ಕನ್ನಡಪ್ರಭ ವಾರ್ತೆ ಹಾಸನ
ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ಹಾಗೂ ಜಿಲ್ಲೆಯ ಜನರ ಪರವಾಗಿ ಜನಾರೋಗ್ಯದ ಹಕ್ಕೊತ್ತಾಯಗಳನ್ನು ಜಿಲ್ಲಾಧಿಕಾರಿಯವರಿಗೆ ಆಗಸ್ಟ್ ೧೪ರಂದು ಸಲ್ಲಿಸಿದ ನಂತರ ಆ. ೧೫ರ ಸ್ವಾತಂತ್ರ್ಯ ದಿನದಂದು ಹಾಸನದ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಂದೆ ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಡಿಸಿಯವರು ಆಗಮಿಸಿ ಹಕ್ಕೊತ್ತಾಯ ಈಡೇರಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯ ಮಾಡಲಾಗುವುದು ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ನಗರದಲ್ಲಿ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೂಡಲೇ ಆರಂಭಿಸುವಂತೆ ಹಾಗೂ ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳಿಗೆ (ಐ.ಪಿ.ಎಚ್.ಎಸ್.) ಅನುಗುಣವಾಗಿ ಸೌಲಭ್ಯಗಳನ್ನು ನೀಡಿ ಉನ್ನತೀಕರಿಸಿ ಸಬಲೀಕರಿಸುವಂತೆ ಆಗ್ರಹಿಸಿ ಹಾಸನ ಜಿಲ್ಲಾ ಜನಪರ ಚಳವಳಿಗಳ ಒಕ್ಕೂಟದ ನೇತೃತ್ವದಲ್ಲಿ "ಜನಾರೋಗ್ಯಕ್ಕಾಗಿ ಜನಾಂದೋಲನ " ಆರಂಭಿಸಲಾಗಿದೆ. ಇದರ ಭಾಗವಾಗಿ ಆಗಸ್ಟ್ ೧೫ರ ಸ್ವಾತಂತ್ರ್ಯ ದಿನದಂದ ಹಾಸನದ ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟದ ಮುಂದೆ ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ. ಮೊದಲಿಗೆ ಜಿಲ್ಲೆಯ ವಿವಿದ ಜನಪರ ಸಂಘಟನೆಗಳು, ಸಂಘಸಂಸ್ಥೆಗಳು ಮತ್ತು ನಾಗರಿಕರಿಂದ ನಿರಂತರ ಸರಣಿ ಪ್ರತಿಭಟನೆಗಳನ್ನು ನಡೆಸಲಾಗುವುದು ಹಾಗೂ ಆಗಸ್ಟ್ ೧೪ರಂದು ಜಿಲ್ಲೆಯ ಜನರ ಪರವಾಗಿ ಜನಾರೋಗ್ಯದ ಹಕ್ಕೊತ್ತಾಯಗಳನ್ನು ಮಾನ್ಯ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗುವುದು. ಆಗಸ್ಟ್ ೧೫ರಂದು ನಡೆಯುವ ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮಾಗೂ ಜಿಲ್ಲಾಧಿಕಾರಿಯವರು ಆಗಮಿಸಿ ಜನಾರೋಗ್ಯದ ಹಕ್ಕೊತ್ತಾಯಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದರು.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಹಿಮ್ಸ್) ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಮಿಕ್ಕ ಆಸ್ಪತ್ರೆಯ ಕಟ್ಟಡದ ತುರ್ತು ಕಾಮಗಾರಿ, ವೈದ್ಯಕೀಯ ಯಂತ್ರೋಪಕರಣ, ತಜ್ಞ ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳ ನೇಮಕಾತಿಗಾಗಿ ಸದ್ಯದ ಅಂದಾಜಿನ ಪ್ರಕಾರ ಕನಿಷ್ಠ ೬೦ ಕೋಟಿ ರುಪಾಯಿಗಳ ಅನುದಾನದ ಅಗತ್ಯವಿದೆ. ಹೃದ್ರೋಗ ಶಸ್ತ್ರಚಿಕಿತ್ಸೆ, ನರರೋಗ, ನರರೋಗ ಶಸ್ತ್ರಚಿಕಿತ್ಸೆ, ಮೂತ್ರಪಿಂಡ, ಗ್ಯಾಸ್ಟ್ರೋಲಜಿ, ಕ್ಯಾನ್ಸರ್, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಮಾರಣಾಂತಿಕ ರೋಗ ತಪಾಸಣೆಯ ಹತ್ತು ವಿಶೇಷ ವಿಭಾಗಗಳ ಗಂಭೀರ ಸ್ವರೂಪದ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ಒದಗಿಸಲು ಇಲ್ಲಿ ಸೌಲಭ್ಯಗಳು ಇದ್ದು, ಇಲ್ಲಿ ರೋಗ ತಪಾಸಣೆ ಮತ್ತು ಚಿಕಿತ್ಸೆ ನೀಡಲು ವೈದ್ಯಕೀಯ ವಿಭಾಗಗಳು, ಕ್ಯಾತ್ ಲ್ಯಾಬ್, ಅತ್ಯಂತ ಸುಸಜ್ಜಿತವಾದ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳಿರುವ ಪ್ರತ್ಯೇಕ ಶಸ್ತ್ರಚಿಕಿತ್ಸಾ ಘಟಕಗಳನ್ನು ಕೂಡಲೇ ಪ್ರಾರಂಭಿಸಬೇಕು. ನುರಿತ ತಜ್ಞ ವೈದ್ಯರು, ವೈದ್ಯರು, ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಯನ್ನು ನೇಮಕ ಮಾಡಿ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಕಾರ್ಯಾರಂಭಕ್ಕೆ ಅಗತ್ಯ ಅನುಕೂಲಗಳನ್ನು ತುರ್ತಾಗಿ ಒದಗಿಸಿ, ಕೂಡಲೇ ಸರ್ಕಾರವು ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಹಿರಿಯ ಸಾಹಿತಿ ರೂಪ ಹಾಸನ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ ಅವುಗಳಿಗೆ ಐ.ಪಿ.ಎಚ್.ಎಸ್. ಮಾನದಂಡಗಳ ಅನುಸಾರ ಪ್ರಾಥಮಿಕ ಸೌಲಭ್ಯಗಳಾದ ಸುಸಜ್ಜಿತ ವೈದ್ಯಕೀಯ ಪ್ರಯೋಗಾಲಯ, ಇಸಿಜಿ, ಎಕೋ, ಎಕ್ಸ್ರೇ, ತುರ್ತು ಚಿಕಿತ್ಸಾ ಘಟಕ ಮತ್ತು ಆಂಬ್ಯುಲೆನ್ಸ್ ಹಾಗೂ ತಜ್ಞ ವೈದ್ಯರು ಮತ್ತು ಸಿಬ್ಬಂದಿಯನ್ನು ಒದಗಿಸಬೇಕು. ತಾಲೂಕು ಆಸ್ಪತ್ರೆಗಳನ್ನು ಐ.ಪಿ.ಎಚ್.ಎಸ್. ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿ ಹೃದಯ ಮತ್ತು ಮೂತ್ರಪಿಂಡ ಸಂಬಂಧಿ ಹಾಗೂ ಇನ್ನಿತರೆ ಮಾರಣಾಂತಿಕ ಕಾಯಿಲೆಗಳ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಬೇಕು ಎಂದರು. ಕೋವಿಡ್ ಲಸಿಕೆಯ ದೂರಗಾಮಿ ಪರಿಣಾಮಗಳಿಂದಾಗಿ ಈ ಬಗೆಯ ಆರೋಗ್ಯ ತುರ್ತು ಪರಿಸ್ಥಿತಿಯು ಎಲ್ಲೆಡೆ ಉಂಟಾಗುತ್ತಿದೆ ಎಂಬ ಅನುಮಾನವು ಜನರನ್ನು ಕಾಡುತ್ತಿದ್ದು, ಈ ಕುರಿತು ಪ್ರತಿ ಆಕಸ್ಮಿಕ ಮತ್ತು ಹಠಾತ್ ಸಾವಿಗೀಡಾದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡಿ, ಪ್ರತ್ಯೇಕ ಮತ್ತು ಆಳವಾದ ಕೂಲಂಕಷ ಅಧ್ಯಯನ ನಡೆಸಿ, ವರದಿ ಬಿಡುಗಡೆ ಮಾಡುವ ಮೂಲಕ ಜನರಲ್ಲಿರುವ ಅನುಮಾನಗಳನ್ನು ದೂರ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ, ಯುವಜನರಿಗೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮಟ್ಟ, ಕಣ್ಣು, ಕಿವಿ, ಸ್ಥೂಲಕಾಯ ಮತ್ತಿತರೆ ಪ್ರಾಥಮಿಕ ವೈದ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ ೬ ತಿಂಗಳಿಗೊಮ್ಮೆ ಮಾಡಿಸಬೇಕು ಹಾಗೂ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಕಡ್ಡಾಯಗೊಳಿಸಿ, ಪ್ರತಿ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಇದರಲ್ಲಿ ಪಾಲ್ಗೊಳಿಸಬೇಕು. ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪ್ರತಿ ನೌಕರರು ಹಾಗೂ ಕಾರ್ಮಿಕರನ್ನು ಖಾಯಂ ಮಾಡಬೇಕು. ಜನರಲ್ಲಿ ಆರೋಗ್ಯ ಸಾಕ್ಷರತೆ ಮೂಡಿಸಲು ಪರಿಣಾಮಕಾರಿ ಯೋಜನೆ, ಕಾರ್ಯಕ್ರಮ ರೂಪಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶದ ಜನರಲ್ಲಿ ಪೌಷ್ಠಕ ಆಹಾರ, ನೈರ್ಮಲ್ಯ, ನಿಯಮಿತ ಆರೋಗ್ಯ ತಪಾಸಣೆ ಹಾಗೂ ಮಾನಸಿಕ ಒತ್ತಡ ನಿವಾರಣೆಯ ಕುರಿತು ಜನಜಾಗೃತಿ ಮೂಡಿಸಬೇಕು.ಈ ಬೇಡಿಕೆಗಳು ಈಡೇರುವವರೆಗೂ, ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವವರೆಗೂ- ಹಾಸನ ಜಿಲ್ಲೆಯ ಎಲ್ಲಾ ಜನಪರ ಸಂಘಟನೆಗಳು, ಸಂಘಸಂಸ್ಥೆಗಳು ಮತ್ತು ನಾಗರಿಕರು ನಿರಂತರವಾದ ಪ್ರತಿಭಟನೆ ನಡೆಸಿ ಆಗಸ್ಟ್ ೧೫ರ ಸ್ವಾತಂತ್ರ್ಯ ದಿನದಂದು ನಡೆಯುತ್ತಿರುವ ಜನಾರೋಗ್ಯದ ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಧರಣಿ ಸತ್ಯಾಗ್ರಹದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗಿಳಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ದಲಿತ ಮುಖಂಡ ಎಚ್.ಕೆ. ಸಂದೇಶ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ವಕೀಲರು ಮತ್ತು ಮುಸ್ಲಿಂ ಮುಖಂಡ ಎಚ್.ಇ. ಅನ್ಶಾದ್ ಪಾಳ್ಯ, ಜನನಿ ಫೌಂಡೇಷನ್ ಅಧ್ಯಕ್ಷೆ ಭಾನುಮತಿ ಇತರರು ಉಪಸ್ಥಿತರಿದ್ದರು.