ಜೆ.ಟಿ. ಫೌಂಡೇಶನ್‌ನಿಂದ ಪರೀಕ್ಷಾ ಪ್ಯಾಡ್, ಪೆನ್ನುಗಳ ವಿತರಣೆ

KannadaprabhaNewsNetwork |  
Published : Feb 05, 2026, 02:30 AM IST
 | Kannada Prabha

ಸಾರಾಂಶ

ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿಸಿಕೊಂಡು ಉತ್ತಮ ಅಂಕ ಗಳಿಸಬೇಕು ಎಂದು ಜೆ.ಟಿ. ಫೌಂಡೇಶನ್ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ ತಿಳಿಸಿದರು.

ಬಳ್ಳಾರಿ: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸನ್ಮಾನಿಸುವ ಬೃಹತ್ ಕಾರ್ಯಕ್ರಮ ಬಳ್ಳಾರಿ ನಗರದಲ್ಲಿ ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಅಧ್ಯಯನದಲ್ಲಿ ತೊಡಗಿಸಿಕೊಂಡು ಉತ್ತಮ ಅಂಕ ಗಳಿಸಬೇಕು ಎಂದು ಜೆ.ಟಿ. ಫೌಂಡೇಶನ್ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ ತಿಳಿಸಿದರು.

ತಾಲೂಕಿನ ಚೇಳ್ಳಗುರ್ಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡಿ ಮಾತನಾಡಿದರು.

ಕಳೆದ ಮೂರು ವರ್ಷಗಳಿಂದ ಬಳ್ಳಾರಿ ತಾಲೂಕಿನ ಪೂರ್ವ ಹಾಗೂ ಪಶ್ಚಿಮ ವಲಯದ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ಯಾಡ್ ಹಾಗೂ ಪೆನ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ನಾನೂ ಸರ್ಕಾರಿ ಶಾಲೆಯಲ್ಲಿ ಓದಿದ್ದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿವರ್ಷ ಪ್ರತಿ ಶಾಲೆಗೆ ನಾವೇ ಖುದ್ದಾಗಿ ತೆರಳಿ ಮಕ್ಕಳಿಗೆ ಪರೀಕ್ಷಾ ಪ್ಯಾಡ್ ಹಾಗೂ ಪೆನ್ನುಗಳನ್ನು ನೀಡುತ್ತಿದ್ದೇವೆ. ಇದೇ ವೇಳೆ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಹೋಗಲಾಡಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತಿವರ್ಷ ಬಳ್ಳಾರಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿನ್ನಡೆ ಅನುಭವಿಸಿದೆ. ಈ ಬಾರಿ ಉತ್ತಮ ಫಲಿತಾಂಶ ಬರುವಂತಾಗಲಿ. ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಉನ್ನತ ಶಿಕ್ಷಣಕ್ಕೆ ಹಾದಿ ಮಾಡಿಕೊಳ್ಳಲಿ ಎಂದು ಆಶಿಸಿದರು.

ಹಿರಿಯ ಪತ್ರಕರ್ತ ಶಶಿಧರ ಮೇಟಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅನೇಕ ಸೌಲಭ್ಯಗಳ ಕೊರತೆಗಳ ನಡುವೆ ಸಾಧನೆ ಮಾಡುತ್ತಿದ್ದಾರೆ. ಚೇಳ್ಳಗುರ್ಕಿ ಶಾಲೆಯಿಂದ ಓದಿದ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿ ಸಮಾಜದಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ನೀವು ಸಹ ಉತ್ತಮ ಅಂಕಗಳನ್ನು ಪಡೆದು ಉನ್ನತ ಶಿಕ್ಷಣ ಪಡೆಯಬೇಕು. ಸಮಾಜಮುಖಿ ಸೇವೆಯಲ್ಲಿ ನೀವೂ ತೊಡಗಿಸಿಕೊಳ್ಳಬೇಕು. ದೇಶದಲ್ಲಿ ಸಾಧನೆ ಮಾಡಿದವರ ಪೈಕಿ ಬಹುತೇಕರು ಸರ್ಕಾರಿ ಶಾಲೆಯಲ್ಲಿಯೇ ಓದಿದ ವಿದ್ಯಾರ್ಥಿಗಳಾಗಿದ್ದಾರೆ. ಹೀಗಾಗಿ, ಸರ್ಕಾರಿ ಶಾಲೆ ಎಂಬ ಕೀಳಿರುಮೆ ಬೇಡ. ಗುಣಮಟ್ಟದ ಶಿಕ್ಷಣ ಸಿಗುವುದೇ ಸರ್ಕಾರಿ ಶಾಲೆಯಲ್ಲಿ ಎಂಬುದು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಸದಸ್ಯ ರೂಪನಗುಡಿ ಗೋವಿಂದಪ್ಪ, ಆಂಧ್ರಪ್ರದೇಶದ ಎಂಎಂಪಿ ಮುಖಂಡ ಪ್ರತಾಪ ನಾಯ್ಡು, ರೂಪನಗುಡಿ ಗ್ರಾಪಂ ಅಧ್ಯಕ್ಷ ನಾಗರಾಜ್, ರವಿಸ್ವಾಮಿ, ಮಲ್ಲನಗೌಡ, ಹುಲುಗಪ್ಪ ಶಿಂದಿಗೇರಿ, ಬಸವರಾಜ್ ಬಳ್ಳಾರಿ, ರಾಮ್‌ಪ್ರಸಾದ್, ಸುಭಾಷ್‌ಚಂದ್ರ, ಗೋಪಾಲ, ನಾರಾಯಣಸ್ವಾಮಿ, ಮನೋಜ್ ಜೋಳದರಾಶಿ ಹಾಗೂ ಶಾಲೆಯ ಮುಖ್ಯಗುರು ಹಾಗೂ ಶಿಕ್ಷಕ ವರ್ಗ ಉಪಸ್ಥಿತರಿದ್ದರು.ಚೇಳ್ಳಗುರ್ಕಿ ಎರಿಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪರೀಕ್ಷಾ ಪ್ಯಾಡ್ ಹಾಗೂ ಪೆನ್ನುಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ರೂಪನಗುಡಿ ಗ್ರಾಮದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್ ಹಾಗೂ ಪೆನ್ನುಗಳನ್ನು ವಿತರಣೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಕೆಮಿಕಲ್‌ ಫ್ಯಾಕ್ಟರಿಗಳ ಮೇಲೀಗ ಪೊಲೀಸರಿಂದ ಅಲರ್ಟ್‌
2000 ಬೋಧಕ ಹುದ್ದೆ ಭರ್ತಿಗೆ ಅಸ್ತು : ನೇರ ನೇಮಮಾತಿ ಮೂಲಕ ಭರ್ತಿ