ಕನಕಗಿರಿ: ತೊಗರಿ ಖರೀದಿಗೆ ಕೇಂದ್ರ ಸರಕಾರದ ₹8 ಸಾವಿರ ಜೊತೆಗೆ ರಾಜ್ಯ ಸರಕಾರದಿಂದ ₹500 ಬೆಂಬಲ ಬೆಲೆ ನೀಡಲು ಒತ್ತಾಯಿಸಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟಿಸಿದರು.
ಸಂಸ್ಥಾಪಕ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ರಾಜ್ಯ ಸರಕಾರ ಬೆಂಬಲ ಬೆಲೆಯಡಿ ತೊಗರಿ ಖರೀದಿ ಕೇಂದ್ರ ಶುರು ಮಾಡಿರುವುದು ಸ್ವಾಗತಾರ್ಹ. ಆದರೆ, ಕೇಂದ್ರ ಸರಕಾರ ಘೋಷಣೆ ಮಾಡಿರುವ ಪ್ರತಿ ಕ್ವಿಂಟಲ್‌ಗೆ ಕೇವಲ ₹8 ಸಾವಿರಕ್ಕೆ ತೊಗರಿ ಖರೀದಿ ಮಾಡುತ್ತಿದ್ದಾರೆ. ಇದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಬದಲಾಗಿ ರಾಜ್ಯ ಸರ್ಕಾರ ಕಳೆದ ಬಾರಿ ನೀಡಿದಂತೆ ತನ್ನ ಪಾಲಿನ ₹500 ಪ್ರತಿ ಕ್ವಿಂಟಲ್‌ಗೆ ನೀಡಬೇಕು ಎಂದು ಒತ್ತಾಯಿಸಿದರು.
ನಂತರ ಸಂಘಟನೆ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ತೊಗರಿ ಬೆಳೆ ಹೂ ಬಿಡುವ ವೇಳೆ ಭಾರಿ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ಇಳುವರಿ ಕಡಿಮೆಯಾಗಿದೆ. ಆಗಲೂ ರಾಜ್ಯ ಸರ್ಕಾರ ಸರಿಯಾಗಿ ಪರಿಹಾರ ನೀಡಿಲ್ಲ. ರೈತರು ಕಷ್ಟಪಟ್ಟು ಅಲ್ಪಸ್ವಲ್ಪ ಬೆಳೆ ಪಡೆದುಕೊಂಡಿದ್ದಾರೆ. ಸರಕಾರ ನೀಡುವ ಬೆಲೆಯಿಂದ ರೈತರು ಖರ್ಚು ಮಾಡಿದ ಹಣ ಕೂಡ ವಾಪಾಸ್ ಬರುವುದಿಲ್ಲ. ಹೀಗಾಗಿ, ಕೂಡಲೇ ರಾಜ್ಯ ಸರ್ಕಾರ ತನ್ನ ಪಾಲಿನ ₹500 ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಡಿಎಸ್ಎಸ್ ಮುಖಂಡ ಹಂಪೇಶ ಹರಿಗೋಲು, ರೈತ ಮುಖಂಡ ದೊಡ್ಡ ಭರಮಣ್ಣ, ಸಂಘಟನೆಯ ವಿಜಯನಗರ ಜಿಲ್ಲಾ ಅಧ್ಯಕ್ಷ ಬಿ.ಎಂ. ಹುಲಗಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ಗಣೇಶ ರೆಡ್ಡಿ, ರೈತ ಮುಖಂಡ ಕರಡಿ ಕನಕಪ್ಪ, ಆದೇಶ ರಾಮತ್ನಾಳ, ಶೇಖರಪ್ಪ ದೇವಲಾಪೂರ, ಹನುಮಗೌಡ ಹಿರೇಖೇಡ, ವಿರೂಪಣ್ಣ ಕಂಬಳಿ ಸೇರಿ ಇತರರು ಇದ್ದರು.