ನಾಗಭೂಷಣ ಕನ್ನಡಪ್ರಭ ವಾರ್ತೆ ತುರುವೇಕೆರೆ
ತಮಿಳುನಾಡಿನಲ್ಲಿ ಟಿವಿಕೆ ಸುಮಾರು 107 ಸ್ಥಾನಗಳಲ್ಲಿ ಜಯಭೇರಿ ಗಳಿಸಿದೆ. ರಾಜ್ಯದ ಅತಿ ಹೆಚ್ಚು ಸ್ಥಾನ ಪಡೆದು ಪ್ರಧಾನ ಪಕ್ಷವಾಗಿದೆ. ಈ ಪಕ್ಷದಲ್ಲಿ ಶಾಸಕರಾಗಿರುವವರಲ್ಲಿ ಒಬ್ಬರು ನಮ್ಮ ತಾಲೂಕಿನ ಕುಡಿ ಸುನೀಲ್ ಆನಂದ್ ಸಹ ಒಬ್ಬರು. ತಮಿಳುನಾಡಿನ ಮೆಟ್ಟುಪಾಳ್ಯಂನ ವಿಧಾನಸಭಾ ಕ್ಷೇತ್ರದಿಂದ ಟಿವಿಕೆ ಪಕ್ಷದಿಂದ ಸ್ಪರ್ಧಿಸಿದ್ದ ಸುನೀಲ್ ಆನಂದ್ ರವರ ಅಜ್ಜನ ಊರು ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹೊಡಿಕೇಘಟ್ಟ. ಹಲವು ದಶಕಗಳ ಹಿಂದೆ ನಿಂಗೇಗೌಡರು ತಮಿಳುನಾಡಿಗೆ ವಲಸೆ ಹೋಗಿದ್ದರು. ತದ ನಂತರದ ದಿನಗಳಲ್ಲಿ ಅಲ್ಲೇ ತಮ್ಮ ಜೀವನ ಸಾಗಿಸಿದರು. ನಿಂಗೇಗೌಡರ ಮಗ ಎಚ್.ಎನ್.ನಾಗರಾಜು ರವರ ಮಗನೇ ಈಗ ಮೇಟಿಪಾಳ್ಯಂ ನ ಶಾಸಕರಾಗಿರುವ ಸುನಿಲ್ ಆನಂದ್.
ಸುನಿಲ್ ಆನಂದ್ ಹೋಟೆಲ್ ಸೇರಿದಂತೆ ವಿವಿಧ ವ್ಯವಹಾರಗಳ ಉದ್ಯಮಿಯಾಗಿದ್ದಾರೆ. ಸುನಿಲ್ ಆನಂದ್ ಗ್ರಾಮದಲ್ಲಿ ನಡೆಯುವ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಬಂಧಿಗಳ ಕಾರ್ಯಕ್ರಮಗಳಿಗೆ ಭಾಗವಹಿಸುವರು ಎಂದು ಸುನಿಲ್ ಆನಂದ್ ಗೆ ಸಂಬಂಧಿಕರೂ ಆಗಿರುವ ಇಲ್ಲಿಯ ಮಾಜಿ ಶಾಸಕ ಎಚ್.ಬಿ.ನಂಜೇಗೌಡ ತಿಳಿಸಿದ್ದಾರೆ. ಸುನಿಲ್ ರವರ ತಾಯಿಯ ತಂದೆಯವರಾದ ಲಿಂಗಪ್ಪನವರು ಮೈಸೂರಿನ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಸ್ಮರಣಾರ್ಥ ಮೈಸೂರಿನ ಒಂಟಿಕೊಪ್ಪಲ್ ಬಳಿ ಮೇಯರ್ ಲಿಂಗಪ್ಪ ವೃತ್ತ ವನ್ನು ನಿರ್ಮಿಸಲಾಗಿದೆ ಎಂದೂ ಸಹ ತಿಳಿಸಿದ್ದಾರೆ. ಒಟ್ಟಿನಲ್ಲಿ ಸುನಿಲ್ ಆನಂದ್ ರವರಿಗೆ ರಾಜಕೀಯ ಕ್ಷೇತ್ರದ ನಂಟಿದೆ. ಸುನಿಲ್ ಆನಂದ್ ರವರು ಪ್ರಥಮ ಪ್ರಯತ್ನದಲ್ಲೇ ಶಾಸಕರಾಗಿದ್ದಾರೆ. ಟಿವಿಕೆ ಪಕ್ಷದ ನಾಯಕ ವಿಜಯ್ ರವರೊಂದಿಗೆ ಉತ್ತಮ ಬಾಂಧವ್ಯ ಸಹ ಇದೆ. ವಿಜಯ್ ರವರ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗುವ ಯೋಗವೂ ಇದೆ ಎಂಬ ಭರವಸೆ ಇದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.ಹಾಗೇನಾದರೂ ವಿಜಯ್ ರವರ ಸಚಿವ ಸಂಪುಟದಲ್ಲಿ ಸುನಿಲ್ ಆನಂದ್ ಮಂತ್ರಿ ಆದರೆ ತಾಲೂಕಿನ ಕುಡಿಯೊಂದು ಬೇರೊಂದು ರಾಜ್ಯದಲ್ಲಿ ಮಂತ್ರಿ ಆದ ಹೆಮ್ಮೆ ಆಗುತ್ತದೆ. ಅಲ್ಲದೇ ನಮ್ಮ ತಾಲೂಕಿನಲ್ಲಿ ಕಳೆದ ಐವತ್ತು ಅರವತ್ತು ವರ್ಷಗಳ ಹಿಂದೆ ತಾಳಕೆರೆ ಸುಬ್ರಹ್ಮಣ್ಯಂ ರವರು ಸಚಿವರಾಗಿದ್ದು ಬಿಟ್ಟರೆ ಇವತ್ತಿನವರೆಗೂ ಯಾರೊಬ್ಬರೂ ಮಂತ್ರಿ ಆಗಿಲ್ಲ. ಸುನಿಲ್ ಆನಂದ್ ಮಂತ್ರಿ ಆದರೆ 50-60 ವರ್ಷಗಳ ನಂತರ ನಮ್ಮ ತಾಲೂಕಿನವರೊಬ್ಬರು ಬೇರೊಂದು ರಾಜ್ಯದ ಮಂತ್ರಿ ಆದರು ಎಂಬ ಸಂತೋಷ ಮನೆ ಮಾಡಲಿದೆ.