೆಯಿಂದಾಗಿ ಇನ್ನೂ ಕಾರ್ಯಗತವಾಗಲಿಲ್ಲ. ಸ್ಥಳೀಯ ಶಾಸಕರು, ಅಧಿಕಾರಿಗಳು ಪತ್ರಕರ್ತರ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿಕೊಡುವ ಜೊತೆಗೆ ಭವನ ನಿರ್ಮಾಣಕ್ಕೆ ಸಹಕರಿಸಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪತ್ರಕರ್ತರು ವಸ್ತುನಿಷ್ಠ ಸುದ್ದಿ ಪ್ರಕಟಿಸುವ ಜೊತೆಗೆ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದ ಪ್ರಗತಿಗೆ ಪತ್ರಕರ್ತರ ಜವಾಬ್ದಾರಿ ಹೆಚ್ಚಿದೆ. ತಪ್ಪು ದಾರಿಯಲ್ಲಿ ನಡೆಯುವ ನಮ್ಮಂತ ರಾಜಕಾರಣಿಗಳ ತಿದ್ದುವ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮದ ಆಯಾಮ ಬದಲಾಗುತ್ತಿದೆ. ಆದರೆ, ಮಾಧ್ಯಮಗಳು ಎಂದಿಗೂ ಸಮಸಮಾಜ ನಿರ್ಮಾಣ ಮಾಡುವ ಕಡೆಗೆ ಇರಬೇಕು. ನೊಂದವರ, ಅನ್ಯಾಯಕ್ಕೆ ಒಳಗಾದ ಜನರ ಧ್ವನಿಯಾಗಿ ಪತ್ರಕರ್ತರು ಕೆಲಸ ಮಾಡಬೇಕು ಎಂದರು.

ರಾಜ್ಯ ಕಾರ್ಯದರ್ಶಿ ಮತ್ತಿಕೆರೆ ಜಯರಾಮು ಮಾತನಾಡಿ, ಪಾಂಡವಪುರದಲ್ಲಿ ಪತ್ರಕರ್ತರ ಸಂಘದ ಭವನ ನಿರ್ಮಾಣ ಮಾಡಲು ಈ ಹಿಂದೆಯೇ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ, ಅದು ನಿವೇಶನದ ಸಮಸ್ಯೆಯಿಂದಾಗಿ ಇನ್ನೂ ಕಾರ್ಯಗತವಾಗಲಿಲ್ಲ. ಸ್ಥಳೀಯ ಶಾಸಕರು, ಅಧಿಕಾರಿಗಳು ಪತ್ರಕರ್ತರ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿಕೊಡುವ ಜೊತೆಗೆ ಭವನ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.

ಪತ್ರಿಕೋದ್ಯಮ ವೇಗವಾಗಿ ಬೆಳೆಯುತ್ತಿದೆ. ಅಂಬೇಡ್ಕರ್, ಗಾಂಧೀಜಿ ಅವರು ಸಹ ಪತ್ರಕರ್ತರಾಗಿ ಕೆಲಸ ಮಾಡಿ ನಮಗೆಲ್ಲ ಆದರ್ಶವಾಗಿದ್ದಾರೆ. ನಾವೆಲ್ಲರು ಸಮಾಜದ ಪೂರಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘವು ರಾಜ್ಯದಲ್ಲಿಯೇ ಮಾದರಿಯಾಗಿ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ 250 ಕ್ಕೂ ಹೆಚ್ಚು ಪತ್ರಕರ್ತರಿಗೆ ವಿಮೆ ಸೌಲಭ್ಯ ಒದಗಿಸಿಕೊಡುವ ಮೂಲಕ ಮಾದರಿಯಾಗಿದೆ ಎಂದರು.

ತಾಪಂ ಇಒ ವೀಣಾ ಮಾತನಾಡಿ, ಹಿಂದಿನಿಂದಲ್ಲೂ ಪತ್ರಿಕೋದ್ಯಮ ತಮ್ಮದೆಯಾದ ಛಾಪು ಮೂಡಿಸಿದೆ. ಸ್ಥಳೀಯ ಸಮಸ್ಯೆಗಳು ಸೇರಿದಂತೆ ರಾಜ್ಯ, ರಾಷ್ಟ್ರದಲ್ಲಿ ನಡೆಯುವ ವಿದ್ಯಮಾನಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದೆ ಎಂದರು.

ಪ್ರಜಾಪ್ರಭುತ್ವದ ಬೆನ್ನೆಲುಬಾಗಿ ಪತ್ರಿಕೋದ್ಯಮ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ ಕಾಲದಿಂದಲೂ ಸಾರಿಗೆ ಸೌಲಭ್ಯಗಳ ಕೊರತೆಯ ನಡುಯುವೆಯು ಜನರಿಗೆ ಸುದ್ದಿಮುಟ್ಟಿಸುವ ಕೆಲಸ ಮಾಡಿದೆ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಆಗಮಿಸಿ ಶುಭಕೋರಿದರು. ಈ ವೇಳೆ ಪತ್ರಕರ್ತರ ಸಂಘದಿಂದ ಸಿ.ಎಸ್.ಪುಟ್ಟರಾಜು ಅವರನ್ನು ಅಭಿನಂದಿಸಲಾಯಿತು.

ಗಂಗೋತ್ರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಮೀನಾಕುಮಾರಿ ಅವರು ತಾಲೂಕಿನ ಎಲ್ಲಾ ಪತ್ರಕರ್ತರಿಗೂ ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡಿದರು. ಗಡಿನಾಡ ಸಾಧಕ ಕೆ.ಕೆ.ಶೆಟ್ಟಿ ಕುತ್ತಿಕಾರ್ ಪ್ರಶಸ್ತಿ ಪುರಸ್ಕೃತರು, ರಾಜ್ಯ ಕಾರ್ಯದರ್ಶಿಯಾದ ಮತ್ತಿಕೆರೆ ಜಯರಾಮ್ ಹಾಗೂ ಪತ್ರಕರ್ತ ಕುಮಾರಸ್ವಾಮಿ ಅವರನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಹರವು ಚಂದ್ರಕೀರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ನವೀನ್ ಕುಮಾರ್, ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್, ಖಜಾಂಚಿ ನಂಜುಂಡಸ್ವಾಮಿ, ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಎಸ್.ಜಯರಾಮು, ಚಿನಕುರಳಿ ಲೋಕೇಶ್, ಮಾಜಿ ಅಧ್ಯಕ್ಷರಾದ ಕೆ.ಸಿ.ಮಂಜುನಾಥ್, ಬಿ.ಪಿ.ಪ್ರಕಾಶ್, ರಾಜ್ಯ ಸಮಿತಿ ಸದಸ್ಯದ ಮಂಜುನಾಥ್, ರಾಷ್ಟ್ರೀಯ ಸಮಿತಿ ಸದಸ್ಯ ಜೆ.ಎಂ.ಬಾಲಕೃಷ್ಣ, ಪುರಸಭೆ ಅಧ್ಯಕ್ಷರ ಜ್ಯೋತಿಲಕ್ಷ್ಮಿ, ಸಮಾಜ ಸೇವಕಿ ಮೀನಕುಮಾರಿ, ಜಿಲ್ಲಾ ನಿರ್ದೇಶಕರಾದ ಚನ್ನಮಾದೇಗೌಡ, ನಾಗೇಗೌಡ, ಶಿವನಂಜಯ್ಯ, ಆನಂದ್, ಅಶೋಕ್, ಕೃಷ್ಣ, ತಾಲೂಕು ಉಪಾಧ್ಯಕ್ಷ ಎಸ್.ನಾಗಸುಂದರ್, ಪ್ರಧಾನ ಕಾರ್ಯದರ್ಶಿ ರಘುವೀರ್, ಕಾರ್ಯದರ್ಶಿ ಅನಿಲ್, ಖಜಾಂಚಿ ಭಾಸ್ಕರ್ ಸೇರಿದಂತೆ ಅನೇಕ ತಾಲೂಕು ಹಾಗೂ ಜಿಲ್ಲೆಯ ಹಲವಾರು ಪತ್ರಕರ್ತರು, ಪದಾಧಿಕಾರಿಗಳು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ