ಶಿವಮೊಗ್ಗ: ಮತದಾರರ ಪಟ್ಟಿಯ ಪರಿಷ್ಕರಣೆ ಬಗ್ಗೆ ನಾವು ಅಕ್ಷೇಪಿಸುತ್ತಿಲ್ಲ. ಕೆಲವೇ ತಿಂಗಳ ಅವಧಿಯಲ್ಲಿ ಲಕ್ಷಾಂತರ ಮತದಾರರ ಹೆಸರನ್ನು ಕೈಬಿಟ್ಟಿದ್ದಕ್ಕೆ ನಮ್ಮ ಆಕ್ಷೇಪ ಇದೆ ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಕೈ ಬಿಡುವುದು ಸೇರಿ ಚುನಾವಣಾ ಅಕ್ರಮದ ವಿರುದ್ಧ ನಾವು ಹೋರಾಟ ರೂಪಿಸುತ್ತಿದ್ದೇವೆ. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತದೆ. ಅಲ್ಲಿ ಪಾರ್ಲಿಮೆಂಟ್, ಅಸೆಂಬ್ಲಿ ಚುನಾವಣೆ ನಂತರ 41 ಲಕ್ಷ ಮತ ಹೆಚ್ಚಾಗುತ್ತದೆ. ಆದರೆ, ಬಿಹಾರ ಚುನಾವಣೆ ಸಮೀಪಿಸುತ್ತಿರುವಾಗ 65 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗುತ್ತದೆ. ಬಿಹಾರ್‌ನಲ್ಲಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ವೋಟ್ ಹಾಕಿದ್ದಾರೆ. ಆದರೆ, ಮತದಾರರಿಗೆ ಈಗ ಅಸೆಂಬ್ಲಿ ಚುನಾವಣೆಯಲ್ಲಿ ವೋಟ್ ಹಾಕಲು ಅವಕಾಶ ಇಲ್ಲ ಎಂದರು.ಮಹಾರಾಷ್ಟ್ರದಲ್ಲಿ ಆರು ತಿಂಗಳ ಅವಧಿಯಲ್ಲಿ 41 ಲಕ್ಷ ಮತದಾರರ ಸಂಖ್ಯೆ ಹೇಗೆ ಹೆಚ್ಚಾಗುತ್ತದೆ. ದೇಶದ ಪ್ರಧಾನಿ ಕಳೆದ 11 ವರ್ಷಗಳಿಂದ ಬರೀ ಚುನಾವಣಾ ಪ್ರಚಾರದಲ್ಲೇ ಕಾಲ ಕಳೆದಿದ್ದಾರೆ. ಬಿಹಾರ್‌ಗೆ ಪದೇಪದೇ ಭೇಟಿ ನೀಡುತ್ತಿರುವ ಪ್ರಧಾನಿ ಮಣಿಪುರಕ್ಕೆ ಈ ತನಕ ಹೋಗಿಲ್ಲ ಎಂದು ಹರಿಹಾಯ್ದರು.
ಮತದಾರರ ಚೀಟಿ ಆಧಾರ್ ಲಿಂಕ್ ಪದ್ಧತಿಯನ್ನು ಏಕೆ ಅಳವಡಿಸಬಾರದು. ನಾಗರಿಕತ್ವವನ್ನು ಸಾಬೀತುಪಡಿಸುವ ಆಧಾರ್ ಅನ್ನು ಏಕೆ ಅವರು ಕಡೆಗಣಿಸುತ್ತಿದ್ದಾರೆ. ಪಾರ್ಲಿಮೆಂಟ್ ಚುನಾವಣೆ ನಡೆದು ಒಂದು ವರ್ಷ ಕಳೆದಿಲ್ಲ. ಅಷ್ಟರೊಳಗೆ 65 ಲಕ್ಷ ಮತದಾರರ ಹೆಸರನ್ನು ಕೈಬಿಡುವುದು ಎಷ್ಟರಮಟ್ಟಿಗೆ ಸರಿ. ಇದೇ ಪ್ರಕ್ರಿಯೆಯನ್ನು ಪಾರ್ಲಿಮೆಂಟ್ ಚುನಾವಣೆಗೆ ಮುನ್ನ ಏಕೆ ಮಾಡಲಿಲ್ಲ. ಹೇಗಾದರೂ ಮಾಡಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದೇ ಅವರ ಉದ್ದೇಶ ಎಂದು ದೂರಿದರು.ಕಳೆದ 11 ವರ್ಷದಿಂದ ಬಿಜೆಪಿಯವರೇ ಅಧಿಕಾರದಲ್ಲಿದ್ದಾರೆ. ಅಷ್ಟೊಂದು ಸಲ ಬಿಹಾರಕ್ಕೆ ಚುನಾವಣಾ ಪ್ರಚಾರಕ್ಕೆ ಹೋಗುವ ಅಗತ್ಯ ಇದೆಯೇ. ಪ್ರತಿ ಭಾಷಣದಲ್ಲೂ ಪ್ರಧಾನಮಂತ್ರಿ ಮುಸಲ್ಮಾನ- ಪಾಕಿಸ್ತಾನ ಎಂಬುದನ್ನು ಬಿಟ್ಟರೆ ಬೇರೇನು ಹೇಳುವುದಿಲ್ಲ. ಆರು ತಿಂಗಳ ಅವಧಿಯಲ್ಲಿ 41 ಲಕ್ಷ ವೋಟ್ ಹೆಚ್ಚಾದರೆ ಐದು ವರ್ಷಕ್ಕೆ ಎರಡೂವರೆ ಕೋಟಿ ಅಷ್ಟು ಹೆಚ್ಚಾಗುತ್ತದೆ. ಅವರು ಬರೀ ಮೋಸದಿಂದ ಚುನಾವಣೆ ಗೆಲ್ಲುವುದಾದರೆ ಗೆಲ್ಲಲಿ ಬಿಡಿ. ಬಿಹಾರದಲ್ಲಿ 70,000 ಕೋಟಿ ರು. ಹಣ ದುರ್ಬಳಕೆ ಆಗಿದೆ ಎಂದು ಕೇಂದ್ರದ ಸಿಎಜಿ ವರದಿಯೇ ಹೇಳಿದೆ. ಅಲ್ಲದೆ ಕಳೆದ ಐದು ಅವಧಿಯಿಂದ ಬಿಹಾರದಲ್ಲಿ ಅವರೇ ಅಧಿಕಾರದಲ್ಲಿದ್ದಾರೆ. ಹೀಗಿದ್ದೂ ಅಭಿವೃದ್ಧಿಯ ವಿಚಾರದಲ್ಲಿ ಬಿಹಾರದ ಪರಿಸ್ಥಿತಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ತಲಾ ಆದಾಯ ಸಹ ಅಲ್ಲಿ ಕುಸಿಯುತ್ತಿದೆ. ಅಲ್ಲಿ ಅಭಿವೃದ್ಧಿ ಆಗಿದ್ದರೆ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಜನ ಏಕೆ ನಮ್ಮ ರಾಜ್ಯಕ್ಕೆ ವಲಸೆ ಬರುತ್ತಿದ್ದರು. ಇವರ ಅಧಿಕಾರದಲ್ಲಿ ಯಾವ ಹಿಂದೂ ಬಡತನ ರೇಖೆಗಿಂತ ಮೇಲೆ ಬಂದಿಲ್ಲ. ದೇಶದಲ್ಲಿ ಈ ತನಕ 20 ಲಕ್ಷ ಜನ ತಮ್ಮ ಪಾಸ್ಪೋರ್ಟ್ ಅನ್ನು ಸೆರೆಂಡರ್ ಮಾಡಿದ್ದಾರೆ. ದೇಶದಿಂದ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಹೋಗಿದ್ದಾರೆ. ಒಂದು ಲಕ್ಷದಲ್ಲಿ 70 ಸಾವಿರದಷ್ಟು ಜನ ಗುಜರಾತ್ ನವರೇ ಆಗಿದ್ದಾರೆ. ದೇಶದ ಜನ ಇಲ್ಲಿಂದ ಏಕೆ ಹೋಗುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು.
ನಮ್ಮ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದು ಸರಿ ಇದೆ. ಕಳೆದ ಹತ್ತು ವರ್ಷದಲ್ಲಿ ರಾಹುಲ್ ಹೇಳಿದ ಎಲ್ಲಾ ವಿಷಯ ನಿಜವೆಂದು ಸಾಬೀತಾಗಿದೆ. ಕೋವಿಡ್, ಜಿಎಸ್‌ಟಿ, ವಿದೇಶಿ ಸಂಬಂಧ ಬಗ್ಗೆ ಹೇಳಿದ್ದು ನಿಜವಾಗ್ಲೂ ದೃಢಪಟ್ಟಿದೆ. ಬಿಹಾರದಲ್ಲಿ ಬಿಜೆಪಿಯವರಿಗೆ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಹೀಗಾಗಿಯೇ ಮತದಾರರ ಪಟ್ಟಿಯಿಂದ ಜನರನ್ನು ಕೈ ಬಿಡುತ್ತಿದ್ದಾರೆ ಎಂದರು.ಧರ್ಮಸ್ಥಳ: ತನಿಖೆ ಆಗುವವರೆಗೂ ಕಾಯಬೇಕು
ಧರ್ಮಸ್ಥಳದಲ್ಲಿ ಶವಗಳನ್ನ ಹೂತಿಟ್ಟ ಪ್ರಕರಣದ ತನಿಖೆ ನಡೆಯುತ್ತಿದ್ದು ಅದರ ಸ್ಪಷ್ಟ ಚಿತ್ರಣ ನನ್ನ ಬಳಿ ಇಲ್ಲ. ಹಾಗಾಗಿ ತನಿಖೆ ಮುಗಿಯುವವರೆಗೂ ಕಾಯಬೇಕಿದೆ ಎಂದು ಸಚಿವ ಸತೋಷ ಲಾಡ್ ಹೇಳಿದರು.ಧರ್ಮಸ್ಥಳ ಘಟನೆಯಲ್ಲಿ ಕೇರಳದವರ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸಚಿವ ಜೋಶಿ ಅವರು ಸೆಲೆಕ್ಟಿವ್ ಆಗಿ ಮಾತನಾಡುತ್ತಾರೆ. ಅವರಿಗೆ ಅನುಕೂಲ ಆಗುವ ವಿಚಾರವನ್ನಷ್ಟೇ ಅವರು ಮಾತನಾಡುತ್ತಾರೆ. ಅಷ್ಟಕ್ಕೂ ಸೌಜನ್ಯ ಪ್ರಕರಣ ಯಾವಾಗ ನಡೆಯಿತು. ಒಂದು ಪಕ್ಷ ಜೋಶಿ ಅವರ ಬಳಿ ಇದು ಪ್ಲಾಂಟೆಡ್ ಎಂಬ ಬಗ್ಗೆ ದಾಖಲೆ ಇದ್ದರೆ ತಂದು ಕೊಡಲಿ. ಅಷ್ಟೇ ಅಲ್ಲ ಸಿಬಿಐ ಸಹ ಅವರ ಬಳಿ ಇದೆ. ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಿ ಎಂದರು.
ಬಿಜೆಪಿಯವರು ಕೇವಲ ಆಯ್ದ ವಿಚಾರಗಳನ್ನು ಅಷ್ಟೇ ಮಾತನಾಡುತ್ತಾರೆ. ಜಿಡಿಪಿ, ತಲಾ ಆದಾಯ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಅಷ್ಟಕ್ಕೂ ಮೇಘಾಲಯದಲ್ಲಿ 41000 ಟನ್ ಕಲ್ಲಿದ್ದಲು ನಾಪತ್ತೆಯಾಗಿದೆ. ಇದರ ಬಗ್ಗೆ ಕೇಳಿದರೆ ಮಳೆ ಬಂದು ಕೊಚ್ಚಿ ಹೋಗಿದೆ ಎಂದು ಬಿಜೆಪಿ ಅವರು ಹೇಳುತ್ತಾರೆ. ಆದರೆ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರು, ವಿದ್ಯಾರ್ಥಿಗಳು ಮತ್ತಿತರ ವಿಚಾರದ ಬಗ್ಗೆ ಅವರು ಮಾತನಾಡುವುದೇ ಇಲ್ಲ. ಬಿಜೆಪಿಯವರಿಗೆ ವೋಟಿಗಾಗಿ ಹಿಂದೂ, ಮುಸ್ಲಿಂ ಅಷ್ಟೇ ಬೇಕು. ರಾಮ ಮಂದಿರವನ್ನು ಸಹ ಅವರು ಜನರ ದುಡ್ಡಿನಲ್ಲಿ ನಿರ್ಮಿಸಿದ್ದಾರೆ. ಅಷ್ಟಕ್ಕೂ ಹಿಂದುಗಳಿಗಾಗಿ ಅವರೇನು ಪ್ರತ್ಯೇಕ ಸ್ಕೀಮ್ ಮಾಡಿದ್ದಾರೆ. ಬಿಜೆಪಿಯವರ ಮನೆಯಲ್ಲಿ ಬಂಗಾರದ ತಟ್ಟೆ ಇದೆಯೇ ಹೊರತು ಹಿಂದುಗಳ ಮನೆಯಲ್ಲಿ ಅಲ್ಲ. ಅದು ಹೋಗಲಿ ಬಿಜೆಪಿಯ ಕಚೇರಿಯನ್ನು ಸಹ ಜನರ ದುಡ್ಡಿನಲ್ಲೇ ಕಟ್ಟಿದ್ದಾರೆ. ಇವರಿಗೆ ಚುನಾವಣೆ ಬಂದಾಗ ಹಿಂದುಗಳ ವೋಟ್ ಬೇಕು ಅಷ್ಟೇ ಎಂದು ಕುಟುಕಿದರು.