ಕೃತ್ತಿಕೆಯ ನರ್ತನಕ್ಕೆ ತಾಲ್ಲೂಕಿನಾದ್ಯಂತ ಸಂತಸ

KannadaprabhaNewsNetwork | Published : May 19, 2025 12:16 AM
Follow Us

ಸಾರಾಂಶ

ಹರಿದ ಹಳ್ಳಕೊಳ್ಳಗಳು | ರೇಲ್ವೆ ಅಂಡರ್‌ಪಾಸ್‌ಗಳಲ್ಲಿ ಸಂಚಾರ ತೊಂದರೆ | ಬಿತ್ತನೆಗೆ ಸಜ್ಜಾದ ಕೃಷಿಕರು

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಶನಿವಾರ ತಡ ರಾತ್ರಿ ಸುರಿದ ಕೃತ್ತಿಕೆ ಮಳೆಯ ನರ್ತನಕ್ಕೆ ಹೊಳಲ್ಕೆರೆ ತಾಳುಕಿನಾದ್ಯಂತ ಕೃಷಿಕ ವಲಯದಲ್ಲಿ ಸಂತಸ ಮೂಡಿದೆ.

ವರ್ಷದ ಆರಂಭದ ಮಳೆಗೆ ಹಲವು ಕೆರೆಕಟ್ಟೆಗಳಿಗೆ ನೀರು ರಭಸವಾಗಿ ಹರಿದು ಬರುತ್ತಿದೆ. ಹಲವು ಚೆಕ್‌ ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿ ಕೃಷಿಕರಿಗೆ ನೆಮ್ಮದಿ ತಂದಿದೆ.

ಹೊಳಲ್ಕೆರೆ ತಾಳುಕಿನಲ್ಲಿ ಅಡಕೆ ಬೆಳೆಯುವ ಪ್ರದೇಶ ಹೆಚ್ಚಾಗಿದ್ದು, ಹಲವು ಕಡೆ ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಪರದಾಡುವ ಸ್ಥಿತಿ ಇತ್ತು. ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚುತ್ತಿದ್ದುದು, ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿತ ಕಂಡು ರೈತರನ್ನು ಚಿಂತೆಗೀಡುಮಾಡಿತ್ತು. ಶನಿವಾರ ರಾತ್ರಿ ಇದ್ದಕ್ಕಿದ್ದಂತೆ ಆಗಮನವಾದ ಕೃತಿಕೆಯಿಂದ ರೈತರು ನೆಮ್ಮದಿಯಿಂದ ಬದುಕುವಂತಾಗಿದೆ.

ಇಡೀ ತಾಲೂಕಿನಲ್ಲಿ ಮುಂಗಾರು ಬಿತ್ತನೆ ಕಾರ್ಯಕ್ಕೆ ರೈತರು ಮುಂದಾಗಿರುವುದು ಈ ಬಾರಿಯ ಕೃಷಿಗೆ ಮುನ್ಸೂಚೆಯಂತಿದೆ. ಮಳೆಗೂ ಮುನ್ನ ತಮ್ಮ ಜಮೀನುಗಳನ್ನು ಬಿತ್ತನೆ ಕೆಲಸಕ್ಕೆ ಸಜ್ಜುಗೊಳಿಸಿಕೊಂಡಿದ್ದ ಕೃಷಿಕರು ಒಂದೆರಡು ದಿನ ಕಾದು ಬಿತ್ತನೆ ಕಾರ್ಯ ಆರಂಭಿಸುವ ಸೂಚನೆಗಳು ಇವೆ. ರೈತರಿಗೆ ಬೀಜ ಮತ್ತು ಗೊಬ್ಬರಗಳನ್ನು ಒದಗಿಸುವ ಕೃಷಿ ಇಲಾಖೆಯು ರೈತರಿಗೆ ನೆರವಾಗುವಂತಹ ಕೆಲಸಕ್ಕೆ ಮುನ್ನಡಿ ಇಡಬೇಕಾಗಿದೆ.

*ಮುಳುಗಡೆಯಾಗ ರೈಲ್ವೆ ಅಂಡರ್ ಪಾಸ್ ಬಂದ್

ತಾಲೂಕಿನಲ್ಲಿ ಹಾದು ಹೋಗಿರುವ ರೈಲ್ವೆ ಹಳಿಗಳ ಸೇತುವೆಯ ಅಂಡರ್ ಪಾಸ್‌ಗಳಲ್ಲಿ ನೀರು ಸಂಗ್ರಹದ ಹಿನ್ನಲೆಯಲ್ಲಿ ಸಾಕಷ್ಟು ಹಳ್ಳಿಗಳ ಸಂಚಾರ ಬಂದ್ ಅಗಿದೆ. ಕೋಟೆಹಾಳ್ ರೇಲ್ವೆ ಅಂಡರ್ ಪಾಸ್‌ನಲ್ಲಿ ನೀರು ನಿಂತು ಕೋಟೆಹಾಳ್, ಎಮ್ಮಿಗನೂರು, ಅಂತಾಪುರ, ಹಿರೆ ಎಮ್ಮಿಗನೂರು, ಕಾಮನಹಳ್ಳಿ, ಕೋಡಗವಳ್ಳಿ, ಹಾಗೂ ಹಟ್ಟಿ, ನಂದಿಹಳ್ಳಿ ಸೇರಿ ಹಲವಾರು ಗ್ರಾಮಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಪುಣಜೂರು ರೈಲ್ವೆ ಅಂಡರ್ ಪಾಸ್‌ನಲ್ಲಿ ನೀರು ನಿಂತ ಪರಿಣಾಮ ಹುಲೆಮಳಲಿ ಸೇರಿ ಸುತ್ತಮುತ್ತಲ ಹತ್ತಾರು ಗ್ರಾಮದ ಜನರ ಸಂಚಾರ ನಿಂತು ಹೊಗಿದೆ. ಅಮೃತಾಪುರ, ಹನುಮನಕಟ್ಟೆ, ರಾಮಗಿರಿ ಗುಂಡೇರಿ ರೈಲ್ವೆ ಅಂಡರ್ ಪಾಸ್‌ಗಳ ರಸ್ತೆಗಳು ನೀರಿನಲ್ಲಿ ಮುಳುಗಿ ಊರು,ಕೆರೆ,ಹೊಲ ಗದ್ದೆ ತೋಟಗಳಿಗೆ ಸಂಚರಿಸದಂತ ಸ್ಥಿತಿಯಿಂದ ಜನರು ತೊಂದರೆ ಅನುಭವಿಸಿದ್ದಾರೆ.

ಸುರಿದ ಭಾರಿ ಮಳೆಗೆ ತಾಲೂಕಿನ ಹಲವಾರು ಹಳ್ಳಗಳು ತುಂಬಿ ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ತಾಲೂಕಿನ ಕುಡಿನೀರುಕಟ್ಟೆ ಕೆರೆ ಕೋಡಿ ಬಿದ್ದಿದ್ದು, ಇನ್ನು ಸಣ್ಣಪುಟ್ಟ ಹಲವರು ಕೆರೆಗಳು ಕೋಡಿಯಿಂದ ನೀರು ಹರಿಯುತ್ತಿವೆ. ತಾಲೂಕಿನೆಲ್ಲೆಡೆ ಎತ್ತರದ ಪ್ರದೇಶಶಗಳಲ್ಲಿ ನಿರ್ಮಿಸಲಾಗಿದ್ದ ಚೆಕ್‌ ಟ್ಯಾಮ್‌ಗಳಲ್ಲಿ ಬರಪೂರ ನೀರು ಸಂಗ್ರಹವಾಗಿದ್ದು, ಅಂತರ್ಜಲ ಮರು ಪೂರಕವಾಗುತ್ತಿದೆ.