ಕನ್ನಡಪ್ರಭ ವಾರ್ತೆ ಮೈಸೂರು
ಜಾಗತಿಕ ತಾಪಮಾನದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರಬೇಕು, ಜಾಗತಿಕ ತಾಪಮಾನವನ್ನು ಸಮತೋಲನಗೊಳಿಸಿಕೊಳ್ಳುವುದರ ಬಗ್ಗೆ ಇಂದು ಚಿಂತಿಸುವಂತೆ ಆಗಿದೆ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ವಿಭಾಗದ ನಿರ್ದೇಶಕ ಎನ್.ಎಂ. ಶಿವಶಂಕರಪ್ಪ ಹೇಳಿದರು.ನಗರದ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಾಳಿ, ನೀರು, ವಾತಾವರಣ ಎಲ್ಲವನ್ನು ಮಾನವ ಕಲುಷಿತಗೊಳಿಸುತ್ತಿದ್ದಾನೆ. ಸಾವಿರಾರು ಗಿಡಗಳನ್ನು ನೆಟ್ಟರೂ ಜಾಗತಿಕ ತಾಪಮಾನದ ಸಮತೋಲನ ಅಸಾಧ್ಯವೆಂಬಂತಾಗಿದೆ. ಗಿಡ ನೆಡುವುದು ಮತ್ತು ಅವುಗಳನ್ನು ಪೋಷಿಸುವುದೊಂದೇ ನಮ್ಮ ಮುಂದಿರುವ ಪರಿಹಾರ. ನದಿಗಳನ್ನು ಮಾನವ ಕಲುಷಿತಗೊಳಿಸುತ್ತಿದ್ದಾನೆ. ನದಿಗಳಲ್ಲಿ ಪ್ಲಾಸ್ಟಿಕ್ ತೇಲುತ್ತಿರುವುದು ಹೆಚ್ಚು ಅಪಾಯಕಾರಿ ಸಂಗತಿಯಾಗಿದೆ. ಇದೆಲ್ಲವೂ ನಮ್ಮ ಪ್ರಜ್ಞೆಗೆ ಬಂದರೂ ಇವುಗಳನ್ನು ತಡೆಗಟ್ಟುವಲ್ಲಿ ನಾವೆಲ್ಲರೂ ಮಂದಗತಿಗಳಾಗಿದ್ದೇವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಿಇಒ ಪ್ರೊ.ಬಿ.ವಿ. ಸಾಂಬಶಿವಯ್ಯ ಮಾತನಾಡಿ, ಪರಿಸರವನ್ನು ಉತ್ತಮ ರೀತಿಯಲ್ಲಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ನೀರು, ಗಾಳಿ, ಮಣ್ಣು ಇವೆಲ್ಲವನ್ನು ಮಾನವನ ಆಧುನಿಕ ಬದುಕು ಕಲುಷಿತಗೊಳಿಸುತ್ತಾ ಇದೆ. ಇದರ ಬಗ್ಗೆ ಎಲ್ಲರಿಗೂ ಜಾಗೃತ ಪ್ರಜ್ಞೆ ಇರಬೇಕು. ಅರಣ್ಯನಾಶದಿಂದ ಮಾನವ ಮತ್ತು ಪ್ರಾಣಿಗಳ ನಡುವೆ ಸಂಘರ್ಷದ ಸವಾಲುಗಳು ಉಂಟಾಗುತ್ತಿವೆ. ಗಿಡಗಳು ನಡೆವುದು ಎಂದರೆ ಒಂದು ಸುಂದರ ಪರಿಸರ ಮತ್ತು ಸುಂದರ ನೆನಪುಗಳನ್ನು ಸೃಷ್ಟಿಸಿದಂತೆ ಎಂದರು.
ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದ ಎಸ್. ನೇಹ ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ.ಎಚ್.ಎಸ್. ಸುಜಾತ ಅವರು ಪರಿಸರ ದಿನಾಚರಣೆಯ ಹಿನ್ನೆಲೆ, ಮಹತ್ವ ಮತ್ತು ಷೋಷವಾಕ್ಯವನ್ನು ವಿವರಿಸಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಪ್ರಭು ಸ್ವಾಗತಿಸಿದರು. ಸ್ನಾತಕ ಪದವಿ ವಿದ್ಯಾರ್ಥಿ ತುಳಸಿ ಪ್ರಸಾದ್ ಪ್ರಾರ್ಥಿಸಿದರು. ಅರ್ಗಿಲ ಎಸ್. ಪಟೇಲ್ ನಿರೂಪಿಸಿದರು. ರಚನಾ ವಂದಿಸಿದರು.