ಕನ್ನಡಪ್ರಭ ವಾರ್ತೆ ಮಂಗಳೂರು ದ.ಕ. ಜಿಲ್ಲಾದ್ಯಂತ ನವರಾತ್ರಿ ಕಳೆದು ಅ.24ರಂದು ವಿಜಯದಶಮಿಯ ಸಂಭ್ರಮ. ವಿಶ್ವವಿಖ್ಯಾತ ಮಂಗಳೂರು ದಸರಾದ ವೈಭವದ ಮೆರವಣಿಗೆ, ಮಂಗಳಾದೇವಿ ಜಾತ್ರೆ, ರಥಬೀದಿ ಶಾರದಾ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಸಾಕ್ಷಿಯಾಗಲಿದ್ದಾರೆ. ಕುದ್ರೋಳಿ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿರುವ ಶಾರದಾ ದೇವಿಗೆ ಮಹಾಮಂಗಳಾರತಿ ನೆರವೇರಿಸಿ, ಅ.24ರಂದು ಸಂಜೆ 4 ಗಂಟೆಗೆ ಮೆರವಣಿಗೆ ಹೊರಡಲಿವೆ. ರಾಜ್ಯದ ವಿವಿಧೆಡೆಗಳ ವಾದ್ಯ, ಬ್ಯಾಂಡ್, ಕಲಾತಂಡಗಳು, ಟ್ಯಾಬ್ಲೊಗಳು ಮೆರವಣಿಗೆಗೆ ಶೋಭೆ ನೀಡಲಿವೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 75 ಟ್ಯಾಬ್ಲೊಗಳು ವಿಶೇಷ ಮೆರುಗು ನೀಡಲಿವೆ. ಈಗಾಗಲೇ ಈ ಶೋಭಾಯಾತ್ರೆಗಾಗಿ ನಗರದ ಪ್ರಮುಖ ಬೀದಿಗಳನ್ನು ವಿದ್ಯುದ್ದೀಪಗಳಿಂದ ಸಿಂಗರಿಸಲಾಗಿದೆ. ಸುಮಾರು 7 ಕಿ.ಮೀ. ಈ ಶೋಭಾಯಾತ್ರೆ ನಡೆದು ಕುದ್ರೋಳಿಯ ಪುಷ್ಕರಿಣಿಯಲ್ಲಿ ವಿಸರ್ಜನಾ ಮಹೋತ್ಸವ ನಡೆಯಲಿದೆ. 24ರಂದು ಮಂಗಳಾದೇವಿ ರಥೋತ್ಸವ: ನಗರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಅ.೧೫ರಿಂದ ಆರಂಭಗೊಂಡಿರುವ ನವರಾತ್ರಿ ಮಹೋತ್ಸವ ಅ.೨೫ರವರೆಗೆ ನಡೆಯಲಿದೆ. ಅ.೨೪ರಂದು ವಿಜಯ ದಶಮಿ ದಿನದಂದು ಬೆಳಗ್ಗೆ ೯.೩೦ರಿಂದ ವಿದ್ಯಾರಂಭ ಹಾಗೂ ತುಲಾಭಾರ ಸೇವೆ ನಡೆಯಲಿದೆ. ಅಂದು ಬೆಳಗ್ಗೆ ೮ ಗ್ರಾಮಗಳ ಜನರಿಗೆ ತೆನೆ ನೀಡಲಾಗುತ್ತದೆ. ಮಧ್ಯಾಹ್ನ ೧೨.೩೦ಕ್ಕೆ ರಥಾರೋಹಣ ಹಾಗೂ ಸಂಜೆ ೭ ಗಂಟೆಗೆ ರಥೋತ್ಸವ ನಡೆಯಲಿದೆ. ರಥಬೀದಿ ಶಾರದೋತ್ಸವ: ರಥಬೀದಿ ಶಾರದಾ ಮಹೋತ್ಸವವು ಅ.18ರಂದು ಆರಂಭಗೊಂಡಿದ್ದು, ಅ.25ರವರೆಗೆ ನಡೆಯಲಿದೆ. ಇಲ್ಲಿ ಅ.25ರಂದು ರಾತ್ರಿ 8 ಗಂಟೆಗೆ ಶಾರದಾ ಮಾತೆಯ ಬೃಹತ್ ವಿಸರ್ಜನಾ ಮಹೋತ್ಸವ ನಡೆಯಲಿದೆ. ಮಹಾಮಾಯಾ ತೀರ್ಥದಲ್ಲಿ ವಿಸರ್ಜನಾ ಕಾರ್ಯ ನಡೆಯಲಿದೆ.