ಕರ್ನಾಟಕ ಸಂಗೀತ ಉಳಿವಿಗೆ ದಾಸ ಶ್ರೇಷ್ಠರ ಪರಿಶ್ರಮ ಕಾರಣ: ನರಸಿಂಹಸ್ವಾಮಿ

KannadaprabhaNewsNetwork |  
Published : May 04, 2026, 01:30 AM IST
3ಎಚ್ಎಸ್ಎನ್12 : ಬೇಲೂರು   ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ   ದಾಸ ಶ್ರೇಷ್ಠರಾದ  ಶ್ರೀ  ತ್ಯಾಗರಾಜರು,  ಪುರಂದರದಾಸರು,   ಕನಕದಾಸರು ಹಾಗೂ  ಬೇಲೂರು ವೈಕುಂಠದಾಸರ  ಆರಾಧನ ಮಹೋತ್ಸವ  ಅದ್ದೂರಿಯಾಗಿ ನಡೆಯಿತು. | Kannada Prabha

ಸಾರಾಂಶ

ಮನೆಗಳಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ದಾಸರ ಪದಗಳನ್ನು ಅಥವಾ ಸರಳವಾದ ಶಾಸ್ತ್ರೀಯ ಸಂಗೀತವನ್ನು ಕೇಳಿಸುವ ಅಭ್ಯಾಸ ಮಾಡಬೇಕು. ಸಂಗೀತ ಕಚೇರಿಗಳಿಗೆ ಮಕ್ಕಳನ್ನು ಕರೆದೊಯ್ದು, ಅದರ ಗಾಂಭೀರ್ಯವನ್ನು ಅವರಿಗೆ ಪರಿಚಯಿಸಬೇಕು.

ಕನ್ನಡಪ್ರಭ ವಾರ್ತೆ, ಬೇಲೂರು

ಕರ್ನಾಟಕ ಸಂಗೀತವು ಇಂದು ಇಡೀ ವಿಶ್ವದಲ್ಲೇ ಅತ್ಯಂತ ಶ್ರೀಮಂತ ಶಾಸ್ತ್ರೀಯ ಸಂಗೀತ ಪದ್ಧತಿಯಾಗಿ ಗುರುತಿಸಿಕೊಂಡಿದ್ದರೆ, ಅದಕ್ಕೆ ದಾಸ ಶ್ರೇಷ್ಠರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ ಎಂದು ಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷ ನರಸಿಂಹಸ್ವಾಮಿ ಹೇಳಿದರು.

ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ವತಿಯಿಂದ ಜರುಗಿದ ಶ್ರೇಷ್ಠ ದಾಸರಾದ ಶ್ರೀ ತ್ಯಾಗರಾಜರು, ಪುರಂದರದಾಸರು, ಕನಕದಾಸರು ಮತ್ತು ಬೇಲೂರು ವೈಕುಂಠದಾಸರ ಆರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರೇಷ್ಠ ದಾಸರ ಆರಾಧನಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ದಾಸ ಸಾಹಿತ್ಯವಿಲ್ಲದ ಕರ್ನಾಟಕ ಸಂಗೀತವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ದಾಸರು ಹಾಕಿಕೊಟ್ಟ ದಾರಿಯಲ್ಲಿಯೇ ಇಂದು ದೊಡ್ಡ ದೊಡ್ಡ ವಿದ್ವಾಂಸರು ಸಾಗುತ್ತಿದ್ದಾರೆ, ಮೂಲ ದಾಸರುಗಳು ರಚಿಸಿದ ಕೀರ್ತನೆಗಳು, ದೇವರನಾಮಗಳನ್ನು ಕೇಳುವುದರಿಂದ ಮನಸ್ಸಿಗೆ ಸಂತೋಷ ಲಭಿಸುತ್ತದೆ ಎಂದರು.

ದಾಸರ ಕೀರ್ತನೆಗಳಾಗಲಿ ಅಥವಾ ಶಾಸ್ತ್ರೀಯ ರಾಗಗಳಾಗಲಿ, ಅವುಗಳನ್ನು ಸಿದ್ಧಿಸಿಕೊಳ್ಳಲು ವರ್ಷಾನುಗಟ್ಟಲೆ ಕಠಿಣ ಅಭ್ಯಾಸ ಬೇಕು. ಇಂದಿನ ಪೀಳಿಗೆಗೆ ‘ರೀಲ್ಸ್’ ಅಥವಾ ‘ಫಾಸ್ಟ್ ಮ್ಯೂಸಿಕ್’ ನಂತಹ ತಕ್ಷಣಕ್ಕೆ ಕಿವಿಗಿಂಪು ನೀಡುವ ಸಂಗೀತ ಇಷ್ಟವಾಗುತ್ತಿದೆ. ಆದರೆ ಶಾಸ್ತ್ರೀಯ ಸಂಗೀತವನ್ನು ಅರ್ಥಮಾಡಿಕೊಳ್ಳಲು ಮತ್ತು ಆಸ್ವಾದಿಸಲು ತಾಳ್ಮೆ ಹಾಗೂ ಸಮಯ ಬೇಕು. ಮುಂದಿನ ಯುವ ಪೀಳಿಗೆಗೆ ಸಹಕಾರಿಯಾಗಬೇಕೆಂದರೆ ತಾಲೂಕಿನಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳು ಆಯೋಜನೆ ಆಗಬೇಕಿದೆ. ಇಲ್ಲಿ ಕೂಡ ಹಲವಾರು ಅತ್ಯುತ್ತಮ ಕಲಾವಿದರಿದ್ದಾರೆ, ಅಂತಹ ಕಲಾವಿದರಿಗೆ ಒಂದು ವೇದಿಕೆ ರೂಪುಗೊಳ್ಳಬೇಕಿದೆ. ಸಂಗೀತ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಟ್ರಸ್ಟ್ ವತಿಯಿಂದ ಆಯೋಜಿಸುವ ಯೋಜನೆ ಇದೆ ಎಂದರು.

ಕೆಡಿಪಿ ಸದಸ್ಯರಾದ ಸೌಮ್ಯಾ ಆನಂದ್ ಮಾತನಾಡಿ, ನಮ್ಮ ತಂದೆ ಕಾಲದಿಂದಲೂ ಇಂತಹ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಾ ಬಂದಿದ್ದರು, ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಯುವಕರನ್ನು ಸೆಳೆಯುವ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು,

ಶ್ರೀ ಮಠದ ವ್ಯವಸ್ಥಾಪಕರಾದ ಸುಧೀಂದ್ರ ಮಾತನಾಡಿ, ಮನೆಗಳಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ದಾಸರ ಪದಗಳನ್ನು ಅಥವಾ ಸರಳವಾದ ಶಾಸ್ತ್ರೀಯ ಸಂಗೀತವನ್ನು ಕೇಳಿಸುವ ಅಭ್ಯಾಸ ಮಾಡಬೇಕು. ಸಂಗೀತ ಕಚೇರಿಗಳಿಗೆ ಮಕ್ಕಳನ್ನು ಕರೆದೊಯ್ದು, ಅದರ ಗಾಂಭೀರ್ಯವನ್ನು ಅವರಿಗೆ ಪರಿಚಯಿಸಬೇಕು ಎಂದರು.

ತಾಲೂಕಿನ ಕಲಾವಿದರುಗಳಾದ ಹರೀಶ್ ಮತ್ತು ಗಾಯತ್ರಿ ರವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ನಿರ್ದೇಶಕರಾದ ವಿಷ್ಣು ಪ್ರಸಾದ್, ಜಿಲ್ಲಾ ಕೆಡಿಪಿ ಸದಸ್ಯರಾದ ಸೌಮ್ಯಾ ಆನಂದ್, ಶ್ರೀ ಮಠದ ಸುಧೀಂದ್ರ, ಲೋಕೇಶ್, ಸವಿತಾ ಸಮಾಜದ ಚಂದ್ರು, ನಟರಾಜ್, ಕಲಾವಿದರಾದ ಚೂಡಾಮಣಿ , ಸಂಜೀವ, ಶ್ರೇಯಾ, ನಂದೀಶ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಜ್ಞಾನಾರ್ಜನೆಗೆ ಗುಣಾತ್ಮಕ, ಮೌಲ್ಯಯುತ ಚಿಂತನೆ ಅಗತ್ಯ: ಆರ್.ಎ.ನಾಗಣ್ಣ
ಮಕ್ಕಳಿಗೆ ಬುದ್ಧನ ಜೀವನ, ಸಾಧನೆ ತಿಳಿಸಿದರೆ ಸಮಾಜಕ್ಕೆ ಒಳಿತು