ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ಜೆಪಿಎಲ್-೨೦೨೬ ಕ್ರಿಕೆಟ್‌ ಟೂರ್ನಿ

KannadaprabhaNewsNetwork |  
Published : May 04, 2026, 01:30 AM IST
3ಎಚ್ಎಸ್ಎನ್8 :  | Kannada Prabha

ಸಾರಾಂಶ

ಸೂರಜ್ ರೇವಣ್ಣ ಅವರ ನೇತೃತ್ವದಲ್ಲಿ ಹೊಯ್ಸಳ ವಾರಿಯರ್ಸ್ ತಂಡ ರಚನೆಯಾಗಿದೆ, ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಯ್ಕೆಯಾದ ಯುವ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಾಜ್ಯಮಟ್ಟದ ಈ ಪಂದ್ಯಾವಳಿಯಲ್ಲಿ ಹಾಸನ ಜಿಲ್ಲೆಯ ಗೌರವ ಹೆಚ್ಚಿಸುವ ವಿಶ್ವಾಸ ನಮ್ಮದು.

ಕನ್ನಡಪ್ರಭ ವಾರ್ತೆ ಹಾಸನ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಹುಟ್ಟುಹಬ್ಬ ಹಾಗೂ ಜನತಾ ದಳ (ಜಾತ್ಯತೀತ) ಪಕ್ಷದ ರಜತ ಮಹೋತ್ಸವದ ಅಂಗವಾಗಿ ಇದೇ ತಿಂಗಳ ೧೫, ೧೬ ಮತ್ತು ೧೭ರಂದು ಬೆಂಗಳೂರಿನಲ್ಲಿ ನಡೆಯಲಿರುವ ಜೆಪಿಎಲ್-೨೦೨೬ ಜನತಾ ದಳ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಹಾಸನ ಜಿಲ್ಲೆಯ ‘ಹೊಯ್ಸಳ ವಾರಿಯರ್ಸ್’ ತಂಡದ ಲೋಗೋವನ್ನು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ನಗರದಲ್ಲಿನ ಪ್ರವಾಸಿ ಮಂದಿರದಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳಿಸಿದರು.

ಸೂರಜ್ ರೇವಣ್ಣ ಅವರು ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜನ್ಮದಿನವು ಕೇವಲ ಕುಟುಂಬದ ಅಥವಾ ಪಕ್ಷದ ಆಚರಣೆ ಮಾತ್ರವಲ್ಲ, ಅದು ಲಕ್ಷಾಂತರ ಕಾರ್ಯಕರ್ತರ ಹಬ್ಬವಾಗಿದೆ. ಅವರ ಜನ್ಮದಿನವನ್ನು ವಿಭಿನ್ನವಾಗಿ ಆಚರಿಸುವ ಉದ್ದೇಶದಿಂದ ಈ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಪಕ್ಷದ ೨೫ನೇ ವರ್ಷದ ರಜತ ಮಹೋತ್ಸವವೂ ಇದೇ ಸಂದರ್ಭದಲ್ಲಿ ನಡೆಯುತ್ತಿರುವುದರಿಂದ ಜೆಡಿಎಸ್ ಕಾರ್ಯಕರ್ತರಿಗೆ ಮತ್ತಷ್ಟು ಉತ್ಸಾಹ ಬಂದಿದೆ. ಕೇವಲ ಸಭೆ- ಸಮಾವೇಶಗಳಿಗೆ ಸೀಮಿತವಾಗದೇ, ಯುವಕರಿಗೆ ಕ್ರೀಡಾ ವೇದಿಕೆ ಕಲ್ಪಿಸುವ ಮೂಲಕ ಸಂಘಟನೆಯನ್ನು ಬಲಪಡಿಸುವ ಪ್ರಯತ್ನ ಇದು ಎಂದು ಅವರು ತಿಳಿಸಿದರು.

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ ಜೆಡಿಎಸ್ ಕಾರ್ಯಕರ್ತರು, ಯುವ ಮುಖಂಡರು, ಕ್ರೀಡಾಪಟುಗಳು ಹಾಗೂ ಅಭಿಮಾನಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಎಲ್ಲಾ ತಾಲೂಕು ಮತ್ತು ಕೇಂದ್ರ ಮಟ್ಟದ ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದಲೇ ಈ ಟೂರ್ನಿಯನ್ನು ರೂಪಿಸಲಾಗಿದೆ ಎಂದು ಹೇಳಿದರು.

ಕ್ರೀಡೆ ಯುವಕರಲ್ಲಿ ಶಿಸ್ತು, ನಾಯಕತ್ವ, ತಂಡದ ಮನೋಭಾವ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ಈ ಗುಣಗಳು ಅಗತ್ಯ, ಆದ್ದರಿಂದ ಕ್ರೀಡೆ ಮತ್ತು ರಾಜಕೀಯ ಎರಡನ್ನೂ ಸಮನಾಗಿ ಪ್ರೋತ್ಸಾಹಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಮೇ ೧೫, ೧೬ ಮತ್ತು ೧೭ರಂದು ಮೂರು ದಿನಗಳ ಕಾಲ ಬೆಂಗಳೂರಿನ ಮಾದಾವರದಲ್ಲಿರುವ ನೈಸ್ ಗ್ರೌಂಡ್‌ನಲ್ಲಿ ಈ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ತಂಡಗಳು ಸ್ಪರ್ಧಿಸಲಿದ್ದು, ಹಾಸನ ಜಿಲ್ಲೆಯಿಂದ ‘ಹೊಯ್ಸಳ ವಾರಿಯರ್ಸ್’ ತಂಡ ಬಲಿಷ್ಠ ಸ್ಪರ್ಧಿಯಾಗಿ ಕಣಕ್ಕಿಳಿಯಲಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಮಾತನಾಡಿ, ಹಾಸನ ಜಿಲ್ಲೆ ಜೆಡಿಎಸ್ ಪಕ್ಷದ ಭದ್ರಕೋಟೆ. ಈ ಜಿಲ್ಲೆಯ ಯುವಕರಲ್ಲಿ ಅಪಾರ ಪ್ರತಿಭೆ ಇದೆ, ಅವರನ್ನು ಕ್ರೀಡಾ ಕ್ಷೇತ್ರದ ಮೂಲಕ ಒಗ್ಗೂಡಿಸಿ ಒಂದು ಶಕ್ತಿಶಾಲಿ ತಂಡವಾಗಿ ರೂಪಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ಸೂರಜ್ ರೇವಣ್ಣ ಅವರ ನೇತೃತ್ವದಲ್ಲಿ ಹೊಯ್ಸಳ ವಾರಿಯರ್ಸ್ ತಂಡ ರಚನೆಯಾಗಿದೆ, ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಯ್ಕೆಯಾದ ಯುವ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಾಜ್ಯಮಟ್ಟದ ಈ ಪಂದ್ಯಾವಳಿಯಲ್ಲಿ ಹಾಸನ ಜಿಲ್ಲೆಯ ಗೌರವ ಹೆಚ್ಚಿಸುವ ವಿಶ್ವಾಸ ನಮ್ಮದು ಎಂದು ಹೇಳಿದರು.

ಈ ಪಂದ್ಯಾವಳಿಯ ಮೂಲಕ ಕೇವಲ ಕ್ರಿಕೆಟ್ ಮಾತ್ರವಲ್ಲ, ಪಕ್ಷದ ಸಂಘಟನೆಯೂ ಇನ್ನಷ್ಟು ಬಲವಾಗಲಿದೆ. ಯುವಕರನ್ನು ರಾಜಕೀಯ ಹಾಗೂ ಸಾಮಾಜಿಕ ಚಟುವಟಿಕೆಗಳತ್ತ ಸೆಳೆಯಲು ಇಂತಹ ಕಾರ್ಯಕ್ರಮಗಳು ಬಹಳ ಅಗತ್ಯ ಎಂದು ತಿಳಿಸಿದರು.

ಇದು ಕೇವಲ ಒಂದು ಪಂದ್ಯಾವಳಿ ಅಲ್ಲ, ಇದು ಕಾರ್ಯಕರ್ತರ ಒಗ್ಗಟ್ಟಿನ ಸಂಕೇತ. ರಾಜ್ಯದ ಎಲ್ಲಾ ಜಿಲ್ಲೆಗಳ ಜೆಡಿಎಸ್ ಕುಟುಂಬವನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ದೊಡ್ಡ ಹಬ್ಬ. ಈ ಕ್ರೀಡಾಕೂಟದಿಂದ ಪಕ್ಷದ ಯುವ ಘಟಕಕ್ಕೆ ಹೊಸ ಶಕ್ತಿ ಸಿಗಲಿದೆ ಎಂದು ಅವರು ಹೇಳಿದರು.

ಹೊಯ್ಸಳ ವಾರಿಯರ್ಸ್ ತಂಡದ ಲೋಗೋ ಬಿಡುಗಡೆ ಕಾರ್ಯಕ್ರಮವು ಉತ್ಸಾಹಭರಿತ ವಾತಾವರಣದಲ್ಲಿ ನಡೆಯಿತು. ಪಕ್ಷದ ಮುಖಂಡರು, ಕಾರ್ಯಕರ್ತರು, ಯುವ ಜನತಾದಳದ ಪದಾಧಿಕಾರಿಗಳು ಹಾಗೂ ಅನೇಕ ಅಭಿಮಾನಿಗಳು ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಜ್ಞಾನಾರ್ಜನೆಗೆ ಗುಣಾತ್ಮಕ, ಮೌಲ್ಯಯುತ ಚಿಂತನೆ ಅಗತ್ಯ: ಆರ್.ಎ.ನಾಗಣ್ಣ
ಮಕ್ಕಳಿಗೆ ಬುದ್ಧನ ಜೀವನ, ಸಾಧನೆ ತಿಳಿಸಿದರೆ ಸಮಾಜಕ್ಕೆ ಒಳಿತು