ರೋಣದಲ್ಲಿ ಜೂನ್‌ನಿಂದ ಜೆಟಿಟಿಸಿ ಕಾಲೇಜ್ ತರಗತಿ ಪ್ರಾರಂಭ: ಜಿ.ಎಸ್. ಪಾಟೀಲ

KannadaprabhaNewsNetwork |  
Published : Jan 27, 2026, 03:45 AM IST
ರೋಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ರೋಣ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಜರುಗಿದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ಜಿ.ಎಸ್. ಪಾಟೀಲ್‌ ಭಾಗವಹಿಸಿದ್ದರು.

ರೋಣ: ‌ರೋಣ ಭಾಗಕ್ಕೆ ಮುಂಜೂರಾದ ₹50 ಕೋಟಿ ವೆಚ್ಚದಲ್ಲಿ ಜೆಟಿಟಿಸಿ ಕಾಲೇಜ್ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಜೂನ್‌ನಲ್ಲಿ ತರಗತಿ ಪ್ರಾರಂಭಗೊಳ್ಳಲಿವೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ರೋಣ ಪುರಸಭೆ ಹಾಗೂ ವಿವಿಧ ಇಲಾಖೆ ವತಿಯಿಂದ ಸೋಮವಾರ ಜರುಗಿದ 77ನೇ ಗಣರಾಜ್ಯೋತ್ಸವ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ತಾಂತ್ರಿಕ ಶಿಕ್ಷಣದ ಅಭಿವೃದ್ಧಿ ಹಾಗೂ ಕೌಶಲ್ಯಾಭಿವೃದ್ಧಿ ಉತ್ತೇಜನದ ಕ್ರಮವಾಗಿ ಜಿಟಿಟಿಸಿ ಕಾಲೇಜು ಮುಂಜೂರಾಗಿದ್ದು, ಇದರ ಕಟ್ಟಡ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಿದೆ. ಜೂನ್‌ನಲ್ಲಿ ತರಗತಿಗಳು ಪ್ರಾರಂಭವಾಗಲಿವೆ ಎಂದು ಹೇಳಿದರು. ಕಾಲುವೆಗಳ ಮೂಲಕ ತಾಲೂಕಿನಲ್ಲಿರುವ ಕುಡಿಯುವ ನೀರಿನ ಕೆರೆಗಳನ್ನು ಶೀಘ್ರದಲ್ಲಿ ತುಂಬಿಸಲಾಗುವುದು. ₹30 ಕೋಟಿ ವೆಚ್ಚದಲ್ಲಿ ಕಾಲುವೆಗಳ ಪುನಶ್ಚೇತನ ಕಾರ್ಯ ಕೈಗೊಳ್ಳಲಾಗುವುದು. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ರೈತರಿಗೆ ಪ್ರತಿ ಹೆಕ್ಟರ್‌ಗೆ ಈ ಹಿಂದೆ ನೀಡಲಾಗುತ್ತಿದ್ದ ₹8500 ಜತೆಗೆ ಹೆಚ್ಚುವರಿ ₹8500 ಸೇರಿಸಿ, ಒಟ್ಟು ಪ್ರತಿ ಹೆಕ್ಟೇರ್‌ ಜಮೀನಿಗೆ ₹ 17 ಸಾವಿರ ಪರಿಹಾರ ನೀಡಿದ್ದೇವೆ. ತಾಲೂಕಿನಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಪ್ರಸಕ್ತ ಅವಧಿಯಲ್ಲಿ ಆದ್ಯತೆ ನೀಡಲಾಗಿದ್ದು, ಮುಂಬರುವ ಶೈಕ್ಷಣಿಕ ವರ್ಷದಿಂದ ರೋಣ ಪಟ್ಟಣದಲ್ಲಿ ನೂತನ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ ಎಂದರು.

ತಹಸೀಲ್ದಾರ್‌ ನಾಗರಾಜ ಕೆ. ಮಾತನಾಡಿ, ಭಾರತ ಶ್ರೀಮಂತ ಸಂಸ್ಕೃತಿ ಪರಂಪರೆ ಹೊಂದಿದ್ದು, ನಮ್ಮ ಹಿರಿಯರು ಪಾಲಿಸಿಕೊಂಡು ಬಂದಿರುವ ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವಾಗಬೇಕು. ದೇಶದ ರೈತರು, ಯೋಧರು, ತಂತ್ರಜ್ಞರು, ವೈದ್ಯರು ದೇಶಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಆದರೆ ಕೆಲವು ದೇಶದ್ರೋಹಿಗಳು ದೇಶಕ್ಕೆ ಅನ್ಯಾಯವೆಸಗುತ್ತಿದ್ದಾರೆ‌. ನಮ್ಮ ಸೇನೆ ಮತ್ತು ಆಡಳಿತ ವ್ಯವಸ್ಥೆ ಇಂತಹ ದೇಶದ್ರೋಹಿಗಳನ್ನು ಮಟ್ಟಹಾಕಲು ಸಮರ್ಥವಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಕರು ದೇಶ ಕಟ್ಟುವ ಕಾರ್ಯದಲ್ಲಿ ನಿರತರಾಗಬೇಕು. ಮುಂದಿನ ಕೆಲವೇ ದಿನಗಳಲ್ಲಿ ನಮ್ಮ ದೇಶ ಜಗತ್ತಿನ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.

ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಯಚ್ಚರಗೌಡ ಗೋವಿಂದಗೌಡ್ರ, ತಾಪಂ ಇಒ ಚಂದ್ರಶೇಖರ ಕಂದಕೂರ, ಸಿಪಿಐ ವಿಜಯಕುಮಾರ, ಬಿಇಒ ಅರ್ಜುನ ಕಂಬೋಗಿ, ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ತಹಸೀಲ್ದಾರ್, ಅಕ್ಷರ ದಾಸೋಹ ಅಧಿಕಾರಿ ಎಸ್.ಎಲ್ ನಾಯ್ಕರ, ತೋಟಗಾರಿಕೆ ಸಹಾಯಕ ನಿರ್ದೇಶಕ ಗಿರೀಶ ಹೊಸೂರು, ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ ಬಿ., ರೋಣ ಪುರಸಭೆ ಮುಖ್ಯಾಧಿಕಾರಿ ರಮೇಶ ಹೊಸಮನಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸರ್ಕಾರದ ಸಾಧನೆ ತಿಳಿ ಹೇಳಿ
ತಂದೆಯಂತೆ ಜನಸೇವೆ ಮಾಡುವ ಕನಸು ನನ್ನದು: ವಿನಯ ತಿಮ್ಮಾಪುರ