ರಾಮನಗರ: ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರವಾಗಲೆಂದು ಸಂಸದ ಡಿ.ಕೆ. ಸುರೇಶ್ ಹೇಳಿರುವುದು ಇನ್ ಮೆಚ್ಯೂರ್ ಸ್ಟೇಟ್ ಮೆಂಟ್. ಇಲ್ಲಿ ಕಲ್ಲು ಹೊಡೆದು ಲೂಟಿ ಮಾಡಿಕೊಂಡಿದ್ದವರನ್ನು ನಮ್ಮ ಜನರು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬಿಡದಿ ಸಮೀಪದ ಕೇತಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಬಡ ಜನರ ಜಮೀನು ಲೂಟಿ ಮಾಡಿಕೊಂಡು ಸಾಕ್ಷಿಗುಡ್ಡೆ ಮಾಡಿದ್ದಾರೆ. ಅಂತವರನ್ನು ದೇಶ ಕಟ್ಟು ಅಂತ ಕಳುಹಿಸಿದರೆ ಕಟ್ಟುತ್ತಾರಾ. ಅವರ ಸಾಮ್ರಾಜ್ಯ ಕಟ್ಟುಕೊಳ್ಳುತ್ತಾರೆ ಅಷ್ಟೇ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಕಿಡಿಕಾರಿದರು.ಕೇಂದ್ರ ಸರ್ಕಾರದಿಂದ ಆರ್ಥಿಕ ತಾರತಮ್ಯ ಜೊತೆಗೆ ಎಲ್ಲ ವಿಚಾರಗಳಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಕಾರಣ ನೀಡಿ ಸಂಸದ ಡಿ.ಕೆ.ಸುರೇಶ್ ದೇಶ ವಿಭಜನೆಯ ಮಾತುಗಳನ್ನಾಡಿದ್ದಾರೆ. ಇದು ಇನ್ ಮೆಚ್ಯೂರ್ ಸ್ಟೇಟ್ ಮೆಂಟ್ ಎಂದು ಲೇವಡಿ ಮಾಡಿದರು.
ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಒಂದಾಗಿರಬೇಕು ಎಂದು ಭಾರತ್ ಜೋಡೋ ಯಾತ್ರೆ ಮಾಡಿದರು. ಈಗ ಅವರೇ ದೇಶ ಇಬ್ಭಾಗ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಅದರಿಂದ ಏನು ಸಾಧನೆ ಮಾಡುತ್ತಾರೆ. ಒಂದು ವೇಳೆ ದೇಶ ವಿಭಜನೆ ಆಯಿತೆಂದು ತಿಳಿದುಕೊಳ್ಳಿ. ಆನಂತರ ಕರ್ನಾಟಕದಲ್ಲಿ ನೀರಾವರಿಗೆ ಸಂಬಂಧಿಸಿದಂತೆ ನೆರೆಯ ತಮಿಳುನಾಡಿನಿಂದ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಸ್ವಾತಂತ್ರ್ಯ ಬಂದ ನಂತರ ಒಕ್ಕೂಟ ವ್ಯವಸ್ಥೆಯಲ್ಲಿ ದೇಶದ ಮೊದಲನೇ ಬಜೆಟ್ ಗಾತ್ರ 174 ಕೋಟಿ ರು. ಆಗಿತ್ತು. ಆ ದಿನಗಳಲ್ಲಿ ಜನರಿಗೆ ಊಟ ಮಾಡಲು ಆಹಾರದ ಕೊರತೆ ಇತ್ತು. ಆಗಿನಿಂದಲೂ ಸರ್ಕಾರಗಳು ಬಜೆಟ್ ಮಂಡಿಸಿಕೊಂಡು ಬಂದಿವೆ. ಇವತ್ತು ನಾವು ಫೈನಾನ್ಸ್ ಕಮಿಷನ್ ಗಳನ್ನು ಮಾಡಿಕೊಂಡಿದ್ದೇವೆ. ಅವರು ಎಲ್ಲಾ ರಾಜ್ಯಕ್ಕೂ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಾರೆ. ಯಾವ ರಾಜ್ಯಕ್ಕೆ ಎಷ್ಟು ಹಣ ಬೇಕು ಎನ್ನುವ ವರದಿ ಕೊಡುತ್ತಾರೆ. ಯಾವ ರಾಜ್ಯ ಅಭಿವೃದ್ಧಿ ಆಗಿಲ್ಲ, ಯಾವ ರಾಜ್ಯ ಅಭಿವೃದ್ಧಿ ಆಗಿದೆ ಎಂಬುದನ್ನು ನೋಡಿ ಹಣ ಹಂಚಿಕೆ ಮಾಡುತ್ತಾರೆ. ಇದನ್ನು ಮೋದಿ ಬಂದು ಪ್ರಾರಂಭ ಮಾಡಿದ್ದಲ್ಲ. ಕಾಂಗ್ರೆಸ್ ಸರ್ಕಾರದಲ್ಲಿಯೇ ಪ್ರಾರಂಭವಾಗಿದ್ದು ಎಂದರು.ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ನಡೆಸಿ ನಾಡಿನ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಹಾಗೂ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ವಾಸ್ತವವನ್ನು ಅವರಿಗೆ ಮನವರಿಕೆ ಮಾಡಬೇಕು. ಅವರ ಮನವೊಲಿಸಿ ರಾಜ್ಯಕ್ಕೆ ಅಗತ್ಯವಾದದ್ದನ್ನು ಪಡೆಯಬೇಕು. ಅದನ್ನ ಬಿಟ್ಟು ಇವರ ಬಾಲಿಷ ಹೇಳಿಕೆಗಳಿಂದ ಸಮಸ್ಯೆ ಬಗೆಹರಿಯಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿಕೆಗೆ ಕುಮಾರಸ್ವಾಮಿ ಟಾಂಗ್ ನೀಡಿದರು.
ಕಾಂಗ್ರೆಸ್ ಸರ್ಕಾರದಲ್ಲೂ ಕಮಿಷನ್ ದಂಧೆ:ಕಾಂಗ್ರೆಸ್ ಸರ್ಕಾರದಲ್ಲೂ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆಂಬ ಮಾಜಿ ಸಚಿವ ಎಂ.ಸಿ. ಶಿವರಾಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ 40 ಪರ್ಸೆಂಟ್ ಇದ್ದ ಕಮಿಷನ್, ಕಾಂಗ್ರೆಸ್ ನಲ್ಲಿ 50 ಪರ್ಸೆಂಟ್ ಇದೆ ಅಂತ ಶಿವರಾಂ ಅವರೇ ಹೇಳಿದ್ದಾರೆ. ಬಿಜೆಪಿಗಿಂತಲೂ ಕಾಂಗ್ರೆಸ್ ನಲ್ಲಿಯೇ ಪರ್ಸೆಂಟ್ ಜಾಸ್ತಿ ಇದೆ ಅಂತ ತಲೆ ಚಚ್ಚಿಕೊಂಡಿದ್ದಾರೆ ಎಂದರು.
ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಗಳಲ್ಲಿ ಯಾರೊ ಒಬ್ಬರು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣನ ನಮ್ಮ ಮಾರ್ಗದರ್ಶಕರು, ರಾಜಕೀಯ ಗುರುಗಳು ಅಂತ ಹೇಳಿದ್ದಾರೆ. ಆದರೀಗ ಕೆಂಪಣ್ಣನವರೇ ಬಾಣಲಿಯಿಂದ ಬೆಂಕಿಗೆ ಬಿದ್ದಂತಾಗಿದೆ ಅಂತ ಹೇಳಿಕೆ ಕೊಟ್ಟಿದ್ದಾರೆ.ಈ ಸರ್ಕಾರದಲ್ಲಿ ಪ್ರತಿನಿತ್ಯ ವರ್ಗಾವಣೆ ದಂಧೆ ಆಗಿ ಹೋಗಿದೆ. ಇದನ್ನೆಲ್ಲ ಕುಮಾರಸ್ವಾಮಿ ಪ್ರಶ್ನೆ ಮಾಡಿದರೆ ಅವರಿಗೆ ಅಸಹನೆ, ಮೆಂಟಲ್ ಬ್ಯಾಲೆನ್ಸ್ ತಪ್ಪಿದೆ ಅನ್ನುತ್ತಾರೆ. ನಿನ್ನೆ ಸಿದ್ದರಾಮಯ್ಯರವರು ಮೋದಿ ಬಗ್ಗೆ ಕಮೆಂಟ್ ಮಾಡಿದ್ದಾರೆ. ಮೊದಲು ನಿಮ್ಮ ಸ್ಥಿತಿ ನೋಡಿಕೊಳ್ಳಿ. ನಿಮ್ಮ ನಾಯಕತ್ವದಲ್ಲಿ ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಾ ಅಂತ ಹೇಳಿ ಎಂದು ಕುಮಾರಸ್ವಾಮಿ ಕುಟಕಿದರು.
ಬಾಕ್ಸ್..........ಶೋಷಿತರ ಹೆಸರಿನಲ್ಲಿ ಸಿಎಂ ಸಿದ್ದು ಮಜಾ: ಕುಮಾರಸ್ವಾಮಿ
ರಾಮನಗರ: ಶೋಷಿತ ವರ್ಗದ ಹೆಸರಿನಲ್ಲಿ ಮೇಲೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಜಾ ಮಾಡುತ್ತಿದ್ದಾರೆ. ಅಷ್ಟಕ್ಕೂ ಕಾಂತರಾಜು ವರದಿ ಸ್ವೀಕರಿಸಬೇಡಿ ಅಂತ ನಿಮ್ಮನ್ನು ಹಿಡಿದುಕೊಂಡಿರುವವರು ಯಾರು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಷಿತ ವರ್ಗದ ಹೆಸರಿನಲ್ಲಿ ನೀವು ಮಜಾ ಮಾಡುತ್ತಿದ್ದರೆ, ಆ ಜನರು ಬೀದಿಯಲ್ಲಿದ್ದಾರೆ. ಎಷ್ಟು ಜನರನ್ನು ಮೀಸಲಾತಿ ವ್ಯವಸ್ಥೆಯಲ್ಲಿ ಉಳಿಸಿಕೊಂಡಿದ್ದಾರೆ. ಎಷ್ಟು ಜನರಿಗೆ ಅನುಕೂಲವಾಗಿದೆ. ಮೀಸಲಾತಿ ಪಡೆದುಕೊಂಡವರ ಮತ್ತೆ ಮತ್ತೆ ಮೀಸಲು ಸೌಲಭ್ಯ ಪಡೆಯುತ್ತಿದ್ದಾರೆ. ಅದಕ್ಕೆ ಏನು ಹೇಳುತ್ತಾರೆ. ಮೀಸಲು ಸೌಲಭ್ಯ ಪಡೆದವರೇ ಎಷ್ಟು ವರ್ಷ ಪಡೆಯುತ್ತಾರೆ ಎಂಬುದನ್ನು ಜನರಿಗೆ ತಿಳಿಸಲಿ ಎಂದರು.
ಕಾಂಗ್ರೆಸ್ಸಿಗರಿಗೆ ಶೋಷಿತ ವರ್ಗದ ಜನರ ಬದುಕು ಬೇಕಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷದಿಂದಲೂ ಅವರ ಹೆಸರು ಹೇಳಿಕೊಂಡು ರಾಜಕೀಯ ಜೀವನ ಮಾಡುತ್ತಿದ್ದಾರೆ. ಇನ್ನೂ ಎಷ್ಟು ವರ್ಷ ರಾಜಕಾರಣ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದರು.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಕಾಂತರಾಜು ವರದಿ ತೆಗೆದುಕೊಂಡಿಲ್ಲ ಎಂದು ಬೀದಿಯಲ್ಲಿ ಮಾತನಾಡಿದ್ದಾರೆ. ಆ ವರದಿಯಲ್ಲಿ ಮೆಂಬರ್ ಸೆಕ್ರೆಟರಿ ಸಹಿ ಇತ್ತಾ. ಇವತ್ತಿನವರೆಗೂ ಆ ವರದಿಗೆ ಸಹಿ ಹಾಕಿಲ್ಲ. ಸಹಿ ಹಾಕದ ವರದಿಯನ್ನು ನಾನು ಹೇಗೆ ಸ್ವೀಕರಿಸಲಿ. ಸಿದ್ದರಾಮಯ್ಯ ಅವರಿಗೆ ಇಷ್ಟೂ ಪರಿಜ್ಞಾನ ಇಲ್ಲವಾ.ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಾರೆ ಎಂದು ಕಿಡಿಕಾರಿದರು.
ಒಂದು ವರ್ಷ ಆಯಿತಲ್ಲ, ಜಯಪ್ರಕಾಶ್ ಶೆಟ್ಟಿರವರ ಕೈಯಲ್ಲಿ ಇನ್ನೂ ಏನನ್ನು ಬರೆಸುತ್ತಿದ್ದೀರಿ, ಈಗ ವರದಿಯನ್ನೇ ಪಡೆದಿಲ್ಲ ಅನ್ನುತ್ತೀರಿ. 2017ರಲ್ಲಿ ದಿನಪತ್ರಿಕೆಗಳಲ್ಲಿ ಜಾತಿವಾರು ಜನಸಂಖ್ಯೆ ವರದಿ ಬರೆಸಿದರಲ್ಲ, ಯಾರು ಬರೆಸಿದವರು. ಆ ವರದಿಯನ್ನು ಸೋರಿಕೆ ಮಾಡಿದವರು ಯಾರು. ವರದಿ ನೋಡದೆ ಅವೈಜ್ಞಾನಿಕ ಅನ್ನುತ್ತಿದ್ದಾರೆಂದು ಹೇಳುತ್ತೀರಾ. ಸೋರಿಕೆ ಆಗಿರುವುದರಿಂದಲೇ ಅವೈಜ್ಞಾನಿಕ ಅಂತ ಹೇಳುತ್ತಿದ್ದಾರೆ. ತಮ್ಮ ತಪ್ಪನ್ನು ಮರೆಮಾಚಲು ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.ಬಾಕ್ಸ್............
ದೇವೇಗೌಡ್ರು ಇಲ್ಲದ್ದಿದ್ರೆ ಏನು ಮಾಡುತ್ತಿದ್ರು: ಎಚ್ಡಿಕೆರಾಮನಗರ: ಮಾಜಿ ಪ್ರಧಾನಿ ದೇವೇಗೌಡರ ಮುಖ ನೋಡಿಕೊಂಡು ಸುಮ್ಮನಿದ್ದೀನಿ ಅಂತ ಹೇಳಿದ್ದಾರೆ. ಇಲ್ಲ ಅಂದಿದ್ದರೆ ಏನು ಮಾಡುತ್ತಿದ್ದರು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೀನಿ. ಅವರು ನನಗೇನು ಎದುರಾಳಿನಾ. ಅದೇನು ಮಾಡುತ್ತಾರೊ ಮಾಡಲಿ ನೋಡೋಣ ಎಂದರು.ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್ ಅವರನ್ನು ನಾನು ಹೊರಹಾಕಿದನಾ. ಹೆಗಡೆ ಅವರು ರಾಜಕಾರಣದಲ್ಲಿದ್ದಾಗ ನಾನು ಆಗಿನ್ನೂ ನಾನು ಚಿಕ್ಕ ಹುಡುಗ. ಅವರಿಗೆ ಇಷ್ಟೂ ಗೊತ್ತಿಲ್ಲವೇ. ನನ್ನ ಸೋಲಿನ ಬಗ್ಗೆ ಮಾತನಾಡುವವರು ಅವರು ಸಚಿವರಾಗಿದ್ದಾಗಲೂ ಸೋತರಲ್ಲ ಏಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
2ಕೆಆರ್ ಎಂಎನ್ 3.ಜೆಪಿಜಿಮಾಜಿ ಸಿಎಂ ಕುಮಾರಸ್ವಾಮಿ