ಅಸ್ವಸ್ಥ ಮಹಿಳೆಗೆ ಚಿಕಿತ್ಸೆ ಕೊಡಿಸಿದ ಪತ್ರಕರ್ತರು

KannadaprabhaNewsNetwork | Published : Feb 24, 2025 12:33 AM

ಸಾರಾಂಶ

ಕಳೆದೆರಡು ದಿನಗಳಿಂದ ರಸ್ತೆಯಲ್ಲಿ ಬಿದ್ದು, ಆಹಾರ ನೀರು ಇಲ್ಲದೇ, ಬಿಸಿಲಿನ ಬೇಗೆಯಲ್ಲಿ ಅಸ್ವಸ್ಥವಾಗಿ ನರಳಾಡುತ್ತಿದ್ದ ಅನಾಥ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಹರಿಹರ ಪತ್ರಕರ್ತರು ಮಾನವೀಯತೆ ಮೆರೆದಿದ್ದಾರೆ.

- 24 ತಾಸುಗಳಿಂದ ಆಹಾರ, ನೀರಿಲ್ಲದೇ ಅಸ್ವಸ್ಥಳಾಗಿ ನರಳಾಡುತ್ತಿದ್ದ ಅನಾಥೆ

- ಮಹಿಳೆ ಚಿಕಿತ್ಸೆಗೆ ನೆರವಾಧ ಜಿ.ಕೆ.ಪಂಚಾಕ್ಷರಿ, ಯಮನೂರ್, ಸಾಬ್ಜನ್‍ ಸಾಬ್

- - - ಕನ್ನಡಪ್ರಭ ವಾರ್ತೆ ಹರಿಹರ ಕಳೆದೆರಡು ದಿನಗಳಿಂದ ರಸ್ತೆಯಲ್ಲಿ ಬಿದ್ದು, ಆಹಾರ ನೀರು ಇಲ್ಲದೇ, ಬಿಸಿಲಿನ ಬೇಗೆಯಲ್ಲಿ ಅಸ್ವಸ್ಥವಾಗಿ ನರಳಾಡುತ್ತಿದ್ದ ಅನಾಥ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವ ಮೂಲಕ ಹರಿಹರ ಪತ್ರಕರ್ತರು ಮಾನವೀಯತೆ ಮೆರೆದರು.

ನಗರದ ಶ್ರೀ ಕಸಬಾ ಗ್ರಾಮ ದೇವತೆ ದೇವಸ್ಥಾನ ಹಿಂಭಾಗದ ವಾಣಿಜ್ಯ ಮಳಿಗೆ ಆವರಣದಲ್ಲಿ 24 ತಾಸುಗಳಿಂದ ಅನಾಥೆ ಆಹಾರ ಮತ್ತು ನೀರಿಲ್ಲದೇ ಅಸ್ವಸ್ಥಳಾಗಿ, ನರಳಾಡುತ್ತಿದ್ದಳು. ಈ ಬಗ್ಗೆ ಪತ್ರಕರ್ತ ಜಿ.ಕೆ.ಪಂಚಾಕ್ಷರಿ ಪತ್ರಕರ್ತ ಮಿತ್ರರಿಗೆ ಮಾಹಿತಿ ನೀಡಿದರು. ತಕ್ಷಣ ಆಗಮಿಸಿದ ಯಮನೂರ್, ಸಾಬ್ಜನ್‍ ಸಾಬ್ ಹಾಗೂ ಸ್ಥಳೀಯರು ಆ್ಯಂಬುಲೆನ್ಸ್‌ಗೆ ಫೋನಾಯಿಸಿದ್ದಾರೆ. ಆ್ಯಂಬುಲೆನ್ಸ್‌ ಮೂಲಕ ಅಸ್ವಸ್ಥೆಯನ್ನು ತುರ್ತು ನಿಗಾ ಘಟಕಕ್ಕೆ ದಾಖಲು ಮಾಡಿಸಿ, ಚಿಕಿತ್ಸೆ ದೊರೆಯಲು ನೆರವಾದರು. ಪತ್ರಕರ್ತರು ಹಾಗೂ ಆ್ಯಂಬ್ಯುಲೆನ್ಸ್‌ ಡೈವರ್ ನಾಗರಾಜ್ ಕಂಚಿಕೇರಿ ಮತ್ತು ಮುಕ್ರಂಸಾಬ್ ಸೇರಿದಂತೆ ಇತರರ ಸ್ಪಂದನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಸ್ವಸ್ಥ ಮಹಿಳೆಯ ಹೆಸರು, ವಿಳಾಸ ಮಾಹಿತಿಗಳು ತಿಳಿದುಬಂದಿಲ್ಲ. ಸ್ಥಳದಲ್ಲಿದ್ದ ನಾಗರೀಕರು ಹೇಳುವಂತೆ, ಮಹಿಳೆಯ ಪೋಷಕರೇ ಆಕೆಯನ್ನು ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆ. ತಕ್ಷಣ ಪೊಲೀಸರು ಪೋಷಕರನ್ನು ಪತ್ತೆ ಹಚ್ಚಿ, ಅವರಿಗೆ ಸರಿಯಾಗಿ ಬುದ್ಧಿ ಹೇಳಬೇಕು. ಮಹಿಳೆಯನ್ನು ಅವರ ಕುಟುಂಬದವರಿಗೆ ತಲುಪಿಸಬೇಕು ಎಂದರು.

- - - -23ಎಚ್‍ಆರ್‍ಆರ್03, 03ಎ:

ಹರಿಹರದ ಶ್ರೀ ಕಸಬಾ ಗ್ರಾಮ ದೇವತೆ ದೇವಸ್ಥಾನ ಹಿಂಭಾಗದ ಆವರಣದಲ್ಲಿ 24 ತಾಸುಗಳಿಂದ ನಿತ್ರಾಣಳಾಗಿದ್ದ ಮಹಿಳೆಗೆ ಪತ್ರಕರ್ತರು, ಆ್ಯಂಬುಲೆನ್ಸ್‌ ಮೂಲಕ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.

Share this article