ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮಶಕ್ತಿ ಮೂಡಿಸುತ್ತವೆ

KannadaprabhaNewsNetwork |  
Published : Feb 03, 2024, 01:45 AM IST
5 | Kannada Prabha

ಸಾರಾಂಶ

ಯುವುದರ ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿಯೂ ತೊಡಗಿಸಕೊಳ್ಳಬೇಕಾಗಿರುವುದು ಬಹಳ ಮುಖ್ಯ. ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ಪರಂಪರೆಯನ್ನು ಪರಿಚಯಿಸಿ ವ್ಯಕ್ತಿತ್ವದ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಸಮುದಾಯದ ಒಳಗೆ ಕಂಡುಬರುವ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಗೌರವಿಸಿ ಸಹಬಾಳ್ವೆಯ ಜೀವನಕ್ಕೆ ಒತ್ತುಕೊಡುತ್ತವೆ

- ಮೈಸೂರು ವಿವಿ ಕುಲಪತಿ ಡಾ.ಎನ್.ಕೆ. ಲೋಕನಾಥ್ ಕನ್ನಡಪ್ರಭ ವಾರ್ತೆ ಮೈಸೂರು

ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮಶಕ್ತಿಯನ್ನು ಮೂಡಿಸುತ್ತವೆ ಎಂದು ಮೈಸೂರು ವಿವಿ ಕುಲಪತಿ ಡಾ.ಎನ್.ಕೆ. ಲೋಕನಾಥ್ ತಿಳಿಸಿದರು.

ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ನಡೆದ ಸ್ನಾತಕೋತ್ತರ ವಿಭಾಗದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಅನಿವಾರ್ಯವಾಗಿವೆ ಎಂದರು.

ಶಿಕ್ಷಣದಲ್ಲಿ ಗಂಭೀರವಾದ ಸಾಧನೆಗಳನ್ನು ಮಾಡುವ ಕನಸು ಕಾಣುವಂತೆ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲೂ ಗಂಭೀರವಾದ ಸಾಧನೆ ಮಾಡಬೇಕು. ಶಾಲಾ ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು ಸಾಂಸ್ಕೃತಿಕ ಹಬ್ಬಗಳಂತೆ ಕಂಡು ಬರುತ್ತವೆ. ಈ ಹಬ್ಬದ ಚಟುವಟಿಕೆಗಳು ಎಲ್ಲರನ್ನೂ ಭಾಗಿಯಾಗುವಂತೆ ಮಾಡುತ್ತದೆ. ಎಲ್ಲರನ್ನೂ ಒಗ್ಗೂಡಿಸುವ ಭಾಗಿತ್ವದ ಕೌಶಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ರೂಪಿಸುತ್ತದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಕಾಲೇಜಿನ ದಿನಗಳು ಅಮೌಲ್ಯವಾದವು. ಮೌಲ್ಯಯುತವಾದ ಶಿಕ್ಷಣವನ್ನು ಪಡೆಯುವುದರ ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿಯೂ ತೊಡಗಿಸಕೊಳ್ಳಬೇಕಾಗಿರುವುದು ಬಹಳ ಮುಖ್ಯ. ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ಪರಂಪರೆಯನ್ನು ಪರಿಚಯಿಸಿ ವ್ಯಕ್ತಿತ್ವದ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಸಮುದಾಯದ ಒಳಗೆ ಕಂಡುಬರುವ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಗೌರವಿಸಿ ಸಹಬಾಳ್ವೆಯ ಜೀವನಕ್ಕೆ ಒತ್ತುಕೊಡುತ್ತವೆ ಎಂದು ಅವರು ತಿಳಿಸಿದರು.

ಸಾಂಸ್ಕೃತಿಕ ಆಯಾಮವೂ ಅಗತ್ಯ

ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಶಿಕ್ಷಣಕ್ಕೆ ಔದ್ಯೋಗಿಕ ಮತ್ತು ಔದ್ಯಮಿಕ ಆಯಾಮಗಳು ಇರುವಂತೆ ವಿದ್ಯಾರ್ಥಿಗಳಲ್ಲಿ ಗೆಲುವು, ಚೈತನ್ಯ, ಆತ್ಮವಿಶ್ವಾಸ, ಜೀವಪರ ಕಾಳಜಿ ಮತ್ತು ಆಶಾದಾಯಕ ಬದುಕನ್ನು ಕಾಣಲು ಸಾಂಸ್ಕೃತಿಕ ಆಯಾಮವೂ ಅತ್ಯಗತ್ಯ ಎಂದರು.

ಸಾಂಸ್ಕೃತಿಕ ಚಟುವಟಿಕೆ ಮತ್ತು ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಕ್ತಿಯನ್ನು ತುಂಬುದರಲ್ಲಿ ವಿಶೇಷ ಪಾತ್ರವಹಿಸಿವೆ. ಆರೋಗ್ಯವಂತ ದೇಹ ಮತ್ತು ಮನಸ್ಸನ್ನು ಕಾಪಾಡಿಕೊಳ್ಳಲು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಬೇಕು. ಈ ರೀತಿಯ ಸಮೂಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಪ್ರತಿಭೆ, ನೈಪುಣ್ಯತೆ, ಆತ್ಮವಿಶ್ವಾಸವನ್ನು ಮೂಡಿಸುತ್ತವೆ. ಒಬ್ಬನೇ ಬೆಳೆಯುವ ಬದಲು, ಸಮೂಹದೊಂದಿಗೆ ಬೆಳೆಯುವ ಮನೋಭಾವವನ್ನು ಮೂಡಿಸುತ್ತವೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಕಾಲೇಜುಗಳು ಕೇವಲ ಪಠ್ಯ ವಿಷಯಗಳನ್ನು ಕಲಿಸುವ ಕಾರ್ಖಾನೆಗಳಾಗದೆ ಪರಿಪೂರ್ಣ ವ್ಯಕ್ತಿತ್ವ ರೂಪಿಸುವ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳಾಗಬೇಕು. ವಿದ್ಯಾರ್ಥಿಗಳಲ್ಲಿರುವ ಸುಪ್ತಪ್ರತಿಭೆ ಅರಳಲು ಮತ್ತು ಸೃಜನಶೀಲತೆ ಬೆಳೆಯಲು ಅವಕಾಶಗಳನ್ನು ಒದಗಿಸಬೇಕು. ಆ ಮೂಲಕ ವ್ಯಕ್ತಿತ್ವ ವಿಕಸನವಾಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಎಸ್. ಪ್ರತಿಭಾ, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ.ಎಂ.ಪಿ. ಸೋಮಶೇಖರ್, ಕ್ರೀಡಾ ವೇದಿಕೆಯ ಸಂಚಾಲಕ ಎಂ. ಕಾರ್ತಿಕ್ ಇದ್ದರು. ಡಿ.ಸಿ. ಮಂಜುನಾಥ ಸ್ವಾಗತಿಸಿದರು. ಅನಘ ಮತ್ತು ರಕ್ಷಿತ ಎಸ್. ಕುಮಾರ್ ಪ್ರಾರ್ಥಿಸಿದರು. ಎಂ. ಹಿಮಶ್ರೀ ವಂದಿಸಿದರು. ಪ್ರಿಯಾಂಕ ಪಲ್ಲದ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ