ಸ್ಟಾಲಿನ್‌ಗೆ ಮನೆ ಖಚಿತವಾದಂತೆ ಕಾಂಗ್ರೆಸ್ಸಿಗೂ ಮನೆ ಗ್ಯಾರಂಟಿ

KannadaprabhaNewsNetwork |  
Published : May 06, 2026, 01:45 AM IST
ಕೊಪ್ಪಳ ತಾಲೂಕಿನ ಕಲಕೇರಿ ಗ್ರಾಮದ ಸಂತ ಷರೀಪರ ದೇವಸ್ಥಾನದ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಐಇಸಿ ಕಾರ್ಯಕ್ರಮದಡಿ ರೋಜಗಾರ್ ದಿವಸ್ ಜರುಗಿತು. | Kannada Prabha

ಸಾರಾಂಶ

ಉಚಿತ ಅಂತಾ ತಮಿಳುನಾಡಿನ ಜನರಿಗೆ ಹೇಳಿದ್ದ ಸ್ಟಾಲಿನ್‌ಗೆ ಮನೆ ಖಚಿತವಾಗಿದ್ದು, ಗ್ಯಾರಂಟಿ ಹೆಸರನ್ನು ಹೇಳಿಕೊಂಡು ಚುನಾವಣೆ ಮಾಡುತ್ತಿರುವ ಕಾಂಗ್ರೆಸ್ಸಿಗೂ ಮನೆ ಗ್ಯಾರಂಟಿಯಾಗಿದ್ದು, ಡಿಎಂಕೆ ಸ್ಥಿತಿಯೇ ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ಸಿಗೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

- ಉಪ ಚುನಾವಣೆಗೆ ಬಂದ ಗೃಹಲಕ್ಷ್ಮಿ ಮತ್ತೆ ಜಿಪಂ, ತಾಪಂ ಚುನಾವಣೆಗೆ ಬರೋದು: ವಿಜಯೇಂದ್ರ ಟೀಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಉಚಿತ ಅಂತಾ ತಮಿಳುನಾಡಿನ ಜನರಿಗೆ ಹೇಳಿದ್ದ ಸ್ಟಾಲಿನ್‌ಗೆ ಮನೆ ಖಚಿತವಾಗಿದ್ದು, ಗ್ಯಾರಂಟಿ ಹೆಸರನ್ನು ಹೇಳಿಕೊಂಡು ಚುನಾವಣೆ ಮಾಡುತ್ತಿರುವ ಕಾಂಗ್ರೆಸ್ಸಿಗೂ ಮನೆ ಗ್ಯಾರಂಟಿಯಾಗಿದ್ದು, ಡಿಎಂಕೆ ಸ್ಥಿತಿಯೇ ನಮ್ಮ ರಾಜ್ಯದಲ್ಲೂ ಕಾಂಗ್ರೆಸ್ಸಿಗೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ನಿವಾಸಕ್ಕೆ ಮಂಗಳ‍ವಾರ ಭೇಟಿ ನೀಡಿ, ಶ್ರೀನಿವಾಸ ತಾಯಿ, ಪತ್ನಿ, ಸಹೋದರ ಗಣೇಶ, ಸಹೋದರಿಯರು, ಕುಟುಂಬ ವರ್ಗಕ್ಕೆ ಧೈರ್ಯ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಉಚಿತ ಉಚಿತ ಅಂತಾ ಹೇಳಿದ್ದ ಸ್ಟಾಲಿನ್‌ಗೆ ಮನೆ ಹೇಗೆ ಖಚಿತವಾಗಿದೆಯೋ ಅದೇ ಸ್ಥಿತಿ ಗ್ಯಾರಂಟಿ ಜಪಿಸುವ ಕಾಂಗ್ರೆಸ್ಸಿಗೆ ಕರ್ನಾಟಕದಲ್ಲೂ ಮನೆ ಗ್ಯಾರಂಟಿ ಎಂದರು.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನವರೇ ಉಳಿದ 2 ವರ್ಷಕ್ಕಾದರೂ ಗೆಲ್ಲಿಸುವಂತೆ ತಮ್ಮ ಅಭ್ಯರ್ಥಿ ಪರವಾಗಿ ಹೇಳಿಕೊಂಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಫಲಿತಾಂಶ, ಸ್ಟ್ರಾಂಗ್ ರೂಂ ಬೀಗ ಒಡೆದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಮುಂದೆ ಏನು ಮಾಡಬೇಕೆಂಬ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ದಾವಣಗೆರೆ ದಕ್ಷಿಣದ ಬಗ್ಗೆ ನಾವು ಬಹಳ ನಿರೀಕ್ಷೆ ಹೊಂದಿದ್ದೆವು ಎಂದು ಅವರು ತಿಳಿಸಿದರು.

ಬಾಗಲಕೋಟೆಯಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಗ್ಯಾರಂಟಿ ಅಂತಾ ಹೇಳಿಕೊಂಡು, 10-15 ದಿನ ಅಲ್ಲೇ ಕುಳಿತಿದ್ದರು. ಗೃಹಲಕ್ಷ್ಮಿ ಯೋಜನೆ ಬಗ್ಗೆ ನಾನು ಹಿಂದೆಯೇ ಹೇಳಿದ್ದೆ. ಗೃಹಲಕ್ಷ್ಮಿ ಯೋಜನೆ ಎಂಬುದು ಕಾಂಗ್ರೆಸ್ಸಿನವರ ಪಾಲಿಗೆ ಚುನಾವಣೆ ಲಕ್ಷ್ಮಿಯಾಗಿದೆ. ಚುನಾವಣೆ ಸಮೀಪಿಸಿದಾಗ, ಮತದಾನಕ್ಕೆ 3-4 ದಿನವಿದ್ದಾಗ ಹಣ ಬಿಡುಗಡೆ ಮಾಡುತ್ತಾರೆ. ಈಗ ಉಪ ಚುನಾವಣೆಯಾಗಿವೆ. ಇನ್ನು ಮುಂದಿನ ಗೃಹಲಕ್ಷ್ಮಿ ಮುಂಬರುವ ಜಿಪಂ, ತಾಪಂ ಚುನಾವಣೆಗೆ ಬಂದಾಗಲೇ ಫಲಾನುಭ‍ವಿಗಳ ಕೈ ಸೇರುವುದು ಎಂದು ಕುಟುಕಿದರು.

ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ನಮ್ಮ ಕಣ್ಣ ಮುಂದಿದೆ. ನಾವು ಸಾಕಷ್ಟು ನಿರೀಕ್ಷೆ ಹೊಂದಿದ್ದೆವು. ಅದರಲ್ಲೂ ದಾವಣಗೆರೆ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಉಪ ಚುನಾವಣೆಯಲ್ಲಿ ಆಡಳಿತ ಪಕ್ಷದ ಪರ ಮತದಾರರ ಒಲವು ಇರುತ್ತದೆ. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಎರಡೂ ಕಡೆ ಅನುಕಂಪ, ಆಡಳಿತ ಪಕ್ಷದ ವ್ಯವಸ್ಥೆ, 10-15 ದಿನಗಳ ಕಾಲ ಸಿಎಂ ಬೀಡುಬಿಟ್ಟಿದ್ದು ಸಹ ಪರಿಣಾಮ ಬೀರಿದೆ. ಸಚಿವರು ಹಳ್ಳಿ ಹಳ್ಳಿಗೆ ಬಂದು, ಕುಳಿತಿದ್ದರು. ಇದನ್ನು ತಪ್ಪು ಅಂತಾ ನಾನು ಹೇಳುವುದಿಲ್ಲ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಕಾಲದಲ್ಲಿ 17 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳ ಉಪ ಚುನಾವಣೆ ನಾವು ಗೆದ್ದಿದ್ದೆವು ಎಂದು ತಿಳಿಸಿದರು.

ಆಡಳಿತ ಪಕ್ಷದ ಪರ ಜನರ ಒಳವಿದ್ದರೂ ಬಾಗಲಕೋಟೆಗಿಂತಲೂ ಹೆಚ್ಚಾಗಿ ದಾವಣಗೆರೆ ದಕ್ಷಿಣದಲ್ಲಿ ಶ್ರೀನಿವಾಸ ದಾಸಕರಿಯಪ್ಪ ಗೆಲ್ಲಲು ಒಳ್ಳೆಯ ವಾತಾವರಣ ನಿರ್ಮಾಣವಾಗಿತ್ತು. ಎರಡೂ ಕ್ಷೇತ್ರದಲ್ಲೂ ನಮ್ಮ ಕಾರ್ಯಕರ್ತರು, ಸ್ಥಳೀಯ ಮುಖಂಡರು, ಹಗಲು- ರಾತ್ರಿ ಶ್ರಮ ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ, ಬಾಗಲಕೋಟೆಯಲ್ಲಿದ್ದ ಎಲ್ಲ ಗೊಂದಲಗಳನ್ನೆಲ್ಲಾ ಬದಿಗಿಟ್ಟು, ತನು, ಮನ, ಧನ ಅರ್ಪಿಸಿ, ಹೋರಾಟ ಮಾಡಿದ್ದರು. ನಿರೀಕ್ಷಿತ ಮಟ್ಟದಲ್ಲಿ ಮತ ಬರಲಿಲ್ಲ. ವಿಶೇಷವಾಗಿ ಶ್ರೀನಿವಾಸ ದಾಸಕರಿಯಪ್ಪ ಹಿಂದಿನಿಂದಲೂ ಬಡವರ ಮಧ್ಯೆ ಇದ್ದವರು, ಬಡವರ ಜೊತೆಗೆ ಒಡನಾಟ ಹೊಂದಿದ್ದು ಅನುಕೂಲವಾಯಿತು. ಸುಮಾರು 64 ಸಾವಿರ ಮತ ಪಡೆದಿದ್ದಾರೆ ಎಂದು ಅವರು ಹೇಳಿದರು.

ದಕ್ಷಿಣ ಕ್ಷೇತ್ರದಲ್ಲಿ ಸುಮಾರು 70 ಸಾವಿರ ಮತಗಳ ಗುರಿಯೊಂದಿಗೆ ನಮ್ಮ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಶ್ರಮ ಹಾಕಿದ್ದರು. ನಮ್ಮ ಪ್ರಯತ್ನ ಎಲ್ಲೋ ಒಂದಿಷ್ಟು ಕಡಿಮೆಯಾಯಿತು ಅನಿಸುತ್ತದೆ. ಆಡಳಿತ ಪಕ್ಷದ ಹಣ ಬಲದ ಬಗ್ಗೆ ನಾನು ಮಾತನಾಡುವುದಿಲ್ಲ. ಶ್ರೀನಿವಾಸ ಇಲ್ಲಿ ಶಕ್ತಿ ಮೀರಿ, ಗೆಲ್ಲಲೇಬೇಕೆಂದು ಹಠ ತೊಟ್ಟು, ಸಂಘಟನೆ, ಸಹಕಾರದಲ್ಲಿ ಒಳ್ಳೆಯ ಚುನಾವಣೆ ಮಾಡಿದ್ದಾರೆ. ಎಲ್ಲೋ ಒಂದು ಕಡೆ ನಮ್ಮ ಅದೃಷ್ಟ ಕೈಹಿಡಿಯಲಿಲ್ಲ. ಕಳೆದ ಬಾರಿ ಬಿ.ಜಿ.ಅಜಯಕುಮಾರ ಸಹ ಸಾಕಷ್ಟು ಶ್ರಮ ಹಾಕಿದ್ದರು. ಶ್ರೀನಿವಾಸ, ಅಜಯಕುಮಾರ ಇಬ್ಬರ ನಡವಳಿಕೆ ಗಮನಿಸಿದ್ದೇನೆ. ಜನಾನುರಾಗಿ ವ್ಯಕ್ತಿತ್ವ ಗಮನಿಸಿದ್ದೇವೆ. ಬರುವ ದಿನಗಳು ಬಿಜೆಪಿ ದಿನಗಳೆಂದಷ್ಟೇ ಹೇಳಬಲ್ಲೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಪಶ್ಚಿಮ ಬಂಗಾಳದಲ್ಲಿ ಒಬ್ಬ ಬಿಜೆಪಿ ಶಾಸಕನನ್ನೂ ಗೆಲ್ಲಿಸುತ್ತೇವೆ ಎಂದುಕೊಂಡಿರಲಿಲ್ಲ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ 15 ವರ್ಷ ಆಡಳಿತ, ಮಮತಾ ಸೇರಿದಂತೆ ಆ ಪಕ್ಷದವರು ಸೊಕ್ಕು, ಅಧಿಕಾರ ಮದದಿಂದ ತೇಲುತ್ತಿದ್ದರು. ಹಿಂದೂಗಳಿಗೆ ಅವಮಾನಿಸುವ ಕೆಲಸವನ್ನು ಪಶ್ಚಿಮ ಬಂಗಾಳದಲ್ಲಿ ಮಾಡಲಾಗುತ್ತಿತ್ತು. ಅದನ್ನೆಲ್ಲಾ ಮೆಟ್ಟಿ ನಿಂತು, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಜನಪ್ರಿಯರೆ, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್‌, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಗೆಲುವು ಸಾಧ್ಯವಾಗಿದೆ. ಅದೇ ರೀತಿ ಬದಲಾವಣೆ ನಮ್ಮ ರಾಜ್ಯದಲ್ಲೂ ಇನ್ನು 2 ವರ್ಷದಲ್ಲೇ ಆಗಲಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಂ.ಬಸವರಾಜ ನಾಯ್ಕ, ಮಾಜಿ ಮೇಯರ್ ಬಿ.ಜಿ. ಅಜಯಕುಮಾರ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಪಿ.ಸಿ. ಶ್ರೀನಿವಾಸ ಭಟ್, ದೊಗ್ಗಳ್ಳಿ ವೀರೇಶ, ಎನ್‌.ಎಂ. ಮುರುಗೇಶ, ಧನಂಜಯ ಕಡ್ಲೇಬಾಳು, ಗಣೇಶ ಟಿ.ದಾಸಕರಿಯಪ್ಪ, ಶ್ರೀಮತಿ ದಾಸಕರಿಯಪ್ಪ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬ ವರ್ಗ, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

- - -

(ಬಾಕ್ಸ್‌)

* ಚುನಾವಣೆಯಲ್ಲಿ ತಂತ್ರ, ಕುತಂತ್ರ ಸಹಜ: ವಿಜಯೇಂದ್ರ ಚುನಾವಣೆಯೆಂದರೆ ತಂತ್ರಗಾರಿಕೆ, ಕುತಂತ್ರಗಾರಿಕೆ ಇದ್ದೇ ಇರುತ್ತದೆ. ಅದರಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ದಕ್ಷಿಣ ಕ್ಷೇತ್ರದ 8 ಗ್ರಾಪಂ ವ್ಯಾಪ್ತಿಯಲ್ಲಿ ಬಿಜೆಪಿಗೆ ಅತೀ ಲೀಡ್ ಆಗಬೇಕಾಗಿತ್ತು. ಒಳ ಏಟು ಏನಿಲ್ಲ. ಗ್ರಾಮೀಣ ಭಾಗದಲ್ಲಿ 5 ಸಾವಿರ ಲೀಡ್ ನಿರೀಕ್ಷೆ ಇತ್ತು. 1400 ಲೀಡ್ ಆಗಿದೆ. ದಾವಣಗೆರೆ, ಬಾಗಲಕೋಟೆಯಲ್ಲಿ ನಮ್ಮ ಸಂಘಟನೆ ಬಲಿಷ್ಠವಾಗಿದೆ. ಇದಕ್ಕಿಂತಲೂ ಹೆಚ್ಚು ವ್ಯವಸ್ಥಿತವಾಗಿ ಮಾಡಲು ಸಾಧ್ಯವಿಲ್ಲ. ಶಿಕಾರಿಪುರದಲ್ಲೂ ನಾವು ಇಷ್ಟೊಂದು ರೀತಿ ಚುನಾವಣೆ ಮಾಡಿರಲಿಲ್ಲ. ನಿತ್ಯ ಬೆಳಗ್ಗೆ 7 ಗಂಟೆಗೆ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ನಮ್ಮ ಮುಖಂಡರು, ಕಾರ್ಯಕರ್ತರು ಕೂಡುತ್ತಿದ್ದರು. ನಿನ್ನೆ ದಿನ ಟಾರ್ಗೆಟ್‌ ಬಗ್ಗೆ ಚರ್ಚಿಸಿ, ಇವತ್ತು ಎಷ್ಟು ಹಳ್ಳಿ ಭೇಟಿ ಅಂತಾ ವ್ಯವಸ್ಥಿತವಾಗಿ ಪ್ಲಾನ್ ಮಾಡುತ್ತಿದ್ದರು. ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರು ಶೇ.100 ಶ್ರಮ ಹಾಕಿದ್ದು, ಅದರಲ್ಲಿ ಚ್ಯುತಿಯಾಗಿಲ್ಲ ಎಂದು ಬಿ.ವೈ.ವಿಜಯೇಂದ್ರ ಅಭಿಪ್ರಾಯಪಟ್ಟರು.

- - -

-(ಫೋಟೋಗಳಿವೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಂಚಮಸಾಲಿ ಸಮಾಜದ ಸಂಕಲ್ಪ ಈಡೇರಿಸದ ಟ್ರಸ್ಟ್
ಗುಡಾಳ್‌ನಲ್ಲಿ ನೀರಿನ ಬವಣೆ ನೀಗಿಸಿದ ಶಾಸಕ ಬಸವಂತಪ್ಪ