ಶಿಮ್ಲಾದಲ್ಲಿ ಪ್ರತಿ ಶಾಲೆ- ಕಾಲೇಜ್‌ಗಳಲ್ಲಿ ನೀರಿನ ನಿರ್ವಹಣೆ ಕುರಿತಂತೆ ಅಂದರೆ ಮಿತ ಬಳಕೆ, ನೀರಿನ ಕರ ಸಕಾಲಕ್ಕೆ ಪಾವತಿ ಸಂಬಂಧಪಟ್ಟಂತೆ ಪ್ರತಿನಿತ್ಯ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಮುಂದಿನ ಮುಂಗಾರು ಹಂಗಾಮಿನವರೆಗೂ ಕುಡಿಯುವ ನೀರು ಸರಬರಾಜು ಮಾಡುವಷ್ಟು ಸಂಗ್ರಹವಿದ್ದರೂ ಮುಂಜಾಗ್ರತಾ ಕ್ರಮವಾಗಿ ನೀರಿನ ಮಿತ ಬಳಕೆ ಕುರಿತಂತೆ ಶಿಮ್ಲಾ ಮಾದರಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆ ಮುಂದಡಿ ಇಟ್ಟಿದೆ.
ಶಿಮ್ಲಾದಲ್ಲಿ ಪ್ರತಿ ಶಾಲೆ- ಕಾಲೇಜ್‌ಗಳಲ್ಲಿ ನೀರಿನ ನಿರ್ವಹಣೆ ಕುರಿತಂತೆ ಅಂದರೆ ಮಿತ ಬಳಕೆ, ನೀರಿನ ಕರ ಸಕಾಲಕ್ಕೆ ಪಾವತಿ ಸಂಬಂಧಪಟ್ಟಂತೆ ಪ್ರತಿನಿತ್ಯ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಆ ಮಕ್ಕಳು ತಾವೂ ಜಾಗ್ರತರಾಗಿ ನೀರಿನ ಮಿತ ಬಳಕೆ ಮಾಡುತ್ತಾರೆ. ಜತೆಗೆ ಮನೆಗಳಲ್ಲಿ ಪಾಲಕರಿಗೆ ತಿಳಿಹೇಳುವ ಮೂಲಕ ಪಾಲಕರಲ್ಲೂ ಜಾಗೃತಿ ಮೂಡಿಸುತ್ತಾರೆ. ಈ ಮೂಲಕ ಶಿಮ್ಲಾದಲ್ಲಿ ದೊಡ್ಡ ಆಂದೋಲನದ ರೀತಿಯಲ್ಲೇ ಜಾಗೃತಿ ನಡೆಯುತ್ತಿದೆ.
ಇತ್ತೀಚಿಗೆ ಅಂದರೆ ಕಳೆದ ಅಕ್ಟೋಬರ್ 6 ಮತ್ತು 7 ಶಿಮ್ಲಾಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿರುವ ಪಾಲಿಕೆ ಆಯುಕ್ತರ ನೇತೃತ್ವದ ತಂಡವೂ ಅದೇ ಮಾದರಿಯಲ್ಲಿ ಹುಬ್ಬಳ್ಳಿ- ಧಾರವಾಡದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.
ಹುಬ್ಬಳ್ಳಿ-ಧಾರವಾಡದಲ್ಲಿ 82 ವಾರ್ಡ್‌ಗಳಿವೆ. ಅವುಗಳಲ್ಲಿ ಕೆಲ ವಾರ್ಡ್‌ಗಳಿಗೆ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆಯಾಗುತ್ತಿದ್ದರೆ, ಮತ್ತೆ ಉಳಿದ ವಾರ್ಡ್‌ಗಳಿಗೆ 5 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಹಲವು ಸಲ 5 ದಿನದ ಬದಲಿಗೆ 8-10 ದಿನಗಳಾದರೂ ಕುಡಿಯುವ ನೀರು ಪೂರೈಕೆಯಾಗುವುದಿಲ್ಲ.
ನೀರು ಎಷ್ಟಿದೆ?: ಇನ್ನು ಹುಬ್ಬಳ್ಳಿ- ಧಾರವಾಡಕ್ಕೆ ಸವದತ್ತಿಯ ರೇಣುಕಾ ಜಲಾಶಯದಿಂದ ಪ್ರತಿನಿತ್ಯ 200 ಎಂಎಲ್‌ಡಿ ನೀರು ಪೂರೈಕೆಯಾದರೆ, ನೀರಸಾಗರ ಜಲಾಶಯದಿಂದ 20 ಎಂಎಲ್‌ಡಿ ನೀರು ಪೂರೈಕೆಯಾಗುತ್ತದೆ. ರೇಣುಕಾ ಜಲಾಶಯದಲ್ಲಿ ಕಳೆದ ವರ್ಷ ಈ ಹೊತ್ತಿಗೆ 32 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಆದರೆ ಈ ವರ್ಷ ಸದ್ಯ 17-18 ಟಿಎಂಸಿ ಅಡಿಯಷ್ಟೇ ನೀರಿನ ಸಂಗ್ರಹವಿದೆ. ಇನ್ನು ನೀರಸಾಗರದಲ್ಲಿ 0.3 ಟಿಎಂಸಿ ನೀರು ಸಂಗ್ರಹವಿದೆ. ಮುಂದಿನ ಮುಂಗಾರು ಹಂಗಾಮಿನ ವರೆಗೂ ಅಂದರೆ ಜೂನ್ ವರೆಗೂ ಈ ನೀರು ಸಾಕಾಗುತ್ತದೆ. ಆದರೂ ಮುಂಜಾಗೃತಿ ಕೈಗೊಳ್ಳುವುದು ಅತ್ಯುತ್ತಮ ಎಂದು ಭಾವಿಸಿರುವ ಮಹಾನಗರ ಪಾಲಿಕೆ ನೀರಿನ ಮಿತ ಬಳಕೆ ಕುರಿತಂತೆ ಜಾಗೃತಿ ಮೂಡಿಸಲು ನಿರ್ಧರಿಸಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಜಿಲ್ಲಾಧಿಕಾರಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಜಾಗೃತಿ ಕೈಗೊಳ್ಳುವ ಬಗ್ಗೆ ಅವರ ಗಮನಕ್ಕೆ ತರಲಾಗುವುದು. ಪ್ರಾಧಿಕಾರದ ಅನುಮೋದನೆ ಪಡೆದ ಬಳಿಕ ಹುಬ್ಬಳ್ಳಿ-ಧಾರವಾಡದಲ್ಲಿನ ಎಲ್ಲ ಶಾಲೆ- ಕಾಲೇಜ್‌ಗಳಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಅಧಿಕಾರಿ ವರ್ಗ ತಿಳಿಸುತ್ತದೆ.
ಒಟ್ಟಿನಲ್ಲಿ ಮಹಾನಗರ ಪಾಲಿಕೆಯೂ ನೀರಿನ ಮಿತವ್ಯಯದ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿರುವುದು ಒಳ್ಳೆಯ ಬೆಳವಣಿಗೆ. ಇದರೊಂದಿಗೆ ನೀರಿನ ಸೋರಿಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಜಾಗೃತಿ: ಶಿಮ್ಲಾದಲ್ಲಿ ನೀರಿನ ಮಿತ ಬಳಕೆ ಕುರಿತಂತೆ ಶಾಲೆ- ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಪಾಲಿಕೆ ವ್ಯಾಪ್ತಿಯ ಶಾಲೆ ಕಾಲೇಜ್‌ಗಳಲ್ಲೂ ಜಾಗೃತಿ ಮೂಡಿಸಲು ಯೋಚಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅನುಮೋದನೆ ಪಡೆದು ಬಳಿಕ ಜಾಗೃತಿ ಮೂಡಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ರುದ್ರೇಶ ಘಾಳಿ ತಿಳಿಸಿದರು.
ಪಾಲಿಕೆ ಕ್ರಮ ಸ್ವಾಗತಾರ್ಹ: ಬರ ಇರಲಿ ಅಥವಾ ಭರಪೂರ ನೀರಿದ್ದರೂ ಮುಂದಿನ ಪೀಳಿಗೆಗೆ ನೀರಿನ ಮಿತವ್ಯಯ ಬಳಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವ ಪಾಲಿಕೆ ಕ್ರಮ ಸ್ವಾಗತಾರ್ಹ. ಇದು ಬೇಗನೆ ಶುರುವಾಗಬೇಕು. ಜತೆಗೆ ನಿರಂತರವಾಗಬೇಕು ಎಂದು ಸಾರ್ವಜನಿಕರಾದ ರಮೇಶ ಪಾಟೀಲ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.