ಕನ್ನಡಪ್ರಭ ವಾರ್ತೆ ಹಾಸನ
ಇದೇ ವೇಳೆ ಮಾಧ್ಯಮದೊಂದಿಗೆ ಸಂಘದ ಮುಖಂಡರಾದ ಮೀಸೆ ಮಂಜಣ್ಣ ಮತ್ತು ತಾಲೂಕು ಅಧ್ಯಕ್ಷ ಶಿವಣ್ಣ ಸೊಪ್ಪಿನಹಳ್ಳಿ ಮಾತನಾಡಿ, ಮುಂಗಾರುಮಳೆ ಆರಂಭವಾಗುತ್ತಿದ್ದಂತೆ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಕೈಗೊಂಡಿದ್ದು, ಅನೇಕರು ತಮ್ಮ ಚಿನ್ನಾಭರಣಗಳನ್ನು ಗಿರವಿ ಇಟ್ಟು ಅಥವಾ ಸಾಲ ಮಾಡಿ ಬಿತ್ತನೆ ಬೀಜ, ಕೀಟನಾಶಕ ಹಾಗೂ ಇತರೆ ಕೃಷಿ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ದೊರೆಯದಿರುವುದು ರೈತರಲ್ಲಿ ತೀವ್ರ ಆತಂಕ ಉಂಟುಮಾಡಿದೆ ಎಂದರು.
ಪ್ರಸ್ತುತ ಸರ್ಕಾರಿ ಮಾರಾಟ ಕೇಂದ್ರಗಳು ಹಾಗೂ ಸಹಕಾರ ಸಂಘಗಳಲ್ಲಿ ಒಂದು ಎಕರೆಗೆ ಕೇವಲ ಒಂದು ಚೀಲ ರಸಗೊಬ್ಬರ ಮಾತ್ರ ವಿತರಿಸಲಾಗುತ್ತಿದ್ದು, ಇದು ಯಾವುದೇ ಬೆಳೆಗೆ ಸಾಕಾಗುವುದಿಲ್ಲ. ಭತ್ತ, ಮೆಕ್ಕೆಜೋಳ, ಶುಂಠಿ, ಅರಿಶಿನ, ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ಹೆಚ್ಚಿನ ಪ್ರಮಾಣದ ರಸಗೊಬ್ಬರ ಅಗತ್ಯವಿದ್ದು, ಸಮರ್ಪಕ ಪೂರೈಕೆಯ ಕೊರತೆಯಿಂದ ಬೆಳೆಗಳ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಘ ಎಚ್ಚರಿಸಿದರು. ರಸಗೊಬ್ಬರ ಕೊರತೆಯನ್ನು ದುರುಪಯೋಗಪಡಿಸಿಕೊಂಡು ಕೆಲ ಖಾಸಗಿ ಮಾರಾಟಗಾರರು ಹೆಚ್ಚಿನ ದರ ವಸೂಲಿ ಮಾಡುವ ಹಾಗೂ ರೈತರ ಮೇಲೆ ಅನಗತ್ಯ ಷರತ್ತುಗಳನ್ನು ವಿಧಿಸುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇದರಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.ಜಿಲ್ಲಾಡಳಿತವು ತಕ್ಷಣ ಮಧ್ಯಪ್ರವೇಶಿಸಿ ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರವನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಯಾವುದೇ ಮಿತಿ ವಿಧಿಸದೆ ಬೆಳೆಗಳ ಅವಶ್ಯಕತೆಗೆ ಅನುಗುಣವಾಗಿ ಸಮರ್ಪಕ ಪ್ರಮಾಣದಲ್ಲಿ ರಸಗೊಬ್ಬರ ವಿತರಿಸಬೇಕು. ಜೊತೆಗೆ ಕಾಳಸಂತೆ, ಕೃತಕ ಅಭಾವ ಸೃಷ್ಟಿ ಹಾಗೂ ಅಕ್ರಮ ದಾಸ್ತಾನು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮತ್ತು ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಂಡು ರಸಗೊಬ್ಬರ ಸಮಸ್ಯೆಯನ್ನು ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ರೈತರೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳುವ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದರು.