ಧಾರವಾಡ: ನೈತಿಕ ನೆಲೆಗಟ್ಟಿನ ಮೇಲೆ ಮಕ್ಕಳಿಗೆ ಶಿಕ್ಷಣ ನೀಡಿದಾಗ ಮಾತ್ರ ಅವರಲ್ಲಿ ಶಿಸ್ತು, ಸಂಯಮ, ಸಮಯ ಪರಿಪಾಲನೆ ಹಾಗೂ ಜವಾಬ್ದಾರಿ ನಿರೀಕ್ಷಿಸಲು ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ, ಜೆಎಸ್ಸೆಸ್ಸ್ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಜೆಎಸ್ಸೆಸ್ ಯಾವಾಗಲೂ ಉತ್ಕೃಷ್ಟ ಶಿಕ್ಷಣ ನೀಡುತ್ತಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ನೈತಿಕ ತಳಹದಿಯ ಮೇಲೆ ಶಿಕ್ಷಣ ನೀಡುತ್ತಿರುವುದು ಈ ಸಂಸ್ಥೆಯ ಹೆಗ್ಗುರುತು ಎಂದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕ ಗಳಿಸುತ್ತಿದ್ದಾರೆ. ಇದರಲ್ಲಿ ಪಾಲಕರ ಹಾಗೂ ಶಿಕ್ಷಕರ ಪರಿಶ್ರಮವೂ ಅಡಗಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಪದವಿ ಪೂರ್ವ ಶಿಕ್ಷಣ ಒಂದು ಮೈಲಿಗಲ್ಲು. ಈ ಶಿಕ್ಷಣ ಅವರ ಉನ್ನತ ಶಿಕ್ಷಣದ ಭವಿಷ್ಯ ನಿರ್ಮಿಸುತ್ತದೆ. ಈ ಕಾಲೇಜಿನ ವಿದ್ಯಾರ್ಥಿಗಳು ಉತ್ತರ ಕರ್ನಾಟಕದಲ್ಲಿಯೇ ಅತ್ಯುತ್ತಮ ಫಲಿತಾಂಶ ಪಡೆದಿರುವುದು ಇಲ್ಲಿನ ತರಬೇತಿ, ಶಿಕ್ಷಕರ ಪರಿಶ್ರಮ, ವಿದ್ಯಾರ್ಥಿಗಳ ನಿರಂತರ ಅಧ್ಯಯನಕ್ಕೆ ಸಿಕ್ಕ ಪ್ರತಿಫಲ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತ ಪ್ರಸಾದ, ನಮ್ಮ ಕಾಲೇಜಿಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಪ್ರವೇಶ ಪಡೆಯತ್ತಾರೆ. ಪದವಿ ಪೂರ್ವ ಪರೀಕ್ಷೆಯಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆ.ಇ.ಇ, ಸಿ.ಇ.ಟಿ, ನೀಟ್ ಗಳಲ್ಲಿ ಅತ್ಯುತ್ತಮ ಸಾಧನೆಗೈಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಇಲ್ಲಿ ನಿರ್ಮಿಸಲಾಗಿದೆ. ಅತ್ಯುನ್ನತ ಪ್ರಯೋಗಾಲಯ, ಗ್ರಂಥಾಲಯ ವಿದ್ಯಾರ್ಥಿಗಳ ಓದಿಗೆ ಪೂರಕವಾಗಿವೆ ಎಂದರು.ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾದ್ಯೆ ನಿರೂಪಿಸಿದರು. ಡಾ. ಸೂರಜ್ ಜೈನ್ ವಂದಿಸಿದರು. ಸಂಸ್ಥೆಯ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು, ಸನ್ಮಾನಿತಗೊಂಡ ವಿದ್ಯಾರ್ಥಿಗಳ ಪಾಲಕರಿದ್ದರು.