ಹೊಸಪೇಟೆ: ಪತ್ರಕರ್ತರಾದವರು ಸಾಮಾಜಿಕ ಕಳಕಳಿ ಜತೆ ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು ತಮ್ಮ ಸ್ಥಾನಮಾನಗಳನ್ನು ಹುದ್ದೆ ಎಂದು ತಿಳಿಯದೆ, ಅದೊಂದು ಜವಾಬ್ದಾರಿ ಎಂದು ಅರಿತು ಕೆಲಸ ಮಾಡಬೇಕು. ಕೇವಲ ಒಬ್ಬರಿಂದ ಸಂಘ ಆಗುವುದಿಲ್ಲ. ಎಲ್ಲರಿಂದ ಸಂಘವಾಗಿದೆ. ಪದಾಧಿಕಾರಿಗಳಾದವರು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಮುಖ್ಯ. ಪ್ರತಿಯೊಬ್ಬ ಪತ್ರಕರ್ತರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಸಂಘ ಮಾಡಬೇಕು. ಸಂಘದ ನೀತಿ, ನಿಯಮಗಳಿಗೆ ಬದ್ಧರಾಗಿ ಕೆಲಸ ನಿರ್ವಹಿಸಬೇಕು ಎಂದರು.
ರಾಜ್ಯದಲ್ಲಿ ಇತ್ತೀಚೆಗೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಪತ್ರಕರ್ತರಿಗೆ ಕಡಿವಾಣ ಹಾಕುವ ಕೆಲಸವನ್ನು ಅಸಲಿ ಪತ್ರಕರ್ತರು ಮಾಡಬೇಕಿದೆ. ಅಂತಹ ನಕಲಿ ಪತ್ರಕರ್ತರನ್ನು ಗುರುತಿಸಿ ದೂರ ಇಡುವ ಕೆಲಸವನ್ನು ಸಂಘದ ಪದಾಧಿಕಾರಿಗಳು ಮಾಡಬೇಕು. ಶುದ್ಧಹಸ್ತರನ್ನು ಗುರುತಿಸಿ ಸಂಘಟಿಸುವ ಕೆಲಸವನ್ನು ನೂತನ ಪದಾಧಿಕಾರಿಗಳು ಮಾಡಬೇಕು ಎಂದರು.ಮೂರು ದಶಕಗಳ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ನೀಡಿದೆ. ಅದರಲ್ಲಿನ ಕೆಲ ನ್ಯೂನತೆಗಳಿಂದ ಬಸ್‌ಪಾಸ್ ಸೌಲಭ್ಯ ಗ್ರಾಮೀಣ ಪತ್ರಕರ್ತರಿಗೆ ಸರಿಯಾಗಿ ದೊರೆಯುತ್ತಿಲ್ಲ. ಅದಕ್ಕಾಗಿ ಕೆಲ ಬದಲಾವಣೆಗಳಿಗೆ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ. ಮುಖ್ಯಮಂತ್ರಿ ಮಾಧ್ಯಮ ಸಂಜೀವಿನಿ ಯೋಜನೆಯಲ್ಲಿ ಕೂಡ ಕೆಲವೊಂದು ಮಾರ್ಪಾಡು ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನಮ್ಮ ಎಲ್ಲ ಬೇಡಿಕೆಗಳು ಈಡೇರುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಹುಡಾ ಅಧ್ಯಕ್ಷ ಎಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಪತ್ರಕರ್ತರ ಸಂಘದ ಕಲ್ಯಾಣ ನಿಧಿಗೆ ₹2 ಲಕ್ಷ ವೈಯಕ್ತಿಕ ದೇಣಿಗೆ ನೀಡುವೆ ಎಂದು ಘೋಷಿಸಿದರು.
ಎಸ್ಪಿ ಎಸ್.ಜಾಹ್ನವಿ ಮಾತನಾಡಿ, ಮಾಧ್ಯಮಗಳು ಸಮಾಜದ ಕನ್ನಡಿಯಿದ್ದಂತೆ. ಸಮಾಜದಲ್ಲಿನ ಹಾಗೂ ಆಡಳಿತದಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಮಾಧ್ಯಮಗಳು ಸಹಕಾರಿ ಆಗಿವೆ ಎಂದರು.
ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಮಾಣವಚನ ಬೋಧಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸತ್ಯನಾರಾಯಣ ವಹಿಸಿದ್ದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರೆಗೋಡು, ರಾಜ್ಯ ಸಮಿತಿ ಸದಸ್ಯ ಪಿ.ವೆಂಕೋಬ ನಾಯಕ, ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಪತ್ರಕರ್ತರು ಭಾಗವಹಿಸಿದ್ದರು.