ಶಿಕ್ಷಣದಿಂದ ಮಾತ್ರ ನ್ಯಾಯ ಒದಗಿಸಲು ಸಾಧ್ಯ: ಶಿವರಾಜ್ ತಂಗಡಗಿ

KannadaprabhaNewsNetwork | Published : Jun 26, 2024 12:31 AM

ಸಾರಾಂಶ

ಪ್ರತಿಯೊಬ್ಬರು ತಮ್ಮ ಸಮಾಜವನ್ನು ಬೆಳೆಸಲು ಮೊದಲು ಮಕ್ಕಳಿಗೆ ಶಿಕ್ಷಣ ನೀಡಬೇಕು.

₹೫೦ ಲಕ್ಷ ವೆಚ್ಚದ ಶ್ರೀಗಾದಿಲಿಂಗೇಶ್ವರ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದ ಸಚಿವ

ಕನ್ನಡಪ್ರಭ ವಾರ್ತೆ ಕಾರಟಗಿ

ಪ್ರತಿಯೊಬ್ಬರು ತಮ್ಮ ಸಮಾಜವನ್ನು ಬೆಳೆಸಲು ಮೊದಲು ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಕ್ಕಳಿಗೆ ಅರಿವಿನ ಶಿಕ್ಷಣ ಮತ್ತು ಕಲಿಕೆಯ ಶಿಕ್ಷಣ ನೀಡಿದರೆ ಮಾತ್ರ ಈ ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಕರೆ ನೀಡಿದರು.

ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಮಂಗಳವಾರ ₹೫೦ ಲಕ್ಷ ವೆಚ್ಚದ ಶ್ರೀಗಾದಿಲಿಂಗೇಶ್ವರ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅತ್ಯಂತ ಬಡವರಿಗೆ ಅನುಕೂಲವಾಗುತ್ತಿದೆ. ಹೀಗಾಗಿ ನಿಮ್ಮ ಮಕ್ಕಳನ್ನು ದುಡಿಯಲು ಕಳುಹಿಸುವ ಬದಲು ಮೊದಲು ಶಾಲೆಗೆ ಕಳುಹಿಸಿ ಶಿಕ್ಷಣ ಕೊಡಿಸಿ. ಆ ಮೂಲಕ ನೀವು ಎಷ್ಟೇ ಬಡವರಾದರೂ ಈ ಸಮಾಜದ ಒಳತಿಗಾಗಿ ಮುಂದಿನ ಪೀಳಿಗೆ ಉನ್ನತಿಗಾಗಿ ನೀವು ದೇಶಕ್ಕೆ, ಸಮಾಜಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟಂತಾಗುತ್ತದೆ. ನಿಮ್ಮ ಮಕ್ಕಳಿಗೆ ಶಾಲೆ ಕಳುಹಿಸುವುದರಿಂದ ಮುಂದೆ ಸಮಾಜ ಬೆಳೆಯುತ್ತದೆ ಎಂದರು.

ಹಾಲುಮತ ಸಮಾಜದ ಮುಖಂಡ ಸಿದ್ದಪ್ಪ ನಿರ್ಲೂಟಿ ಮಾತನಾಡಿ, ಸಚಿವ ಶಿವರಾಜ್ ತಂಗಡಗಿ ಮೂರನೇ ಬಾರಿ ಸಚಿವರಾಗಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟಿದ್ದಾರೆ. ತಮ್ಮದೇ ಟ್ರಸ್ಟಿನಿಂದ ಶಾಲೆಗಳಿಗೆ ಪುಸ್ತಕ ವಿತರಣೆ ಮಾಡಿದ್ದಾರೆ. ಜೊತೆಗೆ ಕುರುಬರ ಸಮಾಜಕ್ಕೆ ಹೆಚ್ಚು ಅನುದಾನಗಳ ಕೊಡುವುದರ ಮೂಲಕ ಅಭಿವೃದ್ಧಿ ಕೆಲಸವನ್ನು ನಿರಂತರ ಮಾಡುತ್ತಿದ್ದಾರೆ ಎಂದರು.

ಜಿಪಂ ಮಾಜಿ ಉಪಾಧ್ಯಕ್ಷ ಬಿ. ಬಸವರಾಜಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಉಪಾಧ್ಯಕ್ಷ ಜನಗಂಡೆಪ್ಪ, ಆರ್‌ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪಂಪಾಪತಿ ಎಸ್. ಸಿಂಗನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾ.ಪಾ, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್, ಬಸವರಾಜ ನೀರಗಂಟಿ, ಗ್ರಾಪಂ ಅಧ್ಯಕ್ಷೆ ಮಂಗಳಮ್ಮ, ಸುರೇಶ್ ಗೋನಾಳ, ಯಮನೂರಪ್ಪ ಬೂಪರ್, ಗ್ರಾಮ ಪಂಚಾಯಿತಿ, ಸದಸ್ಯರು ಇದ್ದರು.

Share this article