ಧಾರವಾಡ: ಹಳ್ಳಿಗೇರಿ ಬಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸುವ ಸಲುವಾಗಿ ಅಕ್ರಮವಾಗಿ ಮರಗಳನ್ನು ಕಡಿದಿರುವ ಪ್ರಕರಣವನ್ನು ಜಿಲ್ಲಾಮಟ್ಟದ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಿ ತನಿಖೆ ಮಾಡಿಸಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆಗ್ರಹಿಸಿದರು.
ಪ್ರಭಾವಿಗಳಾದ ಅವರನ್ನು ಪ್ರಕರಣದಿಂದ ರಕ್ಷಿಸಲು ಅರಣ್ಯ ಇಲಾಖೆ ಅಧಿಕಾರಿಗಳೇ ಕಾನೂನು ಉಲ್ಲಂಘನೆ ಮಾಡಿದ್ದಾರೆ. ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಜೊತೆಗೆ ತಪ್ಪಿತಸ್ಥ ಸ್ಥಾನದಲ್ಲಿರುವ ಸಹಾಯಕ ಅರಣ್ಯಾಧಿಕಾರಿ ಪರಿಮಳಾ ಅವರ ಮೂಲಕವೇ ತನಿಖೆ ಮಾಡಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಮಾಲ್ಕಿ ಜಮೀನು ಹೊಂದಿರುವ ನವೀನ್ ಸಿಂಗ್ ಎಂಬುವರ ಮೇಲೆ ದೂರು ದಾಖಲಿಸಿರುವ ಅರಣ್ಯಾಧಿಕಾರಿಗಳು, ಅವರನ್ನು ಏತಕ್ಕೆ ಬಂಧಿಸಿಲ್ಲ? ಅವರನ್ನು ಬಂಧಿಸಿದರೆ, ವಿನಯ ಕುಲಕರ್ಣಿ ಕುಟುಂಬದ ಸದಸ್ಯರೊಂದಿಗೆ ಕಾಡಿನಂಚಿನಲ್ಲಿ 38 ಎಕರೆ ಜಮೀನಿನ ಬಗ್ಗೆ ನವೀನ್ ಸಿಂಗ್ ಮಾಡಿಕೊಂಡಿರುವ ಒಪ್ಪಂದ ಪತ್ರ ಹೊರ ಬರಲಿದೆ. ಆಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಭಯದಿಂದ ಬಂಧಿಸಿಲ್ಲ. ಜೊತೆಗೆ ಎಫ್‌ಐಆರ್‌ನಲ್ಲಿ ನಕಲಿ ವಾಹನ ನಂಬರ್ ಹಾಕಿ ಟ್ರ್ಯಾಕ್ಟರ್ ಜಪ್ತಿ ಮಾಡಲಾಗಿದೆ. ಕಾಯ್ದಿಟ್ಟ ಅರಣ್ಯದಲ್ಲಿ ಒಂದು ಗಿಡ ಕಡಿದರೂ ಅವರನ್ನು ಬಂಧಿಸಿ ಶಿಕ್ಷಿಸುವ ಅರಣ್ಯ ಇಲಾಖೆ ಈ ಪ್ರಕರಣದಲ್ಲಿ ಯಾವ ಕ್ರಮ ತೆಗೆದುಕೊಂಡಿಲ್ಲ. ಅರಣ್ಯ ಇಲಾಖೆ ಸಚಿವರೂ ಈ ಬಗ್ಗೆ ಒಂದೂ ಹೇಳಿಕೆ ನೀಡಿಲ್ಲ ಎಂದು ಕೊರವರ ಪ್ರಶ್ನಿಸಿದರು.ಈ ಪ್ರಕರಣದ ಮೂಲ ತಪ್ಪಿತಸ್ಥರು ಯಾರೆಂದು ಗೊತ್ತಾಗಬೇಕಾದರೆ, ಮೊಬೈಲ್ ಟಾವರ್ ಡಂಪ್ ತಂತ್ರಜ್ಞಾನ ಬಳಸಬೇಕು. ಆಗ ಆ ಸಮಯದಲ್ಲಿ ಸ್ಥಳದಲ್ಲಿ ಇದ್ದವರ ಪತ್ತೆ, ಅವರೊಂದಿಗೆ ಸಂಭಾಷಣೆ ನಡೆಸಿದವರನ್ನು ಸಹ ಶೋಧಿಸಬಹುದು. ಇಡೀ ಪ್ರಕರಣದಲ್ಲಿ ತಮಗೆ ಅರಿವಿಲ್ಲದಂತೆ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯತೀಶಕುಮಾರ, ವಲಯ ಅರಣ್ಯಾಧಿಕಾರಿ ವಿವೇಕ ಕವರಿ, ಸಹಾಯಕ ಅರಣ್ಯಾಧಿಕಾರಿ ಪರಿಮಳ ಹುಲಗಣ್ಣವರ, ಉಪ ವಲಯ ಅರಣ್ಯಾಧಿಕಾರಿ ಜಿತೇಂದ್ರ ಕಾಂಬಳೆ ಅವರೇ ಹೊಣೆಗಾರರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಈಗಾಗಲೇ ಕೇಂದ್ರ ಅರಣ್ಯ ಇಲಾಖೆಗೆ ದೂರು ನೀಡಿದ್ದು, ರಾಷ್ಟ್ರೀಯ ಹಸಿರು ಪೀಠಕ್ಕೂ ಹೋಗುತ್ತೇನೆಂದು ಕೊರವರ ಎಚ್ಚರಿಸಿದರು.